ಚಿತ್ರದುರ್ಗ: ಬಿಜೆಪಿಯಲ್ಲಿ ಈ ಬಾರಿ 20ಕ್ಕೂ ಹೆಚ್ಚು ಹಾಲಿ ಶಾಸಕರನ್ನು ಅಭ್ಯರ್ಥಿಗಳ ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂಬ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಹಲವು ಶಾಸಕರು ಆತಂಕಗೊಂಡಿದ್ದಾರೆ. ಈಗಾಗಲೇ ಕೆಲವರಿಗೆ ಹೈ ಕಮಾಂಡ್‌ನಿಂದ ಕರೆಗಳು ಬರುತ್ತಿರುವುದರಿಂದ ತಮಗೂ ಚುನಾವಣೆಗೆ (Karnataka Election) ಸ್ಪರ್ಧಿಸುವ ಅವಕಾಶ ತಪ್ಪಬಹುದು ಎಂದು ಚಿಂತೆಗೀಡಾಗಿದ್ದಾರೆ. ಈ ನಡುವೆ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಚಿತ್ರದುರ್ಗದ ಬಿಜೆಪಿ ಹಾಲಿ ಶಾಸಕ ತಿಪ್ಪಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ನನಗೆ ಯಾರೂ ಕರೆ ಮಾಡಿ ಹೇಳಿಲ್ಲ, ಅದರ ಬಗ್ಗೆ ಗಮನ ಹರಿಸಿಲ್ಲ ಎಂದು ತಿಳಿಸಿದ್ದಾರೆ.
ಪಕ್ಷದ ನಿರ್ಧಾರಕ್ಕೆ ಬದ್ಧ
ಚಿತ್ರದುರ್ಗದಲ್ಲಿ ಬಿಜೆಪಿ ಹಾಲಿ ಶಾಸಕ ತಿಪ್ಪಾರೆಡ್ಡಿ ಪ್ರತಿಕ್ರಿಯಿಸಿ, ನಾನು ಸುಮಾರು ಮೂರ್ನಾಲ್ಕು ದಿನದಿಂದ ನೋಡುತ್ತಾ ಇದ್ದೇನೆ. ವಯಸ್ಸು ಆದವರಿಗೆ ಟಿಕೆಟ್ ಇಲ್ಲ ಅಂತ ಸುದ್ದಿ ಇದೆ. ಅದು ನಮ್ಮ ಬಿಜೆಪಿ ಪಕ್ಷದಲ್ಲಿನ ನಿಯಮವಾಗಿದೆ. ಆದರೆ ನನಗೆ ರಾಜ್ಯದ ನಾಯಕರು, ಹೈಕಮಾಂಡ್ ನಾಯಕರು ಯಾರೂ ಕರೆ ಮಾಡಿ ಹೇಳಿಲ್ಲ. ಅದರ ಬಗ್ಗೆ ನಾನು ವಿಶೇಷ ಗಮನ ಹರಿಸಿಲ್ಲ. ವರಿಷ್ಠರ ತೀರ್ಮಾನದ ವಿರುದ್ಧ ಹೋಗಲು ಆಗಲ್ಲ. ಪಕ್ಷ ಯಾವ ನಿರ್ಧಾರ ಮಾಡಿದರೂ ಅದಕ್ಕೆ ಬದ್ಧ ಎಂದು ಹೇಳಿದ್ದಾರೆ.
ನಾನು ಯಾರಿಗೂ ಟಿಕೆಟ್ ಕೊಡಿ ಎಂದು ಕೇಳಿಲ್ಲ. ಹಾಗೆಯೇ ಮೊದಲಿಂದ ನಾನು ಟಿಕೆಟ್ ಕೊಡಿ ಎಂದು ಕೇಳಿಲ್ಲ. ಈ ಬಾರಿ ಕೊಟ್ಟೆ ಕೊಡುತ್ತಾರೆ ಎಂಬ ಭರವಸೆ ಇದೆ. ನಮ್ಮ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ಮೂವರು ಆಕಾಂಕ್ಷಿಗಳು ಇದ್ದಾರೆ. ಚಳ್ಳಕೆರೆಯಲ್ಲಿ ಏಳೆಂಟು ಜನ ಆಕಾಂಕ್ಷಿಗಳು ಇದ್ದಾರೆ. ಹಾಲಿ ಶಾಸಕರೂ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದೇವೆ. ಹೊಸದುರ್ಗದಲ್ಲಿ ವರಿಷ್ಠರು ಹಾಗೂ ಶಾಸಕರ ನಡುವೆ ವ್ಯತ್ಯಾಸ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Karnataka Election 2023 : ಚುನಾವಣಾ ರಾಜಕಾರಣಕ್ಕೆ ಗುಡ್‌ಬೈ ಹೇಳಿದ ಮಾತಿನ ಮಲ್ಲ!
ಜೆಡಿಎಸ್‌ನಿಂದ ಆಹ್ವಾನ
ವಯಸ್ಸಿನ ಆಧಾರದಲ್ಲಿ ಟಿಕೆಟ್ ನಿರಾಕರಿಸಲಾಗುತ್ತಾ ಎಂಬ ಬಗ್ಗೆ ಮಾಹಿತಿ ಇಲ್ಲ. ಚಿತ್ರದುರ್ಗ ಕ್ಷೇತ್ರದಲ್ಲಿ ಜನರಿಗೆ ನನ್ನ ಮೇಲೆ ಎಷ್ಟು ಪ್ರೀತಿ ಇದೆಯೋ, ಹಿರಿಯೂರು ಕ್ಷೇತ್ರದಲ್ಲಿ ಅಷ್ಟೇ ಇದೆ. ಈಗಲೂ ಹಿರಿಯೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿ ಎಂದು ಜೆಡಿಎಸ್ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ಕಾದು ನೋಡೋಣ ಎಂದು ಹೇಳಿದ್ದೇನೆ. ಬಿಜೆಪಿ ಟಿಕೆಟ್ ನೀಡಿಲ್ಲ ಎಂದರೆ ಮುಂದಿನ ನಿರ್ಧಾರ ತಿಳಿಸುವುದಾಗಿ ಶಾಸಕ ತಿಪ್ಪಾರೆಡ್ಡಿ ಹೇಳಿದರು.
ಬೈಂದೂರು ಹಾಲಿ ಶಾಸಕ ಸುಕುಮಾರ ಶೆಟ್ಟಿ ಅವರಿಗೆ ತಪ್ಪಿದ ಟಿಕೆಟ್?
ಉಡುಪಿ: ಬೈಂದೂರು ಹಾಲಿ ಶಾಸಕ ಸುಕುಮಾರ ಶೆಟ್ಟಿ ಅವರಿಗೂ ಈ ಬಾರಿ ಟಿಕೆಟ್ ತಪ್ಪಿದೆ ಎನ್ನಲಾಗಿದೆ. ಬಿಜೆಪಿ ಹೈ ಕಮಾಂಡ್‌ನಿಂದ ಟಿಕೆಟ್ ಇಲ್ಲ ಎನ್ನುವ ಸೂಚನೆ ಬಂದ ಹಿನ್ನೆಲೆಯಲ್ಲಿ ಶಾಸಕರ ಮನೆಯ ಮುಂದೆ ನೂರಾರು ಕಾರ್ಯಕರ್ತರು ಜಮಾಯಿಸಿದ್ದಾರೆ. ಶಾಸಕರಿಗೆ ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಲು ಹಲವು ಕಾರ್ಯಕರ್ತರು ಮುಂದಾಗಿದ್ದಾರೆ. ಪಂಚಾಯತ್ ಸದಸ್ಯರು, ಪಕ್ಷದ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ಪತ್ರವನ್ನು ಬೈಂದೂರು ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿಗೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.