Site icon Vistara News

child thives | ಮಕ್ಕಳ ಕಳ್ಳರ ವದಂತಿಯಿಂದ ಕಂಗೆಟ್ಟ ಹಾವೇರಿ ಜನ, ಭಯದಿಂದ ಕಂಡ ಕಂಡವರಿಗೆಲ್ಲ ಥಳಿತ

Chid theft

ಸುರೇಶ್‌ ನಾಯ್ಕ, ವಿಸ್ತಾರ ನ್ಯೂಸ್‌ ಹಾವೇರಿ
ಕಳೆದೊಂದು ವಾರದಿಂದ ಹಾವೇರಿ ಜಿಲ್ಲೆಯಲ್ಲಿ ಮಕ್ಕಳ‌ ಕಳ್ಳರದ್ದೇ ಸುದ್ದಿ (Child thieves) ಶಾಲೆ ಅಕ್ಕ ಅಕ್ಕಪಕ್ಕದಲ್ಲಿ ಯಾರಾದರೂ ಅಪರಿಚಿತರು ಕಂಡರೆ ಸಾಕು, ಸಾರ್ವಜನಿಕರು ಅವರನ್ನ ಹಿಗ್ಗಾಮುಗ್ಗಾ ಥಳಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮಕ್ಕಳ ಕಳ್ಳತನದ ವದಂತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪಾಲಕರು ಆತಂಕಗೊಂಡಿದ್ದಾರೆ. ಸವಣೂರು ತಾಲೂಕು ತವರಮೆಳ್ಳಿಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಸ್ಥಳೀಯರು ಕೂಡಿಹಾಕಿ ಥಳಿಸಿದ್ದಾರೆ. ಬಂಕಾಪುರ, ಶಿಗ್ಗಾಂವ್, ನೆಲೋಗಲ್ಲ, ದೇವಗಿರಿ ಗ್ರಾಮಗಳಲ್ಲೂ ಮಕ್ಕಳ ಕಳ್ಳರೆಂದು ಭ್ರಮಿಸಿ ಹಲವರನ್ನು ಹಿಡಿದು ಥಳಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಳೆದ ಕೆಲವು ದಿನಗಳಿಂದ ಮಕ್ಕಳ ಕಳ್ಳರ ವದಂತಿ ಜಿಲ್ಲಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಯಾವುದೋ ರಾಜ್ಯದಲ್ಲಿ ನಡೆದ ಘಟನೆಗಳ ವಿಡಿಯೊವನ್ನು ಇಲ್ಲಿಯೇ ಆಗಿದ್ದು ಎಂಬ ರೀತಿ ಬಿಂಬಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಮಕ್ಕಳ ಕಳ್ಳರ ಭಯ ಹೆಚ್ಚಿದೆ. ಸಂಶಯಾಸ್ಪದವಾಗಿ ಕಾಣುವ ವ್ಯಕ್ತಿಗಳನ್ನು ವಿಚಾರಿಸುತ್ತಿದ್ದಾರೆ. ಕೂಡಿ ಹಾಕಿ ಥಳಿಸುತ್ತಿದ್ದಾರೆ. ಕೆಲವು ಗ್ರಾಮಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲೂ ಪಾಲಕರು ಹೆದರುತ್ತಿದ್ದಾರೆ.

ಮಹಿಳೆಯನ್ನು ಕೂಡಿ ಹಾಕಿ ಹಲ್ಲೆ
ಸವಣೂರು ತಾಲೂಕಿನ ತವರಮೆಳ್ಳಿ ಹಳ್ಳಿಯಲ್ಲಿ ಗುರುವಾರ ಮಹಿಳೆಯೊಬ್ಬಳು ಮಕ್ಕಳನ್ನು ಕಳ್ಳತನ ಮಾಡಲು ಬಂದಿದ್ದಾಳೆ ಎಂದು ಗ್ರಾಮಸ್ಥರು ಆಕೆಯನ್ನು ಕೂಡಿಹಾಕಿ ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವಿಚಾರಿಸಿದಾಗ ಆಕೆ ತಾನು ಬೆಂಗಳೂರಿನ ಮಡಿವಾಳದವಳಾಗಿದ್ದು, ಸೀತಾ, ಅನಿತಾ ಎಂದು ಬೇರೆ ಬೇರೆ ಹೆಸರು ಹೇಳಿಕೊಂಡಿದ್ದಾಳೆ. ಆಕೆ ಮಾನಸಿಕ ಅಸ್ವಸ್ಥಳಂತೆ ಕಾಣುತ್ತಿದ್ದು, ಆಕೆಯ ಕೈಚೀಲ ಪರಿಶೀಲಿಸಿದಾಗ ಯಾವುದೇ ಸಂಶಯಾಸ್ಪದ ವಸ್ತು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಗ್ರಾಪಂ ಕಚೇರಿ ಮುಂದೆ ಸೇರಿದ ಜನರು.

ಯುವಕ, ಮಾನಸಿಕ ಅಸ್ವಸ್ಥನಿಗೂ ಹೊಡೆತ
ತಾಲೂಕಿನ ನೆಲೋಗಲ್ಲ ಗ್ರಾಮದಲ್ಲಿ ಕೂಡಾ ಮಕ್ಕಳ ಕಳ್ಳನೆಂದು ವ್ಯಕ್ತಿಯೊಬ್ಬನಿಗೆ ಗ್ರಾಮಸ್ಥರು ಥಳಿಸಿರುವ ವಿಡಿಯೊ ಹರಿದಾಡುತ್ತಿದೆ. ಆತನಲ್ಲಿದ್ದ ಯಾವುದೋ ಪೌಡರ್‌ ಅನ್ನು ಆತನಿಗೇ ಮೂಸಲು ಹೇಳಿದಾಗ ಆತ ಮೂರ್ಛೆ ಹೋಗಿದ್ದಾನೆ ಎಂದು ಹೇಳಲಾಗುತ್ತಿದೆ. ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲೂ ಮಕ್ಕಳ ಕಳ್ಳರು ಬಂದಿರುವ ವದಂತಿ ಹಬ್ಬಿದೆ. ಶಿಗ್ಗಾಂವ್ ಪಟ್ಟಣದಲ್ಲಿ ಶುಕ್ರವಾರ ಮೂರ್ನಾಲ್ಕು ದಿನದಿಂದ ಊಟ ಸಿಗದೆ ಹಸಿವಿನಿಂದ ಬಳಲಿದ್ದ ಮಾನಸಿಕ ಅಸ್ವಸ್ಥನನ್ನು ಥಳಿಸಲಾಗಿದೆ. ಇಂತಹ ಘಟನೆಗಳಿಂದ ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ಭಯ ಹೆಚ್ಚಿದೆ.

ಮಕ್ಕಳ ಕಳ್ಳರೆಂದು ಅಪರಿಚಿತರನ್ನು ಸಾರ್ವಜನಿಕರು ಒಂದು ಕಡೆ ಥಳಿಸುತ್ತಿದ್ದರೆ ಮತ್ತೊಂದೆಡೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವ ವದಂತಿ ಜಿಲ್ಲೆಯ ಜನರನ್ನು ನಿದ್ದೆಗೆಡಿಸಿದೆ.

ಹನುಮಂತರಾಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಯಾವುದೇ ಘಟನೆ ನಡೆದಿಲ್ಲ, ಅನಗತ್ಯವಾಗಿ ಥಳಿಸದಿರಿ
ಜಿಲ್ಲೆಯಲ್ಲಿ ಮಕ್ಕಳ ಕಳ್ಳತನದ ಯಾವುದೇ ಘಟನೆ ನಡೆದಿಲ್ಲ. ಮಕ್ಕಳ ಕಳ್ಳರ ವದಂತಿ ಬಗ್ಗೆ ಸಾರ್ವಜನಿಕರು ಕಿವಿಗೊಡದೆ, ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ. ಮಾನಸಿಕ ಅಸ್ವಸ್ಥರೇ ಇಂಥ ಘಟನೆಗಳಲ್ಲಿ ಹೆಚ್ಚು ಸಂಕಷ್ಟಕ್ಕೆ ಒಳಗಾಗುತ್ತಿರುವುದು ಬೆಳಕಿಗೆ ಬಂದಿದೆ. ಯಾರ ಮೇಲಾದರೂ ಸಂಶಯ ಬಂದರೆ ದಯವಿಟ್ಟು ಪೊಲೀಸರಿಗೆ ತಿಳಿಸಿದ್ದು ತಾವೇ ವಿಚಾರಣೆ ಮಾಡುವುದಾಗಿ ಹೇಳಿದ್ದಾರೆ.

Exit mobile version