ಚಿಕ್ಕಮಗಳೂರು: ಇತ್ತೀಚೆಗೆ ಚಿಕ್ಕ ಮಕ್ಕಳು ಹೃದಯಘಾತದಿಂದ ಸಾವನ್ನಪ್ಪಿತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. 60-70 ವರ್ಷ ದಾಟಿದವರಲ್ಲಿ ಅಥವಾ ಮಧ್ಯ ವಯಸ್ಕರಲ್ಲಿ ಹೃದಯಾಘಾತ, ಹೃದಯ ಸ್ತಂಭನ ಆಗುತ್ತಿರುವುದನ್ನು ಕಾಣುತ್ತಿದ್ದೆವು. ಆದರೆ ಈಗ 13-14 ವರ್ಷದ ಮಕ್ಕಳೂ ಹೃದಯಘಾತದಿಂದ (Children Heart Attack) ಸಾವನ್ನಪ್ಪುತ್ತಿರುವ ಆಘಾತಕಾರಿ ಎನ್ನಿಸಿದೆ.
ಚಿಕ್ಕಮಗಳೂರಿನಲ್ಲಿ 9ನೇ ತರಗತಿ ಬಾಲಕಿ ವೈಷ್ಣವಿ (14) ಎಂಬಾಕೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಈಕೆ ಚಿಕ್ಕಮಗಳೂರಿನ ಮೂಡಿಗೆರೆ ಪಟ್ಟಣದವಳು. ಶನಿವಾರ ಸಂಜೆ ಸುಮಾರು 7ಗಂಟೆ ಹೊತ್ತಿಗೆ ಕುಟುಂಬದವರೊಂದಿಗೆ ಸಮಯ ಕಳೆಯುತ್ತಿದ್ದ ವೈಷ್ಣವಿಗೆ ಹೃದಯಘಾತವಾಗಿದೆ. ಕೂಡಲೇ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದರು. ವೈಷ್ಣವಿ ಆದಾಗಲೇ ಇಹಲೋಕ ತ್ಯಜಿಸಿದ್ದಳು.
ಸಾವಿನಲ್ಲೂ ಸಾರ್ಥಕತೆ ಮರೆದ ಕುಟುಂಬ
ಮೃತ ಬಾಲಕಿ ವೈಷ್ಣವಿ ಕಣ್ಣುಗಳನ್ನು ಆಕೆಯ ಕುಟುಂಬದವರು ದಾನ ಮಾಡಿದ್ದಾರೆ. ಆದರೆ ಇಲ್ಲೂ ಸ್ವಲ್ಪ ಗೊಂದಲ ಏರ್ಪಟ್ಟಿತ್ತು. ವೈಷ್ಣವಿ ಮೃತಪಡುತ್ತಿದ್ದಂತೆ ಆಕೆಯ ಕಣ್ಣುಗಳನ್ನು ದಾನ ಮಾಡಲು ಕುಟುಂಬದವರು ಮುಂದಾದರು. ಆದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಂಸ್ಥೆಯವರು ಬಾರದೇ ಇದ್ದಾಗ ಆಕ್ರೋಶ ಕುಟುಂಬದವರು ಹೊರಹಾಕಿದರು. ಅಂತೂ ಕೊನೆಯಲ್ಲಿ ವೈಷ್ಣವಿ ನೇತ್ರಗಳನ್ನು ದಾನ ಮಾಡುವ ಮೂಲಕ, ಆಕೆಯ ಸಾವಿನಲ್ಲೂ ಕುಟುಂಬ ಸಾರ್ಥಕತೆ ಮೆರೆದಿದೆ.
ಓದುತ್ತಿದ್ದಾಗಲೇ ಕುಸಿದು ಬಿದ್ದಿದ್ದ ಅನುಶ್ರೀ
ಕುಂದಾಪುರ ತಾಲೂಕಿನ ತಲ್ಲೂರಿನಲ್ಲಿ ಕೇವಲ ೧೩ ವರ್ಷದ ಬಾಲಕಿಯೊಬ್ಬಳು ಹೃದಯಾಘಾತದಿಂದ ಅಕ್ಟೋಬರ್ 28ರಂದು ಸಾವನ್ನಪ್ಪಿದ್ದಳು. ಹಟ್ಟಿಯಂಗಡಿಯ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಅನುಶ್ರೀ, ಮನೆಯಲ್ಲಿ ಓದುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಳು. ಅನುಶ್ರೀ ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಕೊನೆಯುಸಿರೆಳೆದಿದ್ದಳು.
ಹೃದಯಘಾತದಿಂದಲೇ ಅಗಲಿದರು ಪುನೀತ್ ರಾಜಕುಮಾರ್
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೂಡ ಹೃದಯಘಾತದಿಂದಲೇ ನಮ್ಮನ್ನ ಅಗಲಿದರು. ಅಪ್ಪು ಅಗಲಿ ಶನಿವಾರಕ್ಕೆ (ಅ.29) ಒಂದು ವರ್ಷ. 2021ರ ಅಕ್ಟೋಬರ್ 29ರ ಕರಾಳ ದಿನವಾಗಿ ಮಾರ್ಪಟಿತ್ತು. ಅಪ್ಪು ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಪತ್ನಿ ಅಶ್ವಿನಿ ಫ್ಯಾಮಿಲಿ ಡಾಕ್ಟರ್ ಬಳಿ ಕರೆದುಕೊಂಡು ಹೋದರು. ಈ ಸಮಯದಲ್ಲಿ ಇಸಿಜಿ ಮಾಡಿದಾಗ ಏರುಪೇರು ಆಗಿರುವುದು ಕಂಡು ಬಂತು. ಕೂಡಲೇ ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತೀವ್ರ ಹೃದಯಘಾತದಿಂದ ಆಸ್ಪತ್ರೆಯಲ್ಲಿ ಪುನೀತ್ ಇಹಲೋಕ ತ್ಯಜಿಸಿದ್ದರು. ಈ ಪುಟ್ಟ ಪುಟ್ಟ ಮಕ್ಕಳಲ್ಲೂ ಹೃದಯಾಘಾತವಾಗುತ್ತಿರುವುದು ಆತಂಕ ಹೆಚ್ಚಿಸಿದೆ.
ಇದನ್ನೂ ಓದಿ | ಆಘಾತಕಾರಿ ಸುದ್ದಿ | ಕೇವಲ 13 ವರ್ಷದ ಬಾಲಕಿ ಹೃದಯಾಘಾತದಿಂದ ಸಾವು, ಓದುತ್ತಿದ್ದಾಗ ಕುಸಿದು ಬಿದ್ದು ಮೃತ್ಯು