Site icon Vistara News

Child trade : IVFಗೆ ಗಾರ್ಮೆಂಟ್ಸ್‌ ಯುವತಿಯರ ಅಂಡಾಣು!; ಮಕ್ಕಳ ಮಾರಾಟ ಗ್ಯಾಂಗ್‌ ಕರಾಮತ್ತು

Child trade in Bangalore

ಬೆಂಗಳೂರು: ಬೆಂಗಳೂರಿನಲ್ಲಿ ಬಯಲಾಗಿರುವ ಮಕ್ಕಳ ಮಾರಾಟ ಜಾಲದ (Child trade) ಭಯಾನಕ ಕೃತ್ಯಗಳು ಒಂದರ ಹಿಂದೊಂದರಂತೆ ಬಯಲಾಗುತ್ತಿವೆ. ಕಳೆದ ಹಲವು ವರ್ಷಗಳಿಂದ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರದಲ್ಲಿ ಮಕ್ಕಳನ್ನು ಮಾರಾಟ ಮಾಡುವ ಜಾಲ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಲಾಗಿದ್ದು, ಇವರ ಪೈಕಿ ಎಂಟು ಮಂದಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಇವರ ಪೈಕಿ ಒಬ್ಬಾಕೆ ಮಗುವನ್ನು ಮಾರಾಟ ಮಾಡಿದವಳಾಗಿದ್ದರೆ, ಉಳಿದವರು ಮಾರಾಟ ಜಾಲದವರು.

ಈ ಗ್ಯಾಂಗ್‌ ಮಕ್ಕಳ ಬೇಡಿಕೆ ಇಡುವ ಗ್ರಾಹಕರು ಮತ್ತು ಮಕ್ಕಳನ್ನು ಹೆತ್ತು ಮಾರಾಟ ಮಾಡುವ ಬಡವರ ನಡುವೆ ಆಪರೇಷನ್‌ ನಡೆಸುತ್ತಿತ್ತು. ಅದರ ನಡುವೆ, ತಾನೇ ಕೃತಕ ಗರ್ಭಧಾರಣೆ (ಐವಿಎಫ್‌) ಮೂಲಕವೂ ಮಕ್ಕಳನ್ನು ಪಡೆಯುವ ತಂತ್ರಗಳನ್ನು ಮಾಡುತ್ತಿತ್ತು. ಇದಕ್ಕೆ ಗಾರ್ಮೆಂಟ್ಸ್‌ ಯುವತಿಯರನ್ನೂ ಬಳಸಿಕೊಳ್ಳಲಾಗುತ್ತಿದೆ ಎಂದೂ ಹೇಳಲಾಗಿದೆ.

ಸಾಮಾನ್ಯವಾಗಿ ಆಗಲೇ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದು, ಬಳಿಕ ಗರ್ಭಧಾರಣೆಯಾದ ಹಂತದಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಗರ್ಭಪಾತ ಮಾಡಿಸಲು ಮುಂದಾಗುವ ಬಡವರನ್ನೇ ಟಾರ್ಗೆಟ್‌ ಮಾಡುತ್ತಿತ್ತು ಈ ತಂಡ. ಅವರ ಮನವೊಲಿಸಿ ಅವರಿಗೆ ಹಣ ಕೊಡುವ ಆಮಿಷ ಒಡ್ಡಿ, ಮಕ್ಕಳನ್ನು ಹೆತ್ತು ತಮಗೆ ನೀಡುವಂತೆ ಮಾಡುತ್ತಿದ್ದರು.

ಈ ನಡುವೆ, ಐವಿಎಫ್‌ ತಂತ್ರಜ್ಞಾನದ ಮೂಲಕ ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆಯುವ ತಂತ್ರವೂ ಇವರಲ್ಲಿತ್ತು. ಇದಕ್ಕಾಗಿ ಹದಿಹರೆಯದ ಯುವತಿಯರ ಅಂಡಾಣುಗಳನ್ನು ಬಳಸಲಾಗುತ್ತಿತ್ತು ಎಂಬ ಮಾಹಿತಿ ಇದೆ. ಅದರಲ್ಲೂ ಮುಖ್ಯವಾಗಿ ಬಡತನದ ಕಾರಣಕ್ಕಾಗಿ ಅಂಡಾಣು ಮಾರಾಟಕ್ಕೆ ಮುಂದಾಗುವ ಗಾರ್ಮೆಂಟ್ಸ್‌ ಕಾರ್ಮಿಕ ಯುವತಿಯರನ್ನು ಈ ಟೀಮ್‌ ಟಾರ್ಗೆಟ್‌ ಮಾಡಿತ್ತು ಎನ್ನಲಾಗಿದೆ. ಸಣ್ಣ ವಯಸ್ಸಿನ ಹೆಣ್ಮಕ್ಕಳಲ್ಲಿ ಹೆಚ್ಚು ಫಲವಂತಿಕೆ ಇರುವ ಅಂಡಾಣುಗಳು ಇರುತ್ತವೆ. ಅವರ ಅಂಡಾಣುಗಳನ್ನು ಬಳಸಿಕೊಂಡು ಪುರುಷನೊಬ್ಬನ ವೀರ್ಯಾಣು ಬಳಸಿ ಭ್ರೂಣಗಳನ್ನು ಕೃತಕವಾಗಿ ಸೃಷ್ಟಿಸಿ ಅದನ್ನು ಬೇರೊಬ್ಬ ಹೆಣ್ಣಿನ ಹೊಟ್ಟೆಯಲ್ಲಿ ಬೆಳೆಸಲಾಗುತ್ತಿತ್ತು. ಇದೆಲ್ಲವೂ ಒಬ್ಬ ನುರಿತ ವೈದ್ಯರು ಮತ್ತು ತಂತ್ರಜ್ಞರ ಸಹಕಾರದಿಂದಲೇ ನಡೆಯುತ್ತಿತ್ತು ಎನ್ನಲಾಗಿದೆ. ಈ ರೀತಿ ಅಂಡಾಣು ಮಾರಾಟ ಮಾಡುವ ಯುವತಿಯರಿಗೆ ಒಳ್ಳೆಯ ಹಣ ಕೂಡಾ ನೀಡಲಾಗುತ್ತಿತ್ತು ಎನ್ನುವುದು ಸಿಸಿಬಿ ತನಿಖೆಯಿಂದ ಬಯಲಾಗಿದೆ.

ತಮಿಳುನಾಡಿನಿಂದ ಆಪರೇಟ್‌ ಮಾಡುತ್ತಿದ್ದ ತಂಡ

ಈಗ ಸಿಕ್ಕಿಬಿದ್ದಿರುವ ಎಂಟು ಮಂದಿಯ ತಂಡ, ತಮಿಳುನಾಡಿನಿಂದ ಪ್ರಮುಖವಾಗಿ ಕಾರ್ಯಾಚರಣೆ ಮಾಡುತ್ತಿತ್ತು. ಈ ತಂಡದಲ್ಲಿರುವ ರಾಧಾ ಎಂಬಾಕೆ ಈ ಹಿಂದೆ ತಮಿಳುನಾಡಿನ ಆಸ್ಪತ್ರೆಯಲ್ಲಿ ಬಾಡಿಗೆ ತಾಯ್ತನದ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಯಾರು ಮಗು ಬೇಕು ಅನ್ನುತ್ತಾರೆ, ಯಾರಿಗೆ ಬಾಡಿಗೆ ತಾಯ್ತನದ ಮೂಲಕ ಮಗು ಬೇಕು ಎನ್ನುವುದರ ಅರಿವು ಆಕೆಗೆ ಚೆನ್ನಾಗಿತ್ತು ಎನ್ನಲಾಗಿದೆ. ಮಹಾಲಕ್ಷ್ಮಿ ಎಂಬಾಕೆ ಕರ್ನಾಟಕದಲ್ಲಿ ಏಜೆಂಟ್‌ ಆಗಿದ್ದು, ತಮಿಳುನಾಡಿನ ಕೊಂಡಿಯಾಗಿದ್ದಾಳೆ.

ಈ ಟೀಮ್‌ ಮಕ್ಕಳ ಮಾರಾಟದಲ್ಲಿ ಬಣ್ಣ, ಲಿಂಗದ ಆಧಾರದಲ್ಲಿ ದರ ನಿರ್ಣಯ ಮಾಡುತ್ತಿದೆ. ತುಂಬ ಬೆಳ್ಳಗಿರುವ ಮಕ್ಕಳಾದರೆ, ಗಂಡು ಮಕ್ಕಳಾದರೆ ಹೆಚ್ಚು ಹಣ ಕೇಳಿದರೆ, ಹೆಣ್ಣು ಮಕ್ಕಳಿಗೆ ಸ್ವಲ್ಪ ಕಡಿಮೆ ದರ ಇರುತ್ತದೆ ಎನ್ನಲಾಗಿದೆ. ಗಂಡು ಮಕ್ಕಳನ್ನು ಐದರಿಂದ ಹತ್ತು ಲಕ್ಷಕ್ಕೆ ಮಾರಾಟ ಮಾಡಿದರೆ ಹೆಣ್ಣು ಮಕ್ಕಳಿಗೆ ನಾಲ್ಕುರಿಂದ ಐದು ಲಕ್ಷ ರೂ. ಇರುತ್ತದೆಯಂತೆ. ಮಗುವನ್ನು ಹೆತ್ತು ಕೊಡುವ ಮಹಿಳೆಯರಿಗೆ ಒಂದುವರೆಯಿಂದ ಎರಡು ಲಕ್ಷ ರೂ ನೀಡುತ್ತಾರೆ ಎನ್ನುವುದು ಸಿಸಿಬಿ ತನಿಖೆಯ ವೇಳೆ ಬಯಲಾಗಿದೆ.

Exit mobile version