ಚಿತ್ರದುರ್ಗ: ಚಿತ್ರದುರ್ಗದ ಏಳು ಸುತ್ತಿನ ಕೋಟೆಯನ್ನು ಯಾವುದೇ ಹಗ್ಗದ ಸಹಾಯವಿಲ್ಲದೆ ಬರಿಗೈಗಳಿಂದ ಏರುವ ಜ್ಯೋತಿರಾಜ್, ಈಗ ತಮ್ಮಂತೆಯೇ 13 ಮಂದಿಯನ್ನು ತಯಾರು ಮಾಡುತ್ತಿದ್ದಾರೆ.
ನಿರ್ಭಯವಾಗಿ ಬರಿಗೈ ಬರಿಗಾಲುಗಳಿಂದ ಕಲ್ಲಿನ ಕೋಟೆಯ ಗೋಡೆಗಳನ್ನು ಏರುವ ಕಲೆಯಿಂದಾಗಿ, ಚಿತ್ರದುರ್ಗದ ʼಜ್ಯೋತಿರಾಜ್ʼ ಅವರು ʼಕೋತಿರಾಜ್ʼ ಎಂಬ ಹೆಸರನ್ನು ಗಳಿಸಿದ್ದಾರೆ. ಈಗ ತಮ್ಮಂತೆಯೇ ಚುರುಕಾದ ಗೋಡೆ ಏರುವ ಅಥ್ಲೀಟ್‌ಗಳನ್ನು ತಯಾರು ಮಾಡುತ್ತಿದ್ದಾರೆ.
ಚಿಕ್ಕಂದಿನಿಂದಲೂ ಚಿತ್ರದುರ್ಗ ಕೋಟೆಯಲ್ಲಿಯೇ ಕಲ್ಲುಗಳು ಹಾಗೂ ಕೋತಿಗಳೊಂದಿಗೆ ತನ್ನ ಬದುಕು ಕಟ್ಟಿಕೊಂಡವರು ಜ್ಯೋತಿರಾಜ್. ಭಾರತದ ಸ್ಪೈಡರ್ ಮ್ಯಾನ್ ಎಂಬ ಖ್ಯಾತಿ ಪಡೆದ ಕೋತಿರಾಜ್, ಜೋಗಫಾಲ್ಸ್‌ಗೆ ಇಳಿದು ಕಾಲುಜಾರಿ ಬಿದ್ದಿದ್ದರು. ಅದೃಷ್ಟವಶಾತ್ ಮರುಜನ್ಮ ಪಡೆದು ಬದುಕಿ ಬಂದರು.
ಅಮೇರಿಕಾದ ಏಂಜೆಲ್ ಫಾಲ್ಸ್ ಹತ್ತುವುದು ಹಾಗೂ ಒಲಿಂಪಿಕ್ಸ್‌ನಲ್ಲಿ ಭಾರತದ ಪರವಾಗಿ ಸ್ಪರ್ಧಿಸಿ ಪದಕ ಗೆಲ್ಲುವುದು ಅವರ ಕನಸುಗಳು. ಆದರೆ ಅವು ಕನಸಾಗಿಯೇ ಉಳಿದಿವೆ. ತಮ್ಮ ಕೌಶಲ್ಯ ನಶಿಸಿ ಹೋಗುವ ಮುನ್ನ, ತಮ್ಮ ದೇಹದ ಸಾಮರ್ಥ್ಯ ಕಡಿಮೆಯಾಗುವ ಮುನ್ನ ತಮ್ಮಂತೆಯೇ ದುರ್ಗದಲ್ಲಿ ಮಿನಿ ಸ್ಪೈಡರ್ ಮ್ಯಾನ್‌ಗಳನ್ನು ಹುಟ್ಟುಹಾಕಲು ಜ್ಯೋತಿರಾಜ್ ಮುಂದಾಗಿದ್ದಾರೆ.
ಅನಾಥ ಮಕ್ಕಳನ್ನು ಗುರುತಿಸಿ ತಮ್ಮ ಸ್ವಂತ ಖರ್ಚಿನಲ್ಲಿ ರಾಕ್ ಕ್ಲೈಂಬಿಂಗ್ ತರಬೇತಿ ನೀಡುತ್ತಿದ್ದಾರೆ. ಹೀಗೆ ತರಬೇತಿ ಪಡೆಯುತ್ತಿರುವ 13 ಜನ ನಿರ್ಗತಿಕ ಯುವಕರು ಜ್ಯೋತಿರಾಜ್ ಮನೆಯಲ್ಲಿಯೇ ಆಶ್ರಯ ಪಡೆದಿದ್ದಾರೆ. ತಮ್ಮ ಗುರುವಿನ ಮಾದರಿಯಲ್ಲೇ ಕೋಟೆ ಏರಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇವರ ಮೂಲಕ ಭಾರತಕ್ಕೆ ಒಲಂಪಿಕ್ಸ್ ಪದಕ ಗೆಲ್ಲಿಸುವ ಆಶಾಭಾವ ಹೊಂದಿದ್ದಾರೆ ಜ್ಯೋತಿರಾಜ್.
ಜ್ಯೋತಿರಾಜ್ ಬಳಿ ಉತ್ತಮ ತರಬೇತಿ ಪಡೆದ ಕೆಲವರು ಈಗಾಗಲೇ ರಾಷ್ಟ್ರ ಮಟ್ಟದ ಬಂಗಾರದ ಪದಕ ಗೆದ್ದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಗುರುವಿನ ಬಯಕೆಯಂತೆ ಒಲಂಪಿಕ್ಸ್‌ನಲ್ಲಿ ಭಾಗವಹಿಸಲು ತರಬೇತಿ ಪಡೆಯುತಿದ್ದಾರೆ. ತಮ್ಮ ಸಾಧನೆಯನ್ನು ನಿಸ್ವಾರ್ಥದಿಂದ ಶಿಷ್ಯರಿಗೆ ಜ್ಯೋತಿರಾಜ್ ಧಾರೆ ಎರೆಯುತ್ತಿದ್ದಾರೆ.
ಇದನ್ನೂ ಓದಿ: ಮ್ಯಾರಥಾನ್‌ಗಾಗಿ ನೇಪಾಳಕ್ಕೆ ಹಾರಿದ ಹಾವೇರಿ ಪೋರ: ಮುಮ್ಮದ್ ಜೈದ್ ಸಾಧನೆ