ಚಿತ್ರದುರ್ಗ: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗೆಳತಿ ಪವಿತ್ರಗೌಡ ಸೇರಿ 13 ಮಂದಿ ಬಂಧಿಯಾಗಿದ್ದಾರೆ. ಇದೀಗ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯವು ಕೇಳಿ ಬಂದಿದೆ. ಬೇಡ ಜಂಗಮ ಸಮುದಾಯದ ಜಿಲ್ಲಾಧ್ಯಕ್ಷ ಎಂ.ಟಿ ಮಲ್ಲಿಕಾರ್ಜುನ ಸ್ವಾಮಿ ಒತ್ತಾಯಿಸಿದ್ದಾರೆ.
ಪೊಲೀಸರು ಆರೋಪಿಗಳನ್ನು ತನಿಖೆ ಮಾಡುವುದು ಬೇಡ. ದರ್ಶನ್ ಪ್ರಭಾವಿಯಾಗಿದ್ದು, ಪ್ರಭಾವ ಬೀರಿ ಹೊರಗೆ ಬರಬಹುದು. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಒತ್ತಾಯಿಸಿದ್ದಾರೆ. ನಮ್ಮ ಸಮುದಾಯದ ಸ್ವಾಮೀಜಿಗಳು ಕರೆ ಮಾಡಿ ಮಾಹಿತಿ ಪಡೆದಿದ್ದಾರೆ.ಅವರೊಟ್ಟಿಗೆ ಚರ್ಚಿಸಿ ಮುಂದಿನ ಕ್ರಮವಹಿಸಲಾಗುತ್ತದೆ ಎಂದರು.
ಮೃತ ಕುಟುಂಬಸ್ಥರಿಗೆ ಭಾವನಾ ಬೆಳಗೆರೆ ಸಾಂತ್ವನ
ರೇಣುಕಾ ಸ್ವಾಮಿ ಮನೆಗೆ ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕಿ ಭಾವನಾ ಬೆಳಗೆರೆ ಭೇಟಿ ನೀಡಿದರು. ಹಿರಿಯೂರು ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಭಾವನಾ, ವಿಷಯ ತಿಳಿದು ರೇಣುಕಾಸ್ವಾಮಿ ಮನೆಗೆ ಭೇಟಿ ಕೊಟ್ಟರು. ಮೃತನ ಪತ್ನಿ ಸಹನಾಗೆ ಸಾಂತ್ವನ ಹೇಳಿದರು.
ಇದನ್ನೂ ಓದಿ: Actor Darshan: ಕೊಲೆ ಕೇಸ್‌ನಲ್ಲಿ ದರ್ಶನ್ ಬಂಧನ; ನಟಿ ಸಂಜನಾಗೆ ಶಾಕ್, ರಕ್ಷಿತಾ ಹಾರ್ಟ್‌ಬ್ರೇಕ್, ದೇವರಲ್ಲಿ ಪ್ರಾರ್ಥನೆ!
ದರ್ಶನ್, ಪವಿತ್ರಗೌಡ ಸೇರಿ 13 ಮಂದಿ ಬಂಧನ
ನಟನೆ, ಸಿನಿಮಾಗಳ ಜತೆಗೆ ವಿವಾದಗಳಿಂದಲೂ ಹೆಚ್ಚು ಸುದ್ದಿಯಲ್ಲಿರುವ ಸ್ಯಾಂಡಲ್‌ವುಡ್ ನಟ ದರ್ಶನ್ (Actor Darshan) ಅವರೀಗ ಗಂಭೀರ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಗೆಳತಿ ಪವಿತ್ರಾ ಗೌಡ (Pavithra Gowda) ಅವರಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ (Renukaswamy) ಎಂಬ 28 ವರ್ಷದ ಯುವಕನ ಕೊಲೆ ಪ್ರಕರಣದಲ್ಲಿ ದರ್ಶನ್ ಅವರನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲ, ದರ್ಶನ್ ಅವರ ವಿರುದ್ಧ ಕೊಲೆ, ಅಪಹರಣ ಹಾಗೂ ಸಾಕ್ಷ್ಯನಾಶ ಪ್ರಕರಣಗಳ ಸಂಕಷ್ಟ ಎದುರಾಗಿದ್ದು, ಆರೋಪ ಸಾಬೀತಾದರೆ ಇವರಿಗೆ ಕಠಿಣ ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನ್ಯಾಪ್ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐಪಿಸಿ ಸೆಕ್ಷನ್ 364ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಿದ್ದಾರೆ. ಇನ್ನು ಗೋಡೌನ್‌ನಲ್ಲಿ ಇರಿಸಿಕೊಂಡು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಇದಾದ ಬಳಿಕ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ. ಹಾಗಾಗಿ, ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೇಸ್ ದಾಖಲಾಗಲಿದೆ. ಇನ್ನು ಹತ್ಯೆ ಬಳಿಕ ಶವವನ್ನು ಬಿಸಾಕಿದ ಕಾರಣ ಸಾಕ್ಷ್ಯ ನಾಶದ ಪ್ರಕರಣವನ್ನೂ ಸೇರಿಸಲಾಗುತ್ತದೆ. ಹಾಗಾಗಿ, ಯಾವ ಪ್ರಕರಣಗಳಲ್ಲಿ ಆರೋಪ ಸಾಬೀತಾದರೂ ದರ್ಶನ್ ಅವರಿಗೆ ಜೈಲು ಶಿಕ್ಷೆಯಾಗಲಿದೆ. ಕೊಲೆ ಕೇಸ್‌ನಲ್ಲಿ ಆರೋಪ ಸಾಬೀತಾದರಂತೂ ಜೀವಾವಧಿ ಶಿಕ್ಷೆಯಾಗುತ್ತದೆ ಎಂದು ಹೇಳಲಾಗುತ್ತಿದೆ.
ದರ್ಶನ್ ಕೈವಾಡವೇನು?
ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್ ಕಳುಹಿಸಿದ ಹಿನ್ನೆಲೆಯಲ್ಲಿ ದರ್ಶನ್ ಆಪ್ತರು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮತ್ತೊಂದಿಷ್ಟು ಮೂಲಗಳ ಪ್ರಕಾರ, ರೇಣುಕಾಸ್ವಾಮಿ ಮೇಲೆ ದರ್ಶನ್ ಅವರೇ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದಾದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ರೇಣುಕಾಸ್ವಾಮಿ ಮೃತಪಟ್ಟಿದ್ದರು. ನಂತರ ಶವವನ್ನು ಚರಂಡಿ ಬಳಿ ಎಸೆಯಲಾಗಿತ್ತು ಎನ್ನಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ