Site icon Vistara News

Contaminated Water : ಕಾವಾಡಿಗರ ಹಟ್ಟಿ ವಿಷ ಜಲ ದುರಂತ ಬಲಿ ಸಂಖ್ಯೆ 7ಕ್ಕೆ; 20 ದಿನವಾದರೂ ನಿಲ್ಲದ ಸಾವಿನ ಮೆರವಣಿಗೆ

Kawadigara hatti tragedy

ಚಿತ್ರದುರ್ಗ: ಜಿಲ್ಲೆಯ ಕಾವಾಡಿಗರಹಟ್ಟಿಯಲ್ಲಿ (Kawadigara Hatti) ಕಳೆದ ಜುಲೈ 30ರಂದು ಸಂಭವಿಸಿದ ವಿಷ ಜಲ ದುರಂತ (Contaminated Water) ಪ್ರಕರಣ ಮತ್ತೊಂದು ಜೀವ ಬಲಿ ಪಡೆದಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೇರಿದೆ. ಜತೆಗೆ ಒಂದು ಹೊಟ್ಟೆಯೊಳಗಿನ ಮಗುವೂ ಮೃತಪಟ್ಟಿದ್ದನ್ನು ಸೇರಿಸಿದರೆ ಬಲಿ ಸಂಖ್ಯೆ ಎಂಟು ಆಗಲಿದೆ. ಇದರ ಜತೆಗೆ ಈ ಭಾಗದಲ್ಲಿ ಇನ್ನೂ ಹಲವು ಕಡೆ ವಿಷ ಜಲ ದುರಂತಗಳು ಮರುಕಳಿಸುತ್ತಿವೆ.

ಕಳೆದ ಸೋಮವಾರ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದ ಕಾವಾಡಿಗರ ಹಟ್ಟಿ ನಿವಾಸಿ ಶಿವಮ್ಮ (70) ಅವರು ಶುಕ್ರವಾರ ರಾತ್ರಿ ಚಿಕಿತ್ಸೆ ಫಲ ನೀಡದೆ ಮೃತಪಟ್ಟಿದ್ದಾರೆ ಎಂದು ಶಿವಮ್ಮ ಸೊಸೆ ಜ್ಯೋತಿ ಹೇಳಿದ್ದಾರೆ. ʻʻನಮ್ಮ ಅತ್ತೆ ವಾಂತಿ ಬೇಧಿ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿದ್ದರು. ನಮ್ಮ ಏರಿಯಾದಲ್ಲಿ ಈಗ ಕೌನ್ಸಿಲರೇ ಇಲ್ಲ. ಉಳಿದವರು ಯಾರೂ ನಮ್ಮತ್ತ ತಿರುಗಿ ನೋಡುತ್ತಿಲ್ಲʼʼ ಎಂದು ಅವರು ಹೇಳಿದರು. ಇಲ್ಲಿ ಈಗಾಗಲೇ ಹಲವು ಮಂದಿ ಆಸ್ಪತ್ರೆಗೆ ಸೇರಿ ಸ್ವಲ್ಪ ಆರಾಮ ಆಯಿತು ಎಂದು ಡಿಸ್ಚಾರ್ಜ್‌ ಆಗಿ ಮನೆಗೆ ಹೋದರೂ ಮತ್ತೆ ಸಮಸ್ಯೆ ಕಾಣಿಸಿಕೊಳ್ಳುವುದರಿಂದ ಮತ್ತೆ ಆಸ್ಪತ್ರೆಗೆ ಸೇರುತ್ತಿದ್ದಾರೆ.

ಜುಲೈ 30ರಂದು ಭಾನುವಾರ ರಾತ್ರಿ ಚಿತ್ರದುರ್ಗ ಜಿಲ್ಲೆಯ (Chitradurga News) ಕಾವಾಡಿಗರಹಟ್ಟಿಯ ಟ್ಯಾಂಕ್‌ನಿಂದ ಬಿಟ್ಟ ನೀರನ್ನು ಸೇವಿಸಿ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಇವರ ಪೈಕಿ ಹಟ್ಟಿಯ ನಿವಾಸಿಗಳಾದ ಮಂಜುಳಾ, ರಘು, ಪ್ರವೀಣ, ರುದ್ರಪ್ಪ, ಪಾರ್ವತಮ್ಮ, ಕರಿಬಸಪ್ಪ ಅವರು ಈಗಾಗಲೇ ಮೃತಪಟ್ಟಿದ್ದಾರೆ. ಜತೆಗೆ ರಘು ಅವರ ಸೋದರಿ ಉಷಾ ಅವರ ಹೊಟ್ಟೆಯಲ್ಲಿದ್ದ ಎಂಟು ತಿಂಗಳು 10 ದಿನದ ಮಗು ಕೂಡಾ ಮೃತಪಟ್ಟಿದ್ದಾರೆ. ಇದೀಗ ಶಿವಮ್ಮ ಅವರದು ಅಧಿಕೃತವಾಗಿ ಏಳನೇ ಸಾವು.

ಮೃತಪಟ್ಟ ದುರ್ದೈವಿಗಳು ಇವರು

  1. ಮಂಜುಳಾ: ಕವಾಡಿಗರಹಟ್ಟಿಯಲ್ಲಿ ನಡೆದ ದುರಂತದಲ್ಲಿ ಮೊದಲು ಮೃತಪಟ್ಟಿದ್ದು ಮಂಜುಳಾ ಎಂಬ 27 ವರ್ಷದ ಯುವತಿ. ನೀರು ಕುಡಿದ ಬಳಿಕ ಅಸ್ವಸ್ಥಗೊಂಡ ಹಲವರಲ್ಲಿ ಆಕೆ ಒಬ್ಬರು. ಆದರೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.
  2. ರಘು : ಕವಾಡಿಗರ ಹಟ್ಟಿಯ ರಘು (26) ಭಾನುವಾರ ದುರಂತ ನಡೆದ ದಿನ ರಾತ್ರಿ ಮನೆಯಲ್ಲಿ ಊಟ ಮಾಡಿ ಕೆಲಸದ ನಿಮಿತ್ತ ಬೆಂಗಳೂರು ಬಸ್‌ ಹತ್ತಿದ್ದರು. ಆದರೆ, ಬೆಳಗ್ಗೆ ಬೆಂಗಳೂರಿನಲ್ಲಿ ಇಳಿದಾಗ ವಾಂತಿ ಬೇಧಿ ಶುರುವಾಗಿತ್ತು. ಅಷ್ಟು ಹೊತ್ತಿಗೆ ಅವರಿಗೆ ಊರಿನಲ್ಲಿ ನಡೆದ ಘಟನಾವಳಿಗಳ ವಿವರ ದೊರಕಿತ್ತು. ಕೂಡಲೇ ಅವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸೇರಿದರು. ಆದರೆ, ಅಲ್ಲೂ ಅವರ ಪ್ರಾಣ ಉಳಿಯಲಿಲ್ಲ.
  3. ಪ್ರವೀಣ್‌: ವಡ್ಡರಸಿದ್ದವ್ವನ ಹಳ್ಳಿಯ ಪ್ರವೀಣ್‌ ಕಲುಷಿತ ನೀರಿಗೆ ನಡೆದ ಮೂರನೇ ಬಲಿ. ಪ್ರವೀಣ್‌ ಅವರು ಭಾನುವಾರ ರಾತ್ರಿ ಕವಾಡಿಗರ ಹಟ್ಟಿಗೆ ಬಂದಿದ್ದು, ಅಲ್ಲಿ ನೀರು ಕುಡಿದಿದ್ದರು. ಅವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೂ ಪ್ರಾಣ ಉಳಿಯಲಿಲ್ಲ.
  4. ರುದ್ರಪ್ಪ: ಕವಾಡಿಗರ ಹಟ್ಟಿ ನಿವಾಸಿ ರುದ್ರಪ್ಪ (57) ಅವರು ಶುಕ್ರವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಸಾವಿಗೀಡಾಗಿದ್ದಾರೆ. ಕಳೆದ ಮೂರು ದಿನದಿಂದ ಇವರು ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
  5. ಪಾರ್ವತಮ್ಮ: ಕವಾಡಿಗರ ಹಟ್ಟಿಯ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಪಾರ್ವತಮ್ಮ (60) ಅವರು ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ. ಭಾನುವಾರ ಅಸ್ವಸ್ಥರಾಗಿದ್ದ ಪಾರ್ವತಮ್ಮ ಅವರು ಬಳಿಕ ಸ್ವಲ್ಪ ಗುಣಮುಖರಾಗಿ ಮನೆಗೆ ಹೋಗಿದ್ದರು. ಅವರು ಪಾರ್ಶ್ವ ವಾಯು ಪೀಡಿತರಾಗಿರುವುದರಿಂದ ಅವರಿಗೆ ಕಳೆದ ಮೂರು ದಿನಗಳಿಂದ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರ ಸಾವೂ ಸಂಭವಿಸಿದೆ.
  6. ದುರಂತದಲ್ಲಿ ಮೃತಪಟ್ಟ ರಘು ಅವರ ತಂಗಿ ಉಷಾ ಅವರು ಹೆರಿಗೆಗಾಗಿ ತವರಿಗೆ ಬಂದಿದ್ದರು. ಅವರಿಗೂ ಅನಾರೋಗ್ಯ ಕಾಡಿದಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರ ಹೊಟ್ಟೆಯಲ್ಲಿದ್ದ 8 ತಿಂಗಳು 10 ದಿನದ ಮಗುವಿನ ಹೃದಯ ಸ್ತಬ್ಧವಾಗಿತ್ತು.
  7. ಕರಿಬಸಪ್ಪ (35): ಚಿತ್ರದುರ್ಗ ತಾಲೂಕಿನ ಚಿಕ್ಕಪುರ ಗ್ರಾಮದ ಕರಿಬಸಪ್ಪ ಅವರು ಜುಲೈ 30, 31ರಂದು ಕಾವಾಡಿಗರಹಟ್ಟಿಯ ಸಂಬಂಧಿಕರ ಮನೆಗೆ ಬಂದಿದ್ದರು.. ಆಗಸ್ಟ್‌ 1ರಂದು ಇವರು ಚಿತ್ರದುರ್ಗದ ಕೆಳಗೋಟೆ ಬಡಾವಣೆಗೆ ತೆರಳಿದ್ದರು. ಅಲ್ಲಿ ಅವರಿಗೆ ವಾಂತಿ ಬೇಧಿ ಕಾಣಿಸಿಕೊಂಡು ಆಸ್ಪತ್ರೆ ಸೇರಿದ್ದರು. ಆ. 7ರಂದು ಅವರು ಮೃತಪಟ್ಟಿದ್ದಾರೆ.
  8. ಶಿವಮ್ಮ (76): ಕಾವಾಡಿಗರ ಹಟ್ಟಿ ನಿವಾಸಿಯಾಗಿರುವ ಶಿವಮ್ಮ ಅವರು ಕಳೆದ ಸೋಮವಾರ (ಆಗಸ್ಟ್‌ 14) ವಾಂತಿ ಬೇಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್‌ 18ರಂದು ರಾತ್ರಿ ಅವರು ಕೊನೆಯುಸಿರು ಎಳೆದಿದ್ದಾರೆ.

    ಇದನ್ನೂ ಓದಿ: Contaminated Water : ವಿಷ ಜಲದಿಂದ ಮೃತಪಟ್ಟವರ 5 ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ; ತಕ್ಷಣವೇ FD ಇಡಲು ಧಾವಂತ!

ಇನ್ನೂ ಪತ್ತೆಯಾಗದ ವಿಷದ ಮೂಲ

ಘಟನೆ ನಡೆದು ಒಂಬತ್ತು ದಿನವಾದರೂ ಕಾವಾಡಿಗರಹಟ್ಟಿಯ ದುರಂತದ ಮೂಲ ಯಾವುದು ಎನ್ನುವುದು ಪತ್ತೆಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಸಂಶಯಿತ ಆರೋಪಿ ನೀರುಗಂಟಿ ಸುರೇಶ್‌ ಮತ್ತು ಎಂಜಿನಿಯರ್‌ಗಳ ಸಹಿತ ಐದು ಮಂದಿಯನ್ನು ಅಮಾನತು ಮಾಡಲಾಗಿದೆ. ನೀರಿನ ಪರೀಕ್ಷಾ ವರದಿಗಳು ಒಂದೊಂದು ಒಂದೊಂದು ಕಥೆ ಹೇಳುತ್ತಿವೆ. ಯಾವುದೂ ನಿರ್ದಿಷ್ಟ ಕಾರಣವನ್ನು ಹೇಳುತ್ತಿಲ್ಲ. ಲಿಂಗಾಯತರಾಗಿರುವ ನೀರುಗಂಟಿ ಸುರೇಶ್‌ ಅವರ ಮಗಳನ್ನು ಕಾವಾಡಿಗರ ಹಟ್ಟಿಯ ದಲಿತ ಯುವಕ ಪ್ರೀತಿಸಿ ಮದುವೆಯಾದ ದ್ವೇಷದಲ್ಲಿ ಅವರು ನೀರಿಗೆ ವಿಷ ಬೆರೆಸಿದ್ದರು ಎಂಬ ಆರೋಪವಿದ್ದು, ಈ ಬಗ್ಗೆ ಇನ್ನೂ ತನಿಖೆ ನಡೆದಿಲ್ಲ.

ಸಮರ್ಥ ಅಧಿಕಾರಿಯಿಂದ ತನಿಖೆಗೆ ಆಗ್ರಹ

ಈ ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕಾವಾಡಿಗರ ಹಟ್ಟಿ ಜನ ಆರೋಪಿಸುತ್ತಿದ್ದಾರೆ. ಸಮರ್ಥ ತನಿಖಾಧಿಕಾರಿಯಿಂದ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮೀಸಲು ಕೋಟಾದಿಂದ ಗೆದ್ದಿರುವ ಎಚ್‌.ಸಿ. ಮಹದೇವಪ್ಪ ಅವರು ಈಗ ಸಮಾಜ ಕಲ್ಯಾಣ ಸಚಿವರಾಗಿದ್ದಾರೆ. ಆದರೆ ಅವರು ನಮ್ಮ ಸಮುದಾಯದ ಇಲಾಖೆ ಮಂತ್ರಿಯಾಗಿ ಇದುವರೆಗೂ ಭೇಟಿ ನೀಡಿಲ್ಲ ಎನ್ನುವ ಬೇಸರ ಇಲ್ಲಿನ ಜನರಿಗೆ ಇದೆ.

Exit mobile version