Site icon Vistara News

Monkey Attack : ಮಂಗನ ದಾಳಿಗೆ ವ್ಯಕ್ತಿ ಬಲಿ; ರಾತ್ರಿ ಹೊರಬಂದಾಗ ಕಾದು ಕುಳಿತು ಅಟ್ಯಾಕ್‌

Monkey attack kills man in Chitradurga

ದಾವಣಗೆರೆ: ಚಿರತೆ ದಾಳಿ, ಆನೆ ದಾಳಿ, ಹುಲಿ-ಕರಡಿ ದಾಳಿ ಆಯಿತು. ಈಗ ಮಂಗಗಳು ಕೂಡಾ ಮನುಷ್ಯರನ್ನು ಬೆನ್ನಟ್ಟಿ ಕೊಲ್ಲುವ ಹಂತಕ್ಕೆ ಪರಿಸ್ಥಿತಿ ತಲುಪಿದೆಯಾ? ಹೌದು ಎನ್ನುತ್ತದೆ ದಾವಣಗೆರೆ ಜಿಲ್ಲೆಯ (Davanagere News) ಹೊನ್ನಾಳಿ ತಾಲೂಕಿನಲ್ಲಿ ನಡೆದ ಘಟನೆ. ಇಲ್ಲಿನ ಅರಕೆರೆ ಎ.ಕೆ. ಕಾಲೊನಿಯಲ್ಲಿ ಮಂಗನ ದಾಳಿಗೆ (Monkey Attack) ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ (Man dies of Monkey attack).

ಇಲ್ಲಿನ 70 ವರ್ಷದ ಗುತ್ಯಪ್ಪ ಎಂಬವರ ಮನೆ ಪರಿಸರದಲ್ಲಿ ಮಂಗಗಳ ಉಪಟಳ ಭಾರಿ ಜಾಸ್ತಿಯಾಗಿದೆ. ಭಾನುವಾರ ರಾತ್ರಿ ಗುತ್ಯಪ್ಪ ಅವರು ಮೂತ್ರ ವಿಸರ್ಜನೆಗೆಂದು ಎದ್ದು ಹೊರಬಂದಾಗ ಅವರ ಮನೆಯ ಅಂಗಳದಲ್ಲೇ ಇದ್ದ ಕೋತಿ ಅವರ ಮೇಲೆ ದಾಳಿ ಮಾಡಿದೆ. ಅವರ ಮುಖ ಮತ್ತು ಕೈಗಳಿಗೆ ಕಚ್ಚಿ, ಪರಚಿ ಗಾಯ ಮಾಡಿದೆ. ಗುತ್ಯಪ್ಪ ಅವರ ಚೀರಾಟ ಕೇಳಿ ಮನೆಯವರು ಹೊರಗೋಡಿ ಬಂದಾಗ ಕೋತಿ ಅವರನ್ನು ಬಿಟ್ಟು ಪರಾರಿಯಾಗಿದೆ.

ಆದರೆ, ಅಷ್ಟು ಹೊತ್ತಿಗೆ ಗುತ್ಯಪ್ಪ ಅವರು ನೆಲಕ್ಕೆ ಉರುಳಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟು ಹೊತ್ತಿಗೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅವರು ಮಂಗದ ದಾಳಿಗೆ ಒಳಗಾದ ಹೊತ್ತಿನಲ್ಲಿ ಭಯದಿಂದ ಹೃದಯಾಘಾತವಾಗಿ ಪ್ರಾಣ ಕಳೆದುಕೊಂಡಿರಬಹುದು ಎಂದು ಹೇಳಲಾಗಿದೆ.

ಸಾಂತ್ವನ ಹೇಳಿದ ಎಂ.ಪಿ. ರೇಣುಕಾಚಾರ್ಯ

MP Renukacharya visits home of man who died after monkey attack

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭೇಟಿ ಅವರು ಭೇಟಿ ನೀಡಿ ಮೃತ ಗುತ್ಯಪ್ಪನ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಭಾಗದಲ್ಲಿ ಕರಡಿ, ಚಿರತೆ, ಮಂಗಗಳ ಕಾಟ ಹೆಚ್ಚಾಗಿದೆ ಎಂದು ರೇಣುಕಾಚಾರ್ಯ ಬಳಿ ಗ್ರಾಮಸ್ಥರು ದೂರು ಹೇಳಿಕೊಂಡರು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ರೇಣುಕಾಚಾರ್ಯ ಹೇಳಿದರು.

9 ದಿನದ ಮಗುವಿನ ಮೇಲೆ ದಾಳಿ ಮಾಡಿದ್ದ ಮಂಗ

ಚಿತ್ರದುರ್ಗ ಜಿಲ್ಲೆಯಲ್ಲಿ ಹಲವು ಕಡೆ ಕೋತಿಗಳ ಹಾವಳಿ ಜೋರಾಗಿದೆ. ಕಳೆದ ಜುಲೈ 16ರಂದು ಚಳ್ಳಕೆರೆ ತಾಲೂಕಿನ ತೋರೇಕೋಲಮ್ಮನ ಹಳ್ಳಿಯಲ್ಲಿ 9 ದಿನದ ಹಸುಳೆಯ (Newborn baby) ಮೇಲೆ ಮಂಗವೊಂದು ದಾಳಿ ಮಾಡಿ ಹಣೆಯನ್ನು ಹಚ್ಚಿ ಗಾಯಗೊಳಿಸಿತ್ತು.

ತೋರೇಕೋಲಮ್ಮನ ಹಳ್ಳಿಯ ಮಂಜುಳಾ ಹಾಗೂ ಸಿದ್ದೇಶ್ ಎಂಬುವವರ ಮಗುವನ್ನು ಮಲಗಿಸಿದ್ದ ವೇಳೆ ಈ ದಾಳಿ ನಡೆದಿತ್ತು. ಮಗುವಿನ ಹಣೆಯ ಮೇಲೆ ವಿಪರೀತ ಗಾಯವಾಗಿದ್ದು, ನೋವಿನಿಂದ ಕಿರುಚಾಡಿ ಮನೆಯವರು ಓಡಿ ಬಂದಾಗ ಕೋತಿ ಓಡಿ ಹೋಗಿದೆ.

ಈ ಕೋತಿಯು ಕೆಲವು ದಿನಗಳಿಂದ ಗ್ರಾಮದ ಹಲವರ ಮೇಲೆ ದಾಳಿ ಮಾಡುತ್ತಾ ಬಂದಿದೆ. ಈ ಬಗ್ಗೆ ಸ್ಥಳೀಯ ಅರಣ್ಯ ಅಧಿಕಾರಿಗಳಿಗೆ (Forest Officers) ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಹಸುಳೆ ಮೇಲೆ ದಾಳಿ ನಡೆದಿದೆ. ಮುಂದಿನ ದಿನದಲ್ಲಿ ಮತ್ತೆ ಯಾರ ಮೇಲೋ ದಾಳಿ ಆಗುವ ಮೊದಲು ಆ ಮಂಗನನ್ನು ಸೆರೆ ಹಿಡಿಯಬೇಕು ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಒತ್ತಾಯ ಮಾಡಿದ್ದರು. ಇದೀಗ ಹೊನ್ನಾಳಿಯಲ್ಲಿ ಮಂಗಗಳ ದಾಳಿ ಗಮನ ಸೆಳೆದಿದೆ.

Exit mobile version