ಕೊಪ್ಪಳ: ಗ್ರಾಮೀಣ ಭಾಗದ ಜನರು, ಬಡವರಿಗೆ ಅನುಕೂಲವಾಗಲಿ ಎಂದು ಜಿಲ್ಲಾಸ್ಪತ್ರೆಗಳನ್ನು ನಿರ್ಮಿಸಲಾಗಿರುತ್ತದೆ. ಸಣ್ಣ-ಪುಟ್ಟ ಕಾಯಿಲೆಗಳಿಂದ ಹಿಡಿದು, ಗಂಭೀರ ಕಾಯಿಲೆ, ಹೆರಿಗೆ ಸೇರಿ ಹಲವು ಕಾರಣಗಳಿಗಾಗಿ ಬಡವರು ಜಿಲ್ಲಾಸ್ಪತ್ರೆಗಳನ್ನೇ (District Hospitals) ನೆಚ್ಚಿಕೊಂಡಿರುತ್ತಾರೆ. ಆದರೆ, ಬಡವರು, ಗ್ರಾಮೀಣ ಭಾಗದ ಜನರಿಗೆ ನೆರವಾಗಬೇಕಿದ್ದ ಕೊಪ್ಪಳ ಜಿಲ್ಲಾಸ್ಪತ್ರೆಯು (Koppal District Hospital) ಕಂಟಕವಾಗಿ ಪರಿಣಮಿಸಿದೆ. ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯ ಬಳಿಕ ಮಗು ಸತ್ತಿದೆ ಎಂದು ಪೋಷಕರಿಗೆ ಸುಳ್ಳು ಹೇಳಿ, ಮಗುವಿನ ಮಾರಾಟ ಮಾಡುವ ಹೀನ ಕೃತ್ಯ ಬಯಲಾಗಿದೆ.
ಹೆರಿಗೆಗೆಂದು ಬರುವವರಿಗೆ ಹೆರಿಗೆ ಮಾಡಿಸುವ ನರ್ಸ್‌ಗಳು, ಬಳಿಕ ತಾಯಿಗೆ ನಿಮ್ಮ ಮಗು ತೀರಿಕೊಂಡಿದೆ ಎಂದು ಸುಳ್ಳು ಹೇಳಿ, ಆ ಮಗುವನ್ನು ಮಾರಾಟ ಮಾಡಿದ ಪ್ರಕರಣವೀಗ ಭಾರಿ ಸುದ್ದಿಯಾಗಿದೆ. ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಇಂತಹ ಅಮಾನವೀಯ ಪ್ರಕರಣ ನಡೆದಿರುವ ಕುರಿತು ದೂರು ದಾಖಲಾದ ಹಿನ್ನೆಲೆಯಲ್ಲಿ ಕೊಪ್ಪಳ ವೈದ್ಯಕೀಯ ಬೋಧಕ ಆಸ್ಪತ್ರೆಯ ನಿರ್ದೇಶಕರು ತನಿಖೆಗೆ ಆದೇಶಿಸಿದ್ದಾರೆ. ತನಿಖೆಗಾಗಿ ವಿಶೇಷ ಸಮಿತಿಯೊಂದನ್ನೂ ರಚಿಸಿದ್ದಾರೆ.
ಏನಿದು ಪ್ರಕರಣ?
ಆರು ವರ್ಷಗಳ ಹಿಂದೆ ಮಹಿಳೆಯೊಬ್ಬರು ಜಿಲ್ಲಾಸ್ಪತ್ರೆಗೆ ಹೆರಿಗೆಗಾಗಿ ಬಂದಿದ್ದರು. ಆದರೆ, ನರ್ಸ್ ತೈರುನ್ನೀಸಾ ಸೈಯದ್ ಹಾಗೂ ಜಾವೀದ್ ಎಂಬುವರು ಹೆರಿಗೆ ಬಳಿಕ ಮಹಿಳೆಗೆ ನಿಮ್ಮ ಮಗು ತೀರಿಕೊಂಡಿದೆ ಎಂಬುದಾಗಿ ಸುಳ್ಳು ಹೇಳಿದ್ದಾರೆ. ಇದಾದ ಬಳಿಕ ಮಗುವನ್ನು ಐಸಿಯುನಲ್ಲಿರಿಸಿ, ಮಗುವನ್ನು ಮಾರಾಟ ಮಾಡಿದ್ದಾರೆ. ಮಗು ತೀರಿಕೊಂಡಿದೆ ಎಂಬುದಾಗಿ ನಕಲಿ ದಾಖಲೆಗಳನ್ನೂ ಇವರು ಸೃಷ್ಟಿಸಿದ್ದಾರೆ ಎಂದು ಕಳೆದ ವರ್ಷ ದೂರು ದಾಖಲಾಗಿತ್ತು. ಹಾಗಾಗಿ, ಆಸ್ಪತ್ರೆ ನಿರ್ದೇಶಕರು ತನಿಖೆಗೆ ಸಮಿತಿ ರಚಿಸಿದ್ದಾರೆ.
ಇದನ್ನೂ ಓದಿ: Child trade : IVFಗೆ ಗಾರ್ಮೆಂಟ್ಸ್ ಯುವತಿಯರ ಅಂಡಾಣು!; ಮಕ್ಕಳ ಮಾರಾಟ ಗ್ಯಾಂಗ್ ಕರಾಮತ್ತು
ರಾಜ್ಯ ಮಕ್ಕಳ ರಕ್ಷಣಾ ಘಟಕದಿಂದ ತನಿಖೆಗೆ ಆದೇಶಿಸಲಾಗಿದೆ. ಸೂಚನೆ ಮೇರೆಗೆ ಆಸ್ಪತ್ರೆ ನಿರ್ದೇಶಕರು ತನಿಖೆಗೆ ಆದೇಶಿಸಿದ್ದಾರೆ. ಹೆರಿಗೆಗೆ ಬಂದ ತಾಯಂದಿರ ಮನಸ್ಥಿತಿ ನೋಡಿಕೊಂಡು, ಅವರ ವಿದ್ಯಾಭ್ಯಾಸ, ಹಿನ್ನೆಲೆಯನ್ನು ತಿಳಿದುಕೊಂಡು, ಹೆರಿಗೆ ಬಳಿಕ ಅವರಿಗೆ ಮಗು ತೀರಿಕೊಂಡಿದೆ ಎಂಬುದಾಗಿ ಸುಳ್ಳು ಹೇಳುವುದು ಇವರ ಕುತಂತ್ರವಾಗಿದೆ ಎಂಬುದಾಗಿ ಕಳೆದ ವರ್ಷ ಪೋಷಕರಿಂದ ದೂರು ದಾಖಲಾಗಿತ್ತು. ಈಗ ತೈರುನ್ನೀಸಾ ಸೈಯದ್ ಹಾಗೂ ಜಾವಿದ್ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ