ಚಿತ್ರದುರ್ಗ: ಜಿಲ್ಲೆಯ ಹೊಸಪೇಟೆ ಹೆದ್ದಾರಿ ಬಳಿ ಭಾನುವಾರ (ಆಗಸ್ಟ್ 13) ಬೆಳಗಿನ ಜಾವ ಜವರಾಯ ಅಟ್ಟಹಾಸ ಮೆರೆದಿದ್ದು, ಒಂದೇ ಕುಟುಂಬದ ನಾಲ್ವರು (Chitradurga Accident) ಮೃತಪಟ್ಟಿದ್ದಾರೆ. ಬೆಳಗಿನ ಜಾವ 3.30ರ ಸುಮಾರಿಗೆ ಮಲ್ಲಾಪುರ ಗೊಲ್ಲರಹಟ್ಟಿ ಬಳಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಲ್ವರು ಮೃತಪಟ್ಟರೆ, ಮೂವರು ಗಾಯಗೊಂಡಿದ್ದಾರೆ. ಮೃತರನ್ನು ಮರಣೋತ್ತರ ಪರೀಕ್ಷೆಗಾಗಿ (Post Mortem) ಚಿತ್ರದುರ್ಗ (Chitradurga) ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಭೀಮಾ ಶಂಕರ (26), ಸಂಗಪ್ಪ ಬಸಪ್ಪ(36), ರೇಖಾ (29) , ಅಗಸ್ತ್ಯ (8) ಮೃತರು. ಗಾಯಗೊಂಡಿರುವ ಅನ್ವಿತಾ (6), ಆದರ್ಶ (4) ಹಾಗೂ 26 ವರ್ಷದ ಮಹಿಳೆ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ವಿಜಯಪುರದಿಂದ ಚಿಕ್ಕಮಗಳೂರು ಕಡೆಗೆ ಕಾರಿನಲ್ಲಿ ಒಂದೇ ಕುಟುಂಬದ ಏಳು ಜನ ಪ್ರವಾಸಕ್ಕೆ ತೆರಳುತ್ತಿದ್ದರು. ಇದೇ ವೇಳೆ ಕಾರು ಮುಂದೆ ಚಲಿಸುತ್ತಿದ್ದ ಲಾರಿಗೆ ಡಿಕ್ಕಿಯಾದ ಕಾರಣ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ.
ನಜ್ಜುಗುಜ್ಜಾದ ಕಾರು
ಚಾಲಕನ ನಿರ್ಲಕ್ಷ್ಯದಿಂದ ಭೀಕರ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುವ ಜತೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳುಗಳನ್ನು ಕೂಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸಂಪ್‌ನಲ್ಲಿ ಬಿದ್ದ ಮೂವರ ರಕ್ಷಣೆ
ಬೆಂಗಳೂರು ನಗರ: ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿರುವ ಪಿಜಿಯೊಂದರ ಸಂಪ್‌ನಲ್ಲಿ ಉಸಿರುಗಟ್ಟಿ ಅಸ್ವಸ್ಥಗೊಂಡು ಬಿದ್ದಿದ್ದ ಮೂವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಅಪಾರ್ಟ್‌ಮೆಂಟ್ ಪಿಜಿಯೊಂದರ ಸಂಪ್‌ನಲ್ಲಿ ಮೂವರು ಬಿದ್ದಿರುವ ಕುರಿತು ಮಾಹಿತಿ ಲಭಿಸಿದ ಐದೇ ನಿಮಿಷಕ್ಕೆ ಸ್ಥಳಕ್ಕೆ ಆಗಮಿಸಿದ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆ ಸಿಬ್ಬಂದಿಯು ಮೂವರನ್ನೂ ರಕ್ಷಿಸಿದ್ದಾರೆ.
ಇದನ್ನೂ ಓದಿ: MP Double Tragedy: ಅಪಘಾತದಲ್ಲಿ ಮೃತಪಟ್ಟ ತಾಯಿ ದರ್ಶನಕ್ಕೆ ಹೊರಟ ಮಗನೂ ಆ್ಯಕ್ಸಿಡೆಂಟ್‌ನಲ್ಲಿ ಸಾವು
ಮಂಗಲ್ ರಾವ್ (55), ಧರ್ಮೇಂದ್ರ (50) ಹಾಗೂ ಜಿತಿನ್ (19) ಎಂಬುವರನ್ನು ರಕ್ಷಿಸಲಾಗಿದೆ. ಅಪಾರ್ಟ್‌ಮೆಂಟ್ ಮಾಲೀಕ ಮಂಗಲ್ ರಾವ್ ಟ್ಯಾಂಕ್ ಒಳಗೆ ಪೇಂಟ್ ಮಾಡಿಸಲು ಮುಂದಾಗಿದರು. ಪೇಂಟರ್ ಧರ್ಮೇಂದ್ರ ಅವರು ಟ್ಯಾಂಕ್ ಒಳಗೆ ಇಳಿದು ಪೇಂಟ್ ಮಾಡಲು ಮುಂದಾಗಿದ್ದರು. ಇದೇ ವೇಳೆ ಅವರು ಉಸಿರುಗಟ್ಟಿ ಕುಸಿದುಬಿದ್ದಿದ್ದರು. ಇವರನ್ನು ರಕ್ಷಿಸಲು ಹೋದ ಮಂಗಲ್ ರಾವ್ ಹಾಗೂ ಜಿತಿನ್ ಕೂಡ ಉಸಿರುಗಟ್ಟಿ ಅಸ್ವಸ್ಥರಾಗಿ ಬಿದ್ದಿದ್ದರು.