ಬೆಂಗಳೂರು: ಎಸ್‌ಸಿಎಸ್‌ಟಿ ಸಮುದಾಯಕ್ಕೆ ಮೀಸಲಾತಿ ನೀಡಿರುವ ಕ್ರಮವನ್ನು ಭರ್ಜರಿಯಾಗಿ ಚುನಾವಣೆಗೆ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿಗೆ ಪರ್ಯಾಯವಾಗಿ ಕಾಂಗ್ರೆಸ್‌ನಿಂದ ರೂಪಿಸಿರುವ ಎಸ್‌ಸಿಎಸ್‌ಟಿ ಐಕ್ಯತಾ ಸಮಾವೇಶಕ್ಕೆ ದಿನಾಂಕ ನಿಗದಿಯಾಗಿದೆ.
2023ರ ಜನವರಿ 8 ರಂದು ಚಿತ್ರದುರ್ಗದಲ್ಲಿ ಎಸ್‌ಸಿಎಸ್‌ಟಿ ಐಕ್ಯತಾ ಸಮಾವೇಶವನ್ನು ಆಯೋಜನೆ ಮಾಡಲು ತೀರ್ಮಾನ ಮಾಡಲಾಗಿದೆ.
ಸಮಾವೇಶಕ್ಕೂ ಮುನ್ನ ಸ್ಥಳೀಯವಾಗಿ ಜಾಗೃತಿ ಸಭೆಗಳು ಮಾಡಲು ನಿರ್ಧಾರ ಮಾಡಲಾಗಿದ್ದು, ಸರಿಸುಮಾರು 5 ರಿಂದ 10 ಲಕ್ಷ ಜನ ಸೇರಿಸುವ ಗುರಿ ಹೊಂದಲಾಗಿದೆ. ಎಐಸಿಸಿ ಅಧ್ಯಕ್ಷರೂ ಆದ ಮಲ್ಲಿಕಾರ್ಜುನ ಖರ್ಗೆ ಸೇರಿ ಅನೇಕ ಕಾಂಗ್ರೆಸ್ ಮುಖಂಡರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್ ನಿಂದ ಎಸ್‌ಸಿಎಸ್‌ಟಿ ಐಕ್ಯತಾ ಸಮಾವೇಶ ಸಿದ್ಧತೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೆಂಗಳೂರು ನಿವಾಸದಲ್ಲಿ ಶನಿವಾರ ಮಹತ್ವದ ಸಭೆ ನಡೆಸಲಾಗಿದೆ. ಸತೀಶ್ ಜಾರಕಿಹೊಳಿ, ಡಾ. ಜಿ ಪರಮೇಶ್ವರ್, ಎಚ್. ಸಿ. ಮಹದೇವಪ್ಪ ಸೇರಿ ಪ್ರಮುಖ ನಾಯಕರು ಭಾಗಿಯಾಗಿದ್ದರು.
ಸಮಾವೇಶಕ್ಕೂ ಮುನ್ನ ಎಲ್ಲ ಎಸ್‌ಸಿಎಸ್‌ಟಿ ಸಮುದಾಯದ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರುವ ಪರಮೇಶ್ವರ್, ಸತೀಶ್ ಜಾರಕಿಹೊಳಿ ನಿವಾಸದಲ್ಲಿಯೇ ಉದ್ದೇಶಪೂರ್ವಕವಾಗಿ ಸಭೆ ನಿಗದಿ ಮಾಡಿದ್ದರು.
ಕಾಂಗ್ರೆಸ್ ಸಭೆಗಳಿಂದ ದೂರ ಉಳಿಯುತ್ತಿದ್ದ ಸತೀಶ್ ಜಾರಕಿಹೊಳಿ ಅವರನ್ನು ಸೆಳೆಯಬೇಕೆಂಬ ಉದ್ದೇಶದಿಂದ ಹೀಗೆ ಮಾಡಿದ್ದು, ಆ ಸಭೆಯಲ್ಲೇ ದಿನಾಂಕ ನಿಗದಿ ಮಾಡಲಾಗಿದೆ.
ಈ ಕುರಿತು ಭಾನುವಾರ ಪ್ರತಿಕ್ರಿಯೆ ನೀಡಿರುವ ಎಚ್.ಸಿ. ಮಹದೇವಪ್ಪ, ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿ ಚುನಾವಣೆ ಎದುರಿಸಲಿದೆ. ಬಿಜೆಪಿಯ ಸಂವಿಧಾನ ವಿರೋಧಿ ನಡೆ ಕಾನೂನುಬಾಹಿರ ಆಡಳಿತದಿಂದ ಜನರ ಜೀವನ ಹಾಳಾಗುತ್ತಾ ಇದೆ. ಇದನ್ನು ಸರಿ ಮಾಡುವುದು ಕಾಂಗ್ರೆಸ್ ಜವಾಬ್ದಾರಿ ಇರುವುದರಿಂದ ಒಗ್ಗಟ್ಟಾಗಿ ಕಾರ್ಯಕ್ರಮ ಮಾಡುತ್ತಿದ್ದೇವೆ, ದಲಿತ ಸಂಘಟನೆಗಳು ನಾಯಕರೆಲ್ಲ ಒಗ್ಗಟ್ಟಾಗಿ ಹೋಗುತ್ತೇವೆ. ಎಸ್‌ಸಿಎಸ್‌ಟಿ ಮತಗಳು ಕಾಂಗ್ರೆಸ್ ಆಧಾರ ಸ್ಥಂಭ, ಮೂಲ ಮತ ಅವು. ಒಳಗುಂಪುಗಳು ಕೆಲವು ಕಾರಣದಿಂದಾಗಿ ಆಚೆ ಈಚೆ ಆಗಿದೆ. ಅದೆಲ್ಲವನ್ನೂ ಒಟ್ಟೂಗೂಡಿಸುವ ಕೆಲಸ ನಾವು ಮಾಡುತ್ತೇವೆ.
ಇದನ್ನೂ ಓದಿ | Ramulu effect| ಎಸ್‌ಟಿ ಸಮಾವೇಶದ ಮೂಲಕ ಭಾರತ್ ಜೋಡೋ, ಸಿದ್ದರಾಮೋತ್ಸವಕ್ಕೆ ಟಾಂಗ್: ರಾಮುಲುಗೆ ಪ್ರತಿಷ್ಠೆ