ಹಿರಿಯೂರು(ಚಿತ್ರದುರ್ಗ): ಸಮಾಜದಲ್ಲಿ ಜಾತಿ ಭೇದ ಇಲ್ಲದಂತೆ, ಎಲ್ಲ ಸಮುದಾಯದವರೂ, ಹಿಂದು-ಮುಸ್ಲಿಮರೂ ಸಹಬಾಳ್ವೆ ನಡೆಸಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆ ಎಂದು ಬಿಜೆಪಿ ರಾಷ್ಟ್ರೀಯ ಸಂಸದೀಯ ಸಮಿತಿ ಸದಸ್ಯ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಹಿರಿಯೂರಿನಲ್ಲಿ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಯಡಿಯೂರಪ್ಪ ಮಾತನಾಡಿದ್ದಾರೆ.
ಮೂರು ತಲೆಮಾರಿಗಾಗುವಷ್ಟು ಹಣ ಮಾಡಿಕೊಂಡಿದ್ದೇವೆ ಎಂದು ಸ್ವತಃ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಹೇಳಿಕೊಂಡಿದ್ದಾರೆ. ಕಾಂಗ್ರೆಸ್‌ನವರು ಸರ್ಕಾರದ ಖಜಾನೆಯನ್ನು ಲೂಟಿ ಮಾಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಇಲ್ಲ. ಕಾಂಗ್ರೆಸ್ ನಾಯಕರು ಈ ಹೇಳಿಕೆಯನ್ನು ಖಂಡಿಸದೇ ಒಪ್ಪಿಕೊಂಡಿದ್ದಾರೆ ಎನ್ನುವುದು ಇದನ್ನು ಸಾಬೀತುಪಡಿಸಿದೆ.
ಹಣ, ಹೆಂಡ, ಅಧಿಕಾರ, ಜಾತಿ ವಿಷಬೀಜ ಬಿತ್ತಿ ಅಧಿಕಾರಕ್ಕೆ ಬರಬಹುದು ಎಂದು ಕಾಂಗ್ರೆಸ್ ತಿಳಿದಿತ್ತು, ಆದರೆ ಈ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಆಟ ನಡೆಯುವುದಿಲ್ಲ.
ಮೈಸೂರು ಮಹಾರಾಣಿಯವರು ತಮ್ಮ ಒಡವೆಗಳನ್ನು ಮಾರಿ ವಾಣಿವಿಲಾಸ ಜಲಾಶಯ ಕಟ್ಟಿಸಲು ಸಹಕಾರ ನೀಡಿದರು. ಇದೀಗ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿರುವುದರಿಂದ ಚಿತ್ರದುರ್ಗ ಜಿಲ್ಲೆಗೂ ಸಹಾಯ ಆಗುತ್ತದೆ.
ಸಿಎಂ ಬಸವರಾಜ ಬೊಮ್ಮಾಯಿ ಅವರೂ ಕೇಳಿದ ಯೋಜನೆಗಳನ್ನೆಲ್ಲ ಮಂಜೂರು ಮಾಡಿದ್ದಾರೆ. ಬಿಜೆಪಿ ಎಂದರೆ ಭದ್ರಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಎಂದರೆ ಬಿಜೆಪಿ ಎನ್ನುವಂತಾಗಿದೆ. ಈ ಬಾರಿ ಜಿಲ್ಲೆಯ ಏಳಕ್ಕೆ ಏಳೂ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದರು.
ನಮಗೆ ಜಾತಿ ಭಿನ್ನತೆ ಇಲ್ಲ. ಹಿಂದು, ಮುಸ್ಲಿಮರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು ಎನ್ನುವುದು ಬಿಜೆಪಿ, ಮೋದಿಯವರ ಅಪೇಕ್ಷೆ. ಜಾತಿ ವಿಷಬೀಜವನ್ನು ಕೆಲವರು ಬಿತ್ತುತ್ತಾರೆ, ಅದಕ್ಕೆ ಕಿವಿಗೊಡಬೇಡಿ. ಮುಸ್ಲಿಂ ಬಂಧುಗಳೂ ನಮ್ಮ ಜತೆ ಈ ಬಾರಿ ಕೈಜೋಡಿಸಿ ದೊಡ್ಡ ಅಂತರದಲ್ಲಿ ಗೆಲ್ಲಲು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ | ಜನಸಂಕಲ್ಪ ಯಾತ್ರೆ | ರಾಹುಲ್ ಗಾಂಧಿ ಹೋದ ಕಡೆಯೆಲ್ಲ ಕಾಂಗ್ರೆಸ್ ಮಟಾಷ್: ಆತ ದೇಶಾದ್ಯಂತ ಪ್ರವಾಸ ಮಾಡಲಿ ಎಂದ ಶ್ರೀರಾಮುಲು