Site icon Vistara News

Murder Case : ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿ ಬಲಿ; ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ

Murder case

ಚಿತ್ರದುರ್ಗ: ಅನೈತಿಕ ಸಂಬಂಧಕ್ಕೆ ವ್ಯಕ್ತಿಯೊಬ್ಬ ಬರ್ಬರವಾಗಿ (Murder Case ) ಹತ್ಯೆಯಾಗಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾ. ಹುಲಗಲಕುಂಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ರವಿಕುಮಾರ್ (35) ಕೊಲೆಯಾದವನು.

ರವಿಕುಮಾರ್‌ ಮಲಗಿದ್ದಾಗ ಕಲ್ಲು ಎತ್ತಿಹಾಕಿ ಕೊಲೆ ಸುನೀಲ್ ಎಂಬಾತ ಕೊಲೆ ಮಾಡಿದ್ದಾನೆ. ರವಿ ಪತ್ನಿ ಜತೆ ಆರೋಪಿ ಸುನೀಲ್ ಅನೈತಿಕ ಸಂಬಂಧ ಹೊಂದಿದ್ದ. ಈ ವಿಷಯ ರವಿಗೆ ತಿಳಿಯಿತು ಎಂದು ಸುನೀಲ್‌ ಕೊಲೆ‌ ಮಾಡಿದ್ದಾನೆ ಎನ್ನಲಾಗಿದೆ.

ಘಟನೆ ಬಳಿಕ ಆರೋಪಿ ಸುನೀಲ್‌ನನ್ನು ಪೊಲೀಸರು ವಶಕ್ಕೆ ಪಡೆಡಿದ್ದಾರೆ. ಸ್ಥಳಕ್ಕೆ ಪಿಎಸ್ಐ ಕಾಳಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Crematorium Problem : ಹಸುಗೂಸು ಸೇರಿ ಒಂದೇ ದಿನ 8 ಮಂದಿ ಸಾವು; ಅಂತ್ಯಕ್ರಿಯೆಗಿಲ್ಲ ಸ್ಮಶಾನ!

ನೇಹಾ ಹಿರೇಮಠ ಹತ್ಯೆ ಹಿಂದೆ ಲವ್ ಜಿಹಾದ್? ಸಿಐಡಿ ಚಾರ್ಜ್‌‌ಶೀಟ್‌ನಲ್ಲೇನಿದೆ?

ಹುಬ್ಬಳ್ಳಿ: ನಗರದಲ್ಲಿ ನಡೆದಿದ್ದ ನೇಹಾ ಹಿರೇಮಠ ಹತ್ಯೆಗೆ (Neha Hiremath Murder) ಸಂಬಂಧಿಸಿ ಪೊಲೀಸರು 483 ಪುಟಗಳ ಚಾರ್ಜ್​ಶೀಟ್ (Charge Sheet) ಅನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಕೊಲೆಗೆ ಆರೋಪಿಯ ಹತಾಶೆಯೇ ಕಾರಣ ಎಂದು ಸಿಐಡಿ ಪೊಲೀಸರು (CID Police) ಕೋರ್ಟ್​ಗೆ ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣದಲ್ಲಿ ಲವ್ ಜಿಹಾದ್ (Love Jihad) ​ಕೋನ ಇದೆಯೇ ಎಂಬ ಬಗ್ಗೆ ಯಾವುದೇ ಅಂಶವನ್ನು ಸಿಐಡಿ ಉಲ್ಲೇಖಿಸಿಲ್ಲ.

ಕೃತ್ಯದ ಹಿಂದೆ ಲವ್‌ ಜಿಹಾದ್‌ ಇದೆ ಎಂದು ನೇಹಾ ಹಿರೇಮಠಳ ತಂದೆ ನಿರಂಜನ್‌ ಹಿರೇಮಠ ಆರೋಪಿಸಿದ್ದರು. ಪ್ರಕರಣ ನಡೆದ ಬಳಿಕ ರಾಜ್ಯದಲ್ಲಿ ಇದರ ಬಗ್ಗೆ ವ್ಯಾಪಕವಾದ ಪ್ರತಿರೋಧ ವ್ಯಕ್ತವಾಗಿತ್ತು. ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿತ್ತು. ಹಿಂದೂ ಸಂಘಟನೆಗಳು ಲವ್‌ ಜಿಹಾದ್‌ಗೆ ತಡೆಗಟ್ಟಲು ಸಮಗ್ರ ಕಾರ್ಯತಂತ್ರಕ್ಕಾಗಿ ಒತ್ತಾಯಿಸಿದ್ದವು.

ಇದೀಗ ನೇಹಾಳ ತಂದೆ, ತಾಯಿ, ಸಹೋದರ, ಸಹಪಾಠಿಗಳು, ಗೆಳತಿಯರು, ಬಿವಿಬಿ ಕಾಲೇಜಿನ ಉಪನ್ಯಾಸಕರು ಸೇರಿದಂತೆ ಒಟ್ಟು 99 ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಪ್ರತ್ಯಕ್ಷ ಸಾಕ್ಷಿಗಳು, ಸಿಸಿಟಿವಿ ದೃಶ್ಯಾವಳಿಗಳು, ದಾಖಲೆಗಳು, ಮರಣೋತ್ತರ ಶವ ಪರೀಕ್ಷೆ ಕೈಗೊಂಡ ವೈದ್ಯರು ಹಾಗೂ ತಜ್ಞರ (ಫೊರೆನ್ಸಿಕ್) ವರದಿಗಳೂ ಚಾರ್ಜ್‌ಶೀಟ್‌ನಲ್ಲಿ ಅಡಕವಾಗಿವೆ.

ಆರೋಪಿ ಫಯಾಜ್ ವಿರುದ್ಧ ಐಪಿಸಿ ಕಲಂ 302 (ಮರಣದಂಡನೆ ಇಲ್ಲವೇ ಜೀವಾವಧಿ ಶಿಕ್ಷೆ), 341(ಒಂದು ತಿಂಗಳ ಜೈಲು ಶಿಕ್ಷೆ) ಹಾಗೂ 506 (ಜೀವ ಬೆದರಿಕೆಗಾಗಿ 7 ವರ್ಷಗಳ ಜೈಲು ಶಿಕ್ಷೆ) ಅಡಿಯಲ್ಲಿ ದೋಷಾರೋಪ ಹೊರಿಸಲಾಗಿದೆ.

ಏನಿದು ಪ್ರಕರಣ?

ಫಯಾಜ್​ ಮತ್ತು ನೇಹಾ 2020-21ರಲ್ಲಿ ಹುಬ್ಬಳ್ಳಿಯ ಪಿ.ಸಿ.ಜಾಬಿನ್ ಕಾಲೇಜಿನಲ್ಲಿ ಬಿಸಿಎ ಅಧ್ಯಯನ ಮಾಡುತ್ತಿದ್ದಾಗ ಸಹಪಾಠಿಗಳಾಗಿದ್ದರು. ಇಬ್ಬರೂ ಆರಂಭದಲ್ಲಿ ಸ್ನೇಹಿತರಾಗಿದ್ದರು. 2022ರಲ್ಲಿ ಕ್ರಮೇಣ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. 2024ರ ಮಾರ್ಚ್ ತಿಂಗಳಿನಲ್ಲಿ ಇಬ್ಬರಿಗೂ ಮನಸ್ತಾಪ ಉಂಟಾಗಿತ್ತು. ಇದರಿಂದ ಬೇಸತ್ತ ನೇಹಾ, ಫಯಾಜ್ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದಳು.

ಫಯಾಜ್‌ನನ್ನು ನೇಹಾ ನಿರ್ಲಕ್ಷ್ಯ ಮಾಡಲು ಆರಂಭಿಸಿದ್ದರಿಂದ ಆತ ಹತಾಶೆಗೊಂಡು ಕೊಲೆ ಮಾಡಲು ನಿರ್ಧರಿಸಿದ್ದ. 2024ರ ಏಪ್ರಿಲ್ 18ರಂದು ಸಂಜೆ 4.40ರ ವೇಳೆಗೆ ಚಾಕುವಿನಿಂದ ಮನಬಂದಂತೆ ಚುಚ್ಚಿ ಕೊಲೆ ಮಾಡಿದ್ದಾನೆ. ಕೊಲೆಗೂ ಮುನ್ನ ಫಯಾಜ್, “ಇಷ್ಟು ದಿನ ಪ್ರೀತಿಸಿ ಈಗ ಮೋಸ ಮಾಡುತ್ತಿದ್ದೀಯಾ?” ಎಂದು ಚೀರಾಡಿ ಆಕೆಗೆ ಚಾಕುವಿನಿಂದ ಚುಚ್ಚಿ, ಚಾಕು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ ಎಂದು ಸಿಐಡಿ ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ.

ನೇಹಾ ಕೊಲೆಗೆ ಧಾರವಾಡದಲ್ಲಿ ಫಯಾಜ್​ ಸಂಚು ರೂಪಿಸಿದ್ದ. ಧಾರವಾಡದಲ್ಲಿ ಟೋಪಿ, ಚಾಕು ಖರೀದಿಸಿದ್ದ. ಏಪ್ರಿಲ್ 18ರಂದು ಕೊಲೆ ಮಾಡುವ 3 ದಿನಗಳ ಮೊದಲೇ ಎ.15ರಂದು ಧಾರವಾಡದ ಆರ್ಯ ಸೂಪರ್ ಬಜಾರ್‌ನಲ್ಲಿ ಚಾಕು ಖರೀದಿಸಿದ್ದಾನೆ. ಚಾಕು ಖರೀದಿಸಿದ ಸಿಸಿಟಿವಿ ದೃಶ್ಯ ಸಿಐಡಿಗೆ ಲಭ್ಯವಾಗಿದೆ. ಅದೇ ದಿನ ಧಾರವಾಡದ ನ್ಯೂ ಸಾಯಿ ಗಾರ್ಮೆಂಟ್‌ನಲ್ಲಿ 130 ರೂ. ಕೊಟ್ಟು ಕೆಂಪು ಟೋಪಿ ಖರೀದಿಸಿದ್ದಾನೆ.

ಕೊಲೆ ಮಾಡಲು ಬಿವಿಬಿ ಕಾಲೇಜಿಗೆ ಹೋದಾಗ ಯಾರೂ ಗುರುತು ಹಿಡಿಯಬಾರದೆಂಬ ಕಾರಣಕ್ಕೆ ಕೆಂಪು ಟೋಪಿ ಹಾಕಿಕೊಂಡು ಹೋಗಿದ್ದಾನೆ. ಮುಖಕ್ಕೆ ಕಪ್ಪು ಮಾಸ್ಕ್ ಕೂಡ ಧರಿಸಿದ್ದ. ಅದನ್ನೂ ಧಾರವಾಡದ ಶ್ರೀ ಹನುಮಾನ್ ಮೆಡಿಕಲ್ ಶಾಪ್‌ನಲ್ಲಿ ಖರೀದಿಸಿದ್ದ. ಈ ಬಗ್ಗೆ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ದೊರೆತಿವೆ.

ನೇಹಾಳ ರಕ್ತದ ಮಾದರಿಗಳು, 15 ಸೆಂ.ಮೀ. ಹಿಡಿಕೆಯುಳ್ಳ ಮಧ್ಯಮ ಗಾತ್ರದ ಸೈನ್‌ಲೆಸ್ ಸ್ಟೀಲ್ ಚಾಕು, ವೈಲ್ಡ್‌ ಕ್ರಾಫ್ಟ್ ಕಂಪನಿಯ ನೇಹಾಳ ಏರ್ ಬ್ಯಾಗ್, ಐಡಿ ಕಾರ್ಡ್, ಪೆನ್, ಪೆನ್ಸಿಲ್, ಮತ್ತೊಂದು ಏರ್ ಬ್ಯಾಗ್, ಒನ್ ಪ್ಲಸ್ ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದೇ ರೀತಿ, ಫಯಾಜ್ ಕೊಲೆ ಮಾಡಲು ಬರುವಾಗ ತಂದಿದ್ದ ಹೊಂಡಾ ಆ್ಯಕ್ಟಿವಾ (ಕೆಎ24 ವೈ 5781), ಕೆಲವು ಪೆನ್‌ಡ್ರೈವ್‌ಗಳು ಮತ್ತಿತರ ವಸ್ತುಗಳನ್ನು ತನಿಖೆಯ ವೇಳೆ ಜಪ್ತಿ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version