Site icon Vistara News

ಮುರುಘಾಶ್ರೀ ಪ್ರಕರಣ | ಪಟ್ಟಭದ್ರರಿಂದ ಪಿತೂರಿ: 20ಕ್ಕೂ ಹೆಚ್ಚು ಮಠಾಧೀಶರ ಬೆಂಬಲ

murugha swamijs pressmeet

ಚಿತ್ರದುರ್ಗ: ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಾದ ಬೆನ್ನಲ್ಲೆ ಚಿತ್ರದುರ್ಗದ ಸುತ್ತಮುತ್ತಲಿನ ಹಾಗೂ ಮುರುಘಾ ಮಠದ ಶಾಖಾ ಮಠಗಳಿಗೆ ಸೇರಿದ ಇಪ್ಪತ್ತಕ್ಕೂ ಹೆಚ್ಚು ಮಠಾಧೀಶರು ಸುದ್ದಿಗೋಷ್ಠಿ ನಡೆಸಿದ್ದಾರೆ.

ಮಠದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಂತವೀರ ಸ್ವಾಮೀಜಿ, ಮಾದಾರ ಚೆನ್ನಯ್ಯ ಸ್ವಾಮೀಜಿ, ಬಸವ ಕುಮಾರ ಶ್ರೀ, ಭಗೀರಥ ಪೀಠದ ಪುರುಷೋತ್ತಮಾನಂದ ಶ್ರೀ, ಬಸವಪ್ರಭು ಶ್ರೀ ಸೇರಿ ಇಪ್ಪತ್ತಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸಿದ್ದರು.

ಎಲ್ಲರ ಪರವಾಗಿ ಮಾತನಾಡಿದ ಮುಮ್ಮಡಿ ಶಿವರುದ್ರ ಸ್ವಾಮೀಜಿ, ಮುರುಘಾ ಶ್ರೀಗಳು ಅನೇಕ ವಿಚಾರಗಳಲ್ಲಿ ನಾಡಿನ ಗಮನ ಸೆಳೆದಿದ್ದಾರೆ. ಬಹಳ ಮುಂಚೂಣಿಯಲ್ಲಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ, ಜಗಜ್ಜಾಹೀರು. ಪಟ್ಟಭದ್ರ ಹಿತಾಸಕ್ತಿಗಳಿಂದ ‌ಸ್ವಾಮೀಜಿಗೆ ಮಸಿ ಬಳಿಯುವ ಕೆಲಸವಾಗಿದೆ. ಮುರುಘಾ ಶರಣರು ಈ ಸಮಸ್ಯೆಯಿಂದ ಹೊರಬರುತ್ತಾರೆ ಎಂಬ ವಿಶ್ವಾಸವಿದೆ. ಎಲ್ಲ ಮಠಾಧೀಶರೂ ಶ್ರೀಗಳೊಂದಿಗೆ ಇದ್ದ್ದೇವೆ. ಅವರಿಗೆ ಆತ್ಮಸ್ಥೈರ್ಯ ತುಂಬುತ್ತೇವೆ. ಸತ್ಯಕ್ಕೆ ಜಯವಾಗುತ್ತದೆ. ಎಲ್ಲ ಶಾಖಾ ಮಠದವರೂ ಅವರ ಜತೆಗೆ ನಾವಿರುತ್ತೇವೆ, ನಾಡಿನಾದ್ಯಂತ ಭಕ್ತರೂ ಜತೆಗಿರುತ್ತಾರೆ ಎಂದರು.

ಆಡಳಿತಾಧಿಕಾರಿ ಹಾಗೂ ಉತ್ತರಾಧಿಕಾರಿ ನೇಮಕ ಕುರಿತು ಪ್ರತಿಕ್ರಿಯಿಸಿದ ಸ್ವಾಮೀಜಿ, ಇದು ಶ್ರೀಗಳ ಪರಮಾಧಿಕಾರ ಎಂದರು.

ಸ್ವಾಮೀಜಿಗಳ ಕುರಿತು ಬಾಲಕಿಯರು ಆರೋಪ ಮಾಡಿರುವ ಪ್ರಶ್ನೆಗೆ ಉತ್ತರಿಸಿ, ಮಕ್ಕಳು ದೇವರ ಸಮಾನ. ಈಗ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಅದರ ಬಗ್ಗೆ ಮತ್ತೊಮ್ಮೆ ಸುದ್ದಿಗೋಷ್ಟಿ ಕರೆದು ಮಾತನಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ| ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಜತೆಗೆ ದಲಿತ ದೌರ್ಜನ್ಯ ಕೇಸ್‌ ಕೂಡಾ ದಾಖಲು

Exit mobile version