ಬೆಂಗಳೂರು: ಅವರಿಬ್ಬರೂ ಪುಟ್ಟ ಮಕ್ಕಳು. ವಯಸ್ಸು ಐದು ವರ್ಷ. ಶಾಲೆಯಿಂದ ಮನೆಗೆ ಹೊರಟಿದ್ದರು. ಆದರೆ, ಇದ್ದಕ್ಕಿದ್ದಂತೆಯೇ ಕಣ್ಮರೆಯಾಗಿಬಿಟ್ಟರು (Children Missing)! ಮುಂದೆ ಅದೆಷ್ಟೋ ಹೊತ್ತು ಆತಂಕ, ಭಯದ ವಾತಾವರಣ. ಕೊನೆಗೂ ಈ ಮಕ್ಕಳು ನಾಪತ್ತೆಯಾದ ಜಾಗದಿಂದ ಅದೆಷ್ಟೋ ದೂರದಲ್ಲಿ ಪತ್ತೆಯಾದರು. ಹಾಗಿದ್ದರೆ ಅವರು ಮಿಸ್ಸಿಂಗ್ ಆಗಿದ್ದು ಹೇಗೆ? ಅವರನ್ನು ಪತ್ತೆ ಹಚ್ಚಿದ್ದು ಹೇಗೆ ಎನ್ನುವುದು ಒಂದು ಇಂಟರೆಸ್ಟಿಂಗ್ ಸ್ಟೋರಿ! ಅಂದ ಹಾಗೆ, ಈ ಸ್ಟೋರಿಯ ಹೀರೊಗಳು ಬೆಂಗಳೂರು ಪೊಲೀಸ್ (Bangalore police)!
ಆ ಇಬ್ಬರು ಮಕ್ಕಳು ಶಾಲೆಯಿಂದ ಮನೆಗೆ ಹೊರಟಿದ್ದರು. ತಮ್ಮನ್ನು ಮನೆಗೆ ಕರೆದೊಯ್ಯುವ ಆಟೋ ನಿಲ್ಲುವ ಜಾಗಕ್ಕೆ ಬಂದಿದ್ದರು. ಆದರೆ ಆಟೋ ಬಂದಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಆಟೋ ಬಂತು. ಆದರೆ, ಮಕ್ಕಳೇ ಇರಲಿಲ್ಲ! ಈ ನಡುವೆ, ಆಟೋ ಚಾಲಕ ಆ ಮಕ್ಕಳು ಇವತ್ತು ಬಂದಿಲ್ಲವೇನೋ ಅಂದುಕೊಂಡು ಬೇರೆ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿ ಅವರ ಮನೆಗೆ ಬಿಟ್ಟುಬಿಟ್ಟ. ಇತ್ತ ತಮ್ಮ ಮಕ್ಕಳು ಯಾಕೆ ಮನೆಗೆ ಬಂದಿಲ್ಲ ಎಂದು ಹೆತ್ತವರು ಕಂಗಾಲಾದರು.
ಸ್ವಲ್ಪ ಹೊತ್ತಿನಲ್ಲಿ ಮಿಸ್ ಆದ ಮಕ್ಕಳಲ್ಲಿ ಒಬ್ಬರ ಹೆತ್ತವರ ಫೋನ್‌ಗೆ ಒಂದು ಕರೆ ಬಂತು. ಅದು ಹೇಳಿದ್ದು ಇಷ್ಟೆ: ಮಕ್ಕಳು ನನ್ನ ಬಳಿ ಇದ್ದಾರೆ!
ಹಾಗಂತ ಮಕ್ಕಳು ಇರುವ ಜಾಗ ಯಾವುದು? ಅವರು ಯಾರ ಬಳಿ ಇದ್ದಾರೆ ಎನ್ನುವ ಯಾವ ಸಂಗತಿಯನ್ನೂ ತಿಳಿಸದೆ ಫೋನ್ ಕಟ್ ಆಗಿತ್ತು. ಹೆತ್ತವರಿಗೆ ಆತಂಕ ಜೋರಾಯಿತು. ರಿಟರ್ನ್ ಕಾಲ್ ಮಾಡಿದರೂ ಮಕ್ಕಳ ಮಾಹಿತಿ ಸಿಗಲಿಲ್ಲ.
ಈ ನಡುವೆ ಹೆತ್ತವರು ಪೊಲೀಸರನ್ನು ಸಂಪರ್ಕಿಸಿದರು. ನಂಬರ್‌ನ್ನು ಪೊಲೀಸರಿಗೆ ನೀಡಿದರು. ಆಗ ಚುರುಕಾದ ಪೊಲೀಸರು ಎಲ್ಲಿಂದ ಕರೆ ಮಾಡಲಾಯಿತು ಎಂದು ಟ್ರ್ಯಾಕ್ ಮಾಡಿದರು. ಅದು ಸೆಟಲೈಟ್ ಬಸ್ ನಿಲ್ದಾಣಂದ ಸ್ವಲ್ಪ ದೂರಲ್ಲಿ ಪಾಯಿಂಟ್ ತೋರಿಸಿತು. ಪೊಲೀಸರು ಅಲ್ಲಿಗೆ ಧಾವಿಸಿದರು. ಆದರೆ, ಮಕ್ಕಳು ಅಲ್ಲೂ ಇರಲಿಲ್ಲ.
ಕೂಡಲೇ ಆ ಪ್ರದೇಶದ ಸುತ್ತಮುತ್ತ ಎಲ್ಲ ಕಡೆ ಹುಡುಕಾಡಿದರು. ಕಂಡ ಕಂಡವರಲ್ಲಿ ಈ ಮಕ್ಕಳ ಕಂಡೀರಾ ಎಂದು ಕೇಳಿದರು. ಅಂತೂ ಕೊನೆಗೆ ಹುಡುಕಾಟ ಫಲ ನೀಡಿತು. ಫೋನ್ ಮಾಡಿದ ಜಾಗದಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಮಕ್ಕಳು ನಿಂತಿದ್ದರು. ಪೊಲೀಸರು ಮತ್ತು ಹೆತ್ತವರನ್ನು ನೋಡಿ ಖುಷಿಯಿಂದ ಕುಣಿದಾಡಿದರು. ಹೆತ್ತವರಂತೂ ಮಕ್ಕಳನ್ನು ನೋಡಿ ಕಣ್ಣೀರೇ ಹಾಕಿಬಿಟ್ಟರು.
ಹಾಗಿದ್ದರೆ ಅವರು ಹೋಗಿದ್ದೆಲ್ಲಿ? ಯಾಕೆ ಹೋದರು?
ಮಕ್ಕಳು ಸಿಕ್ಕಿದರು ಎನ್ನುವಲ್ಲಿಗೆ ಕರೆ ಮುಗಿದಿಲ್ಲ. ಹಾಗಿದ್ದರೆ ಈ ಮಕ್ಕಳು ಮಿಸ್ ಆಗಿದ್ದು ಹೇಗೆ? ಅವರು ಹೋಗಿದ್ದೆಲ್ಲಿಗೆ? ಮಕ್ಕಳು ನನ್ನ ಜತೆ ಇದ್ದಾರೆ ಎಂದು ಹೇಳಿದ ಆ ವ್ಯಕ್ತಿ ಯಾರು? ಅವನ ಫೋನ್ ಯಾಕೆ ಮತ್ತೆ ಕನೆಕ್ಟ್ ಆಗಲಿಲ್ಲ. ಮಕ್ಕಳು ನನ್ನ ಜತೆ ಇದ್ದಾರೆ ಎಂದು ಹೇಳಿದ ಮೇಲೂ ಕರೆ ಬಂದ ಜಾಗಕ್ಕೂ ಮಕ್ಕಳಿರುವ ಜಾಗಕ್ಕೂ ಒಂದು ಕಿ.ಮೀ. ಅಂತರ ಇದ್ದಿದ್ದು ಹೇಗೆ? ಹೀಗೆ ಹಲವು ಕುತೂಹಲಗಳನ್ನು ಹೊತ್ತು ನಿಂತಿದೆ ಈ ಕಥೆ. ಅಲ್ಲಿ ನಿಜಕ್ಕೂ ಏನಾಯಿತು ಅಂತ ಮಕ್ಕಳೇ ಹೇಳಿದ್ದಾರೆ.
ನಿಜವೆಂದರೆ ಶಾಲೆಯಿಂದ ಹೊರಟ ಮಕ್ಕಳು ರಿಕ್ಷಾ ನಿಲ್ಲುವ ಜಾಗದ ಬಳಿ ಬಂದಾಗ ರಿಕ್ಷಾ ಇರಲಿಲ್ಲ. ಅವರು ಆಚೀಚೆ ನೋಡೋಣ ಎಂದು ಸ್ವಲ್ಪ ದೂರ ಹೋಗಿದ್ದಾರೆ. ಆದರೆ, ಅವರಿಗೆ ಮರಳಿ ರಿಕ್ಷಾ ನಿಲ್ಲುವ ಜಾಗಕ್ಕೆ ಬರುವ ದಾರಿ ಗೊತ್ತಾಗಲಿಲ್ಲ! ಹಾಗಾಗಿ ಅವರು ದಾರಿ ತಪ್ಪಿ ಸಾಕಷ್ಟು ಕಡೆ ಸುತ್ತಾಟ ನಡೆಸಿದ್ದಾರೆ.
ಈ ನಡುವೆ, ದಾರಿಯಲ್ಲಿ ಹೋಗುತ್ತಿದ್ದ ಮಕ್ಕಳು ಒಬ್ಬ ಯುವತಿಯ ಬಳಿ ನಮ್ಮ ಆಟೋ ಮಿಸ್ ಆಗಿದೆ. ನಮಗೆ ಭಯ ಆಗುತ್ತಿದೆ ಎಂದು ಹೇಳಿದ್ದಾರೆ. ಆ ಯುವತಿ ಪಕ್ಕದಲ್ಲಿದ್ದ ಇನ್ನೊಬ್ಬ ವ್ಯಕ್ತಿಗೆ ಹೇಳಿದ್ದಾರೆ.
ಆಗ ಒಬ್ಬ ಹುಡುಗನಿಗೆ ಒಂದು ವಿಷಯ ಹೊಳೆದಿದೆ. ʻನನಗೆ ಅಪ್ಪನ ಫೋನ್ ನಂಬರ್ ಗೊತ್ತಿದೆʼ ಎಂದು ಹೇಳಿದ್ದಾನೆ. ಆಗ ಆ ವ್ಯಕ್ತಿ ಮಗುವಿನ ತಂದೆಗೆ ಫೋನ್ ಮಾಡಿದ್ದಾರೆ. ಮಕ್ಕಳ ತಂದೆಗೆ ಕಾಲ್ ಮಾಡಿದ ಆ ವ್ಯಕ್ತಿ ʻಮಕ್ಕಳು ಸ್ಯಾಟ್ ಲೈಟ್ ಬಸ್ ಸ್ಟಾಂಡ್ ಹತ್ತಿರ ಇದ್ದಾರೆʼ ಎಂದು ಹೇಳಿದ್ದಾರೆ. ಆದರೆ, ಬಳಿಕ ಫೋನ್ ಕಟ್ ಆಗಿದೆ.
ಈ ನಡುವೆ ಕೂಡಲೇ ತಂದೆ ಪೊಲೀಸ್ ಠಾಣೆಗೆ ಹೋದರು. ಪೊಲೀಸರು ಈ ನಂಬರ್ ಪಡೆದು ಟವರ್ ಲೊಕೇಷನ್ ಮೂಲಕ ವಿಳಾಸ ಪತ್ತೆ ಹಚ್ಚಿದರು. ಟವರ್ ಲೊಕೇಷನ್ ಏನೋ ಸಿಕ್ಕಿತು. ಆದರೆ ಅಲ್ಲಿ ಹೋಗಿ ನೋಡಿದರೆ ಮಕ್ಕಳೇ ಇರಲಿಲ್ಲ. ಕೂಡಲೇ ಪೊಲೀಸರು ಆ ಪ್ರದೇಶದ ಎಲ್ಲ ಕಡೆ ಹುಡುಕಾಡಿದರು. ಕೊನೆಗೆ ಮಕ್ಕಳು ಸುಮಾರು 1 ಕಿ.ಮೀ. ದೂರದಲ್ಲಿ ಸಿಕ್ಕಿದರು. ಏನಾಗಿತ್ತೆಂದರೆ ಮಕ್ಕಳ ತಂದೆಗೆ ಫೋನ್ ಮಾಡಿದ್ದ ಆ ವ್ಯಕ್ತಿ ಅಲ್ಲಿಂದ ತನ್ನ ಕೆಲಸದ ಮೇಲೆ ಹೋಗಿದ್ದರು. ಈ ಮಕ್ಕಳು ಅಲ್ಲಿಂದ ಮತ್ತೆ ತಿರುಗಾಟ ಶುರು ಮಾಡಿವೆ!
ಕೊನೆಗೂ ಮಕ್ಕಳನ್ನು ಹುಡುಕಿ, ಕರೆತಂದು ಹೆತ್ತವರ ಮಡಿಲಿಗೆ ಒಪ್ಪಿಸಿದರು ವಿವಿ ಪುರಂ ಪೊಲೀಸರು. ಮೂರೇ ಗಂಟೆಯಲ್ಲಿ ಮಿಂಚಿನ ವೇಗದ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ಪತ್ತೆ ಹಚ್ಚಿದ ಪೊಲೀಸರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: Udupi Toilet Case : ಟಾಯ್ಲೆಟ್‌ನಲ್ಲಿ ಹಿಡನ್ ಕ್ಯಾಮೆರಾ ಇರಲಿಲ್ಲ, ಹರಿದಾಡುತ್ತಿರುವ ವಿಡಿಯೊ ಫೇಕ್ ; ಖುಷ್ಬೂ Report