ಹಿರಿಯೂರು(ಚಿತ್ರದುರ್ಗ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಲುಗುಣ ಪಾಪ, ಆತ ಹೋದ ಕಡೆಯೆಲ್ಲ ಕಾಂಗ್ರೆಸ್ ಪಕ್ಷ ಮಟಾಷ್ ಆಗುತ್ತಿದೆ. ಆತ ದೇಶದ ಎಲ್ಲ ಕಡೆ ಹೀಗೆಯೇ ಪ್ರವಾಸ ಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡೋಣ ಎಂದು ಸಚಿವ ಶ್ರೀರಾಮುಲು ಗೇಲಿ ಮಾಡಿದರು.
ಹಿರಿಯೂರಿನಲ್ಲಿ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಶ್ರೀರಾಮುಲು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರ ಜಲಾಶಯ ಸ್ಥಾಪನೆಯಾಗಿ 80 ವರ್ಷ ದಾಟಿದರೂ ಒಮ್ಮೆಯೂ ಭರ್ತಿ ಆಗಿರಲಿಲ್ಲ, ಕೋಡಿ ಬಿದ್ದಿರಲಿಲ್ಲ. ಅದೇನು ಯೋಗವೋ ಏನೋ, ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಬಂದಾಗ ಭದ್ರಾದಿಂದ 30 ಟಿಎಂಸಿ ನೀರನ್ನು ಕೊಡಿಸುವ ನಿರ್ಧಾರ ಮಾಡಲಾಯಿತು. ಇತಿಹಾಸದಲ್ಲಿ ನೀರು ಹರಿದಿದ್ದನ್ನೇ ನೋಡದ ವೇದಾವತಿ ನದಿ ಭರ್ತಿಯಾಗಿ ಹರಿಯಿತು.
ಚಿತ್ರದುರ್ಗದ ಅನೇಕ ಕಡೆಗಳಲ್ಲಿ 2-3 ಸಾವಿರ ಅಡಿ ತೋಡಿದರೂ ಅಂತರ್ಜಲ ಸಿಗುತ್ತಿರಲಿಲ್ಲ. ವೇದಾವತಿಯಲ್ಲಿ ನೀರು ಹರಿಯುತ್ತಿರುವುದರಿಂದ 300-400 ಅಡಿಗೆ ನೀರು ಸಿಗುತ್ತಿದೆ ಎಂದರೆ ಅದಕ್ಕೆ ಬಿಜೆಪಿ ಸರ್ಕಾರ, ಇಲ್ಲಿನ ಶಾಸಕ ಪೂರ್ಣಿಮಾ ಶ್ರೀನಿವಾಸ್ ಕಾರಣ ಎಂದರು.
ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ವಾಣಿವಿಲಾಸದಲ್ಲಿ ನೀರನ್ನೇ ನೋಡಿರಲಿಲ್ಲ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲ ಮಳೆ ಹೆಚ್ಚಾಗುತ್ತದೆ, ರೈತರಿಗೆ ಸಾಕಾಗುವಷ್ಟು ಮಳೆ ಬೀಳುತ್ತದೆ. ಅದೇ ಕಾಂಗ್ರೆಸ್ ಸರ್ಕಾರ ಬಂದಾಗ ಮಳೆಯೇ ಇಲ್ಲದೇ ಭೂಮಿಯೆಲ್ಲ ಒಣಗಿ ಹೋಗುತ್ತದೆ. ನಮ್ಮ ಭಾಗದಲ್ಲಿ ಒಳ್ಳೆಯ ಮಳೆ ಬೆಳೆ ಬೀಳಬೇಕೆಂದರೆ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಬೇಕು ಎಂದರು.
ಕಾಂಗ್ರೆಸ್‌ನ ಭಾರತ್ ಜೋಡೊ ಯಾಥ್ರೆಯ ಕುರಿತು ಮಾತನಾಡಿದ ಶ್ರೀರಾಮುಲು, ಭಾರತವನ್ನು ನಿಮ್ಮ ಸ್ವಾರ್ಥಕ್ಕಾಗಿ ವಿಭಜನೆ ಮಾಡಿದಿರಿ. ಈಗ ಎಲ್ಲಿಂದ ತಂದು ಜೋಡಿಸುತ್ತೀರ? ಪಾಪ ರಾಹುಲ್ ಗಾಂಧಿ ಎಲ್ಲೆಲ್ಲಿ ಹೋಗ್ತಾನ ಅಲ್ಲೆಲ್ಲ ಕಾಂಗ್ರೆಸ್ ಮಟಾಷ್. ಅವ ಹೋದ ಕಡೆಯಲ್ಲಿ ಆ ಪಕ್ಷ ಗೆಲ್ಲಲ್ಲ.
ಈ ಬಾರಿ ಕರ್ನಾಟಕದಲ್ಲಿ ತಮ್ಮದೇ ಸರ್ಕಾರ ಅಂತ ಹೇಳ್ಯಾನ. ಆತ ನಮ್ಮ ಹಿರಿಯೂರ್ ಮೇಲೆಯೂ ಹಾದ್ ಹೋಗ್ಯಾನ, ಅವ್ರು ಗೆಲ್ಲಲ್ಲ ಬಿಡಿ. ತಮಿಳುನಾಡು, ಕೇರಳ ಎಲ್ಲ ಕಡೆ ಹೋಗ್ತಾನೆ ಅಲ್ಲೆಲ್ಲ ಕಾಂಗ್ರೆಸ್‌ನವರು ಸೋಲ್ತಾರೆ. ಅವ ಎಲ್ಲ ಕಡೆಯೂ ಹೋಗಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆ ಮಾಡೋಣ ಎಂದರು.
ಇದನ್ನೂ ಓದಿ | ನವಶಕ್ತಿ ಸಮಾವೇಶ | ತಡೀರಿ ತಾಕತ್ತಿದ್ರೆ ಎನ್ನುತ್ತ ತಲೆಗೆ ಪೇಟ ಕಟ್ಟಿದ ಶ್ರೀರಾಮುಲು ಸ್ಟೈಲಿಗೆ ಜನರಲ್ಲಿ ಸಂಚಲನ