ಚಿಕ್ಕೋಡಿ: ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಶಂಕೆ ಹಿನ್ನೆಲೆಯಲ್ಲಿ ರಾಜ್ಯ, ಮಹಾರಾಷ್ಟ್ರ ಸೇರಿ 6 ರಾಜ್ಯಗಳ 13 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಭಾನುವಾರ ದಾಳಿ ನಡೆಸಿರುವ ಬೆನ್ನಲ್ಲೇ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಸರ್ಕಾರಿ ಶಾಲೆಯಲ್ಲಿ ಹ್ಯಾಂಡ್ ಗ್ರೆನೇಡ್ (Hand Grenade) ಪತ್ತೆಯಾಗಿರುವುದು ಆತಂಕ ಮೂಡಿಸಿದೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಕುಡನೂರು ಗ್ರಾಮದ ಮರಾಠಿ ಶಾಲೆಯಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ. ಮಕ್ಕಳು ಬಾಂಬ್ ಎಂದು ತಿಳಿಯದೇ ಗ್ರೆನೇಡ್‌ನೊಂದಿಗೆ ಆಟ ಆಡುತ್ತಿದ್ದದ್ದನ್ನು ಕಂಡು ಶಿಕ್ಷಕರು ಹಾಗೂ ಗ್ರಾಮಸ್ಥರು ಗಾಬರಿಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣ ಸಾಂಗ್ಲಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳದೊಂದಿಗೆ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಭಾರಿ ಅನಾಹುತ ತಪ್ಪಿದೆ.
ಶಾಲೆಯಲ್ಲಿ ಪತ್ತೆಯಾಗಿರುವ ಹ್ಯಾಂಡ್ ಗ್ರೆನೇಡ್ ಮೇಲೆ ಉರ್ದು ಭಾಷೆಯ ಲಿಪಿ ಕಂಡುಬಂದಿದೆ. ಗ್ರೆನೇಡ್ ಜೀವಂಥವಾಗಿತ್ತೇ ಅಥವಾ ನಿಷ್ಕ್ರಿಯವಾಗಿತ್ತೇ ಎನ್ನುವ ಕುರಿತು ತನಿಖೆ ನಡೆಯುತ್ತಿದೆ. ಶಾಲೆಯಲ್ಲಿ ಗ್ರೆನೇಡ್ ಕಂಡುಬಂದಿರುವುದು ನೋಡಿದರೆ ಉಗ್ರರು ಶಾಲೆಯನ್ನು ಸ್ಫೋಟಗೊಳಿಸುವ ಯತ್ನದಲ್ಲಿದ್ದರೇ ಅಥವಾ ಇಲ್ಲಿ ವಾಸ್ತವ್ಯ ಹೂಡಿದ್ದರೇ ಎಂಬ ಅನುಮಾನಗಳು ಮೂಡಿವೆ. ಗಡಿಯಲ್ಲಿ ಇಂತಹ ಬೆಳವಣಿಗೆಯಿಂದ ಬೆಳಗಾವಿ ಜಿಲ್ಲೆಯಲ್ಲೂ ಆತಂಕ ಆವರಿಸಿದೆ.
ಇದನ್ನೂ ಓದಿ | ಡಿಕೆಶಿ ಪುತ್ರಿ ಐಶ್ವರ್ಯಾ ಇ-ಮೇಲ್‌ಗೆ ಬಾಂಬ್ ಬೆದರಿಕೆ ಹಾಕಿದ್ದು 10ನೇ ತರಗತಿ ವಿದ್ಯಾರ್ಥಿ!