Site icon Vistara News

ಜನಸಂಕಲ್ಪ ಯಾತ್ರೆ | ಟಿಕೆಟ್‌ ಆಕಾಂಕ್ಷಿಗಳಿಗೆ ಭಾಷಣದ ಪ್ರಾರಂಭದಲ್ಲೇ ಎಚ್ಚರಿಕೆ ಕೊಟ್ಟ ಸಿಎಂ ಬೊಮ್ಮಾಯಿ

CM bommai called for unity among ticket aspirants

ಚಿತ್ರದುರ್ಗ(ಚಳ್ಳಕೆರೆ): ಬಿಜೆಪಿ ಅಧಿಕಾರಕ್ಕೆ ಬರಬೇಕೆಂದರೆ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದು ಎಚ್ಚರಿಕೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಭಾಷಣವನ್ನು ಆರಂಭಿಸಿದರು.

ಜನಸಂಕಲ್ಪ ಯಾತ್ರೆಯಲ್ಲಿ ಭಾಷಣ ಮಾಡಿದ ಬೊಮ್ಮಾಯಿ, ಚಳ್ಳಕೆರೆ ಜನರು ಈ ಬಾರಿ ಬಿಜೆಪಿಯನ್ನು ಗೆಲ್ಲಿಸುವ ಸಂಕಲ್ಪ ಮಾಡಿದ್ದಾರೆ. ಆದರೆ ಅದು ಸಾಧ್ಯವಾಗಬೇಕು ಎಂದರೆ ನಾವೆಲ್ಲರೂ ಒಂದಾಗಿರಬೇಕು. ಈ ಮಾತನ್ನು ಎಲ್ಲರೂ ಅರ್ಥ ಮಾಡಿಕೊಳ್ಳುತ್ಥಾರೆ ಎಂದು ನಂಬಿದ್ದೇನೆ ಎಂದರು.

ಚಳ್ಳಕೆರೆ ಇಡೀ ದೇಶದಲ್ಲಿ ದೊಡ್ಡ ನಗರವಾಗಲಿದೆ.. ಚಳ್ಳಕೆರೆಗೆ ಇಸ್ರೋ ಬಂದಿದೆ. ಹೀಗಾಗಿ ಇಡೀ ವಿಶ್ವದಲ್ಲಿ ಐದನೇ ಲ್ಯಾಂಡಿಂಗ್ ಸೆಂಟರ್ ಆಗಲಿದೆ. ಇದು ಕೇಂದ್ರ ಸರ್ಕಾರದ ಕೊಡುಗೆ ಎಂದರು.

ಮತ್ತೆ ಸ್ಥಳೀಯ ಭಿನ್ನಾಭಿಪ್ರಾಯದ ಕುರಿತು ಪ್ರಸ್ತಾಪಿಸಿದ ಸಿಎಂ ಬೊಮ್ಮಾಯಿ, ಕಳೆದ ಬಾರಿ ನಾವು ಇಲ್ಲಿ ಗೆಲ್ಲುವ ಅವಕಾಶ ಇದ್ದರೂ ಕೂಡ ನಮ್ಮದೇ ತಪ್ಪಿನಿಂದ ಸೋತಿದ್ದೇವೆ. ಇದು ಎಸ್‌ಟಿ ಕ್ಷೇತ್ರ. ಈ ಕ್ಷೇತ್ರ ಅಭಿವೃದ್ಧಿ ಆಗಬೇಕಾಗಿದೆ. ಈ ಬಾರಿ ನಾವು ಕಮಲವನ್ನು ಅರಳಿಸಿಯೇ ಸಿದ್ದ ಎಂದು ಶಪಥ ಮಾಡಿದ್ದೇವೆ. ಬರುವಂತಹ ದಿನಗಳಲ್ಲಿ ಚಳ್ಳಕೆರೆಯ ಸಮಗ್ರ ಅಭಿವೃದ್ಧಿಯ ಹೊಣೆಯನ್ನು ನಾನೇ ಖುದ್ದು ಹೊರುತ್ತೇನೆ. ನೀವು ಬಿಜೆಪಿಯನ್ನು ಆರಿಸಿ ಕಳಿಸಿ ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರದ ಕನಸು ಕಾಣುತ್ತಿದೆ ಎಂದ ಬೊಮ್ಮಾಯಿ, ಡಿಕೆಶಿ ಮತ್ತು ಸಿದ್ದಮಯ್ಯ ಅವರ ಗೊಂದಲದಲ್ಲಿ ಕಾಂಗ್ರೆಸ್ ಮುಳುಗುವ ಹಡಗಾಗಿದೆ. ಇಡೀ ದೇಶದಲ್ಲಿ ಕಾಂಗ್ರೆಸ್‌ ಮುಳುಗಿದೆ. ರಾಜ್ಯದಲ್ಲಿಯೂ ಮುಳುಗುತ್ತೆ. ಜನಸಂಕಲ್ಪ ಯಾತ್ರೆಗೆ ಜನರ ಸ್ಪಂದನೆ ನೋಡಿ ಕಾಂಗ್ರೆಸ್‌ನವರು ಕಂಗಾಲಾಗ್ತಿದ್ದಾರೆ. ಅದಕ್ಕೆ ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.

ಈ ಭಾಗದ ಅಭಿವೃದ್ಧಿಗಾಗಿ ಭದ್ರಾ ಮೆಲ್ದಂಡೆ ಯೋಜನೆಯನ್ನ ಆರಂಭಿಸಿದ್ದೆವು. ಇದು ರಾಷ್ಟ್ರೀಯ ಯೋಜನೆಯಾಗಲಿದೆ. ಯಾವಾಗ ಯಾವಾಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆಯೋ, ಆಗ ಸಮೃದ್ಧಿ ಕರ್ನಾಟಕ ಆಗುತ್ತದೆ. ಕಾಂಗ್ರೆಸ್‌ನವರು ವೀರಶೈವ ಲಿಂಗಾಯತರನ್ನು ಒಡೆಯುವ ಹುನ್ನಾರ ಮಾಡಿದರು. ಹಿಂದುಳಿದವರನ್ನ ಒಡೆಯುವ ಹುನ್ನಾರ ಮಾಡಿದರು. ಆದರೆ ಕರ್ನಾಟಕದ ಜನ ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. 2023ರಲ್ಲಿ ಚಳ್ಳಕೆರೆಯಲ್ಲಿ ಬಿಜೆಪಿಗೆ ಗೆಲುವು ಆಗುತ್ತದೆ ಎಂಬ ವಿಶ್ವಾಸವಿದೆ ಎಂದರು.

ಪ್ರತಿಭಟನೆಯ ಬಿಸಿ

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡುತ್ತಿರುವಂತೆಯೇ ವೇದಿಕೆಯ ಸಮೀಪ ಕೆಲವರು ಪ್ರತಿಭಟನೆ ನಡೆಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆಯನ್ನು (PTCL) ತಿದ್ದುಪಡಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಇದನ್ನು ತಿದ್ದುಪಡಿ ಮಾಡದಿದ್ದರೆ ದಯಾಮರಣಕ್ಕೆ ಅವಕಾಶ ನೀಡಿ ಎಂದು ಬೋರ್ಡ್ ಹಿಡಿದು ಪ್ರತಿಭಟನೆ ನಡೆಸುತ್ತಿದ್ದರು ಇದನ್ನು ಗಮನಿಸಿದ ಬೊಮ್ಮಾಯಿ, ಕಾರ್ಯಕ್ರಮ ಮುಗಿಸಿ ನಿಮ್ಮ ಬಳಿ ಮಾತನಾಡುತ್ತೇನೆ, ಈಗ ಸುಮ್ಮನಿರಿ ಎಂದು ಮಾತು ಮುಂದುವರಿಸಿದರು.

ಇದನ್ನೂ ಓದಿ | ಜನಸಂಕಲ್ಪ ಯಾತ್ರೆ | ʼಪೂರ್ಣಿಮಾ ನಿಮಗೆಲ್ಲ ಏನಾಗಿದೆ?ʼ ಎಂದು ಶಾಸಕಿಗೆ ಗದರಿದ ಸಿಎಂ ಬೊಮ್ಮಾಯಿ

Exit mobile version