Site icon Vistara News

Assault Case : ಚಿಪ್ಸ್ ಕೊಡಿಸುವ ನೆಪದಲ್ಲಿ ಮಗುವಿನ ಕತ್ತು ಕೊಯ್ದ ಕಿರಾತಕ

Assault Case

ಚಿತ್ರದುರ್ಗ: ಕಿರಾತಕನೊಬ್ಬ ಪರಿಚಿತ ಮಗುವಿಗೆ ಚಿಪ್ಸ್ ಕೊಡಿಸುವ ನೆಪದಲ್ಲಿ ಕತ್ತು ಕೊಯ್ದು ಹಲ್ಲೆ (Assault Case ) ನಡೆಸಿದ್ದಾನೆ. ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಮಲಸಿಂಗನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಲಸಿಂಗನಹಳ್ಳಿ ಗ್ರಾಮದ ಹನುಮಂತ (36) ಎಂಬಾತ ಬಾಲಕಿ ಮೇಲೆ ಹಲ್ಲೆ‌ ನಡೆಸಿದವನು.

ಹನುಮಂತ ಕಂಠಪೂರ್ತಿ ಕುಡಿದು ಬಂದವನೇ 5 ವರ್ಷದ ಬಾಲಕಿಗೆ ಚಿಪ್ಸ್‌ ಕೊಡಿಸುವುದಾಗಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ಚಾಕುವಿನಿಂದ ಮಗುವಿನ ಕತ್ತಿಗೆ ಇರಿದಿದ್ದಾನೆ. ಹಲ್ಲೆ ನಡೆಸಿ ಬಾಲಕಿಯನ್ನು ಜಮೀನಿನಲ್ಲಿ ಬಿಸಾಡಿ ಹೋಗಿದ್ದಾನೆ.

Assault Case

ಕೂಡಲೇ ಬಾಲಕಿಯ ಅಳು ಕೇಳಿ ಅಕ್ಕ-ಪಕ್ಕದ ಜಮೀನಿನಲ್ಲಿದ್ದವರು ಬಂದು ನೋಡಿದ್ದಾರೆ. ಈ ವೇಳೆ ಮಗು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತ್ವರಿತ ಚಿಕಿತ್ಸೆಯಿಂದ ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ಮುಂದುವರಿದಿದೆ.

ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ‌ ಪಡೆದಿದ್ದಾರೆ. ಚಿತ್ರಹಳ್ಳಿ ಗೇಟ್ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Road Accident : ನಿದ್ರೆಯಲ್ಲಿದ್ದ ಪ್ರಯಾಣಿಕನ ಎದೆ ಸೀಳಿದ ಲಾರಿ; ಛಿದ್ರ ಛಿದ್ರಗೊಂಡ ಖಾಸಗಿ ಬಸ್‌

ಕರೆಂಟ್‌ ಶಾಕ್‌ಗೆ ಒದ್ದಾಡಿ ಪ್ರಾಣಬಿಟ್ಟಳು ಬಾಲಕಿ

ವಿಜಯನಗರ: ತಾಯಿಯ ಕೈತುತ್ತು ತಿಂದು ಆ ಬಾಲಕಿ ಖುಷಿ ಖುಷಿಯಿಂದ ಬ್ಯಾಗ್‌ ಏರಿಸಿಕೊಂಡು ಶಾಲೆಯತ್ತ ಹೆಜ್ಜೆ ಹಾಕಿದ್ದಳು. ಆದರೆ ಕ್ರೂರ ವಿಧಿಗೆ ಪ್ರಪಂಚ ನೋಡಬೇಕಾದ ಬಾಲಕಿ ಉಸಿರು ಚೆಲ್ಲಿದ್ದಾಳೆ. ಮುಂಜಾನೆ ಶಾಲೆಗೆ ಹೋದವಳು ಮನೆಗೆ ಹೆಣವಾಗಿ ಬಂದಿದ್ದಾಳೆ. ವಿದ್ಯುತ್ ಸ್ಪರ್ಶಿಸಿ (Electric shock) ಬಾಲಕಿ ದಾರುಣ ಅಂತ್ಯ ಕಂಡಿದ್ದಾಳೆ.

ವಿಜಯನಗರದ ಕೂಡ್ಲಿಗಿ ತಾಲೂಕಿನ ಕಾತ್ರಿಕಾಯನಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ತುಳಸಿ ಎಂಬಾಕೆ ಕರೆಂಟ್‌ ಶಾಕ್‌ನಿಂದ ಮೃತಪಟ್ಟವಳಿ. ತುಳಸಿ ಅದೇ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಳು.

ಬಾಲಕಿ ತುಳಸಿ ಕರೆಂಟ್‌ ಶಾಕ್‌ನಿಂದ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಮಡುಗಟ್ಟಿದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೂಡ್ಲಿಗಿ ಪಿಎಸ್‌ಐ ಎರಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಕ್ಕೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version