ದೇವನಹಳ್ಳಿ: ಮನೆ ಮುಂದೆ ರಸ್ತೆಯಲ್ಲಿ ಆಟವಾಡುತ್ತಿದ್ದಾಗ ಸಿಕ್ಕಿದ ಪ್ಯಾಕೆಟ್‌ನಲ್ಲಿರುವುದು ಸಕ್ಕರೆ ಎಂದು ತಿಳಿದ ಪುಟ್ಟ ಮಕ್ಕಳು ಅದನ್ನು ಸೇವಿಸಿ ಅಸ್ವಸ್ಥರಾದ (Children Hospitalized) ಘಟನೆ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ.
ದೇವನಹಳ್ಳಿ ಪಟ್ಟಣದ ವಿನಾಯಕ ನಗರದಲ್ಲಿ ಮೂವರು ಪುಟ್ಟ ಕಂದಮ್ಮಗಳು (Three Children) ಮನೆ ಎದುರಿನ ರಸ್ತೆಯಲ್ಲಿ ಆಟವಾಡುತ್ತಿದ್ದರು. ಮಕ್ಕಳನ್ನು ಜತೆಯಾಗಿ ಬಿಟ್ಟು ಅವರ ಅಮ್ಮಂದಿರು ಕೆಲಸಕ್ಕೆ ಹೋಗಿದ್ದರು. ಆಗ ಅವರ ಕೈಗೆ ಒಂದು ಪ್ಯಾಕೆಟ್ ಸಿಕ್ಕಿದೆ. ಅದು ಬಿಳಿ ಸಕ್ಕರೆಯಂತೆ ಇದ್ದು, ಮಕ್ಕಳು ಆಸೆಯಿಂದ ತಿಂದಿವೆ. ಕೂಡಲೇ ಅಸ್ವಸ್ಥಗೊಂಡ ಅವರನ್ನು ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಚಿತ್ರಾ (3), ಲೋಹಿತ್ಯಾ (4), ವೇದಾಂತ (3) ವಿಷ ಸೇವನೆಯಿಂದ ಅಸ್ವಸ್ಥರಾದ ಮಕ್ಕಳು. ಇವರು ಅಕ್ಕಪಕ್ಕದ ಮನೆಯವರಾಗಿದ್ದು, ಜತೆಯಾಗಿ ಆಡುತ್ತಿದ್ದರು. ಆಗ ಅವರಿಗೆ ಅಲ್ಲಿ ಕಂಡಿದ್ದು ನಿಜವಾಗಿ ಸಕ್ಕರೆಯಲ್ಲ. ಡಿ ಕ್ಲಾಗ್ (D-Klog) ಎನ್ನುವ ಡ್ರೈನೇಜ್ ಕ್ಲೀನರ್. ಅದನ್ನು ಸಕ್ಕರೆ ಎಂದುಕೊಂಡು ತಿಂದ ಮಕ್ಕಳು ಅಸ್ವಸ್ಥರಾಗಿದ್ದಾರೆ.
ಕೂಡಲೇ ಅವರನ್ನು ದೇವನಹಳ್ಳಿಯ ಆಕಾಶ್ ಆಸ್ವತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ದೇವನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Road Accident: ಶಿರಾ ಬಳಿ ಹೆದ್ದಾರಿಯಲ್ಲಿ ಭೀಕರ ಅಪಘಾತ; ನಿವೃತ್ತರಾಗಿ ಮನೆಗೆ ತೆರಳುತ್ತಿದ್ದ ಇಬ್ಬರು ಸಾವು