ಹೊಸದುರ್ಗ: ನಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬುದು ತೀರ್ಮಾನ ಆಗಿಲ್ಲ. ಪಕ್ಷ ನೀಡಿದ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಚರ್ಚೆಗೆ ಸ್ವತಃ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಈ ಹಿಂದೆ 2018ರ ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ಕೈತಪ್ಪಿತ್ತು,. ಇತ್ತೀಚೆಗಷ್ಟೆ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡುವ ರಾಜ್ಯ ಘಟಕದ ಪ್ರಸ್ತಾವನೆಯನ್ನು ಕೇಂದ್ರ ವರಿಷ್ಠರು ತಿರಸ್ಕರಿಸಿದ್ದರು. ಇದೆಲ್ಲದರ ನಂತರ, ತಮಗೆ ಸಾಮರ್ಥ್ಯವಿದೆ ಎಂದು ವಿಜಯೇಂದ್ರ ಹೇಳಿದ್ದರು. ಇದು ವರಿಷ್ಠರಿಗೆ ಪರೋಕ್ಷವಾಗಿ ನೀಡಿದ ಎಚ್ಚರಿಕೆ ಎಂದೇ ಭಾವಿಸಲಾಗಿತ್ತು. ಆದರೆ ಇದೀಗ ಸಂಪೂರ್ಣ ಭಿನ್ನ ರೀತಿಯಲ್ಲಿ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಮಾತನಾಡಿದ ವಿಜಯೇಂದ್ರ, ಮುಂಬರುವ ವಿಧಾನಸಭಾ ಚುನಾವಣೆಗೆ ನಾನು ಗುಬ್ಬಿ, ವರುಣ ಅಥವಾ ಹೊಸದುರ್ಗ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಚುನಾವಣೆ ಬಗ್ಗೆ ರಾಜ್ಯ ಘಟಕ ನಿರ್ಧರಿಸುತ್ತದೆ. ಪಕ್ಷ ನನಗೆ ನೀಡುವ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತೇನೆ. ನಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬುದು ತೀರ್ಮಾನವಾಗಿಲ್ಲ. ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಇದನ್ನು ಓದಿ: ʼಬೋನಿನಲ್ಲಿ ಕೂಡಿ ಹಾಕಿದರೂ ಅದು ಹುಲಿಯೇ!ʼ BSY ಬಗ್ಗೆ ವಿಜಯೇಂದ್ರ ಹೇಳಿಕೆ