ಕಲಬುರಗಿ: ಸಾಮಾಜಿಕ ಜಾಲತಾಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅಪ ಪ್ರಚಾರ ಆರೋಪದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಬಂಧನವಾಗಿ, ಜಾಮೀನಿನ ಮೇಲೆ ಹೊರಬಂದಿದ್ದ ಚಿತ್ತಾಪುರ ಬಿಜೆಪಿ ಮುಖಂಡ, ರೌಡಿಶೀಟರ್ ಮಣಿಕಂಠ ರಾಠೋಡ್‌ನನ್ನು (Manikanth Rathod) ಪೊಲೀಸರು ಮತ್ತೆ ಬಂಧಿಸಿದ್ದಾರೆ. ಪ್ರಕರಣ ವಿಚಾರಣೆ ನಡೆಸಿದ ಚಿತ್ತಾಪುರ ಜೆಎಂಎಫ್‌ಸಿ ನ್ಯಾಯಾಲಯ, ರೌಡಿಶೀಟರ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಕಲಬುರಗಿಯಲ್ಲಿ ಮಣಿಕಂಠ ರಾಠೋಡ್‌ನನ್ನು ಮಾಡಬೂಳ್ ಠಾಣೆ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಈ ಹಿಂದೆ ಬಿಡುಗಡೆಯಾದ ಬೆನ್ನಲ್ಲೇ ಪೊಲೀಸರ ವಿರುದ್ಧ ಮಣಿಕಂಠ ರಾಠೋಡ್ ಮಾತನಾಡಿದ್ದ. ಹೀಗಾಗಿ ಆತನ ವಿರುದ್ಧ ಕೈ ಕಾರ್ಯಕರ್ತರು ವಿವಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲು ಮಾಡಿದ್ದರು. ಹೀಗಾಗಿ ಐಪಿಸಿ ಸೆಕ್ಷನ್ 153ಎ 505(1) ಬಿ ಅಡಿ ದಾಖಲಾಗಿದ್ದ ಪ್ರಕರಣದಡಿ ಮತ್ತೊಮ್ಮೆ ಮಣಿಕಂಠ ರಾಠೋಡ್‌ನನ್ನು ಬಂಧಿಸಿ ಚಿತ್ತಾಪುರದ ಜೆಎಂಎಫ್‌ಸಿ ನ್ಯಾಯಲಯದ ಮುಂದೆ ಹಾಜರು ಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್, ರೌಡಿಶೀಟರ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಇದನ್ನೂ ಓದಿ | CM Siddaramaiah: ಅಂಬಾನಿ, ಅದಾನಿ ಜೇಬಿನಲ್ಲಿ ಹಣವಿದ್ದರೆ ಬಡವರು ಉದ್ಧಾರವಾಗಲ್ಲ ಎಂದ ಸಿದ್ದರಾಮಯ್ಯ
ಪೊಲೀಸರ ವಿರುದ್ದ ರೌಡಿಶೀಟರ್ ಗರಂ
ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರೆ ಪೊಲೀಸರು ಮನಸೋ ಇಚ್ಛೆ ಹೊಡೆದು ಜೈಲಿಗೆ ಹಾಕುತ್ತಿದ್ದಾರೆ. ಕಲಬುರಗಿ ಎಸ್‌ಪಿ ಇಶಾ ಪಂತ್ ಅವರ ಕುತಂತ್ರದಿಂದ ಪಿಎಸ್ಐ ಕಿರುಕುಳ ನೀಡುತ್ತಿದ್ದಾರೆ. ಎರಡು ದಿನಗಳ ಹಿಂದೆ ನನ್ನ ಬಂಧನವಾಗಿತ್ತು. ಜಾಮೀನು ಪಡೆದು ಬಿಡುಗಡೆಯಾಗಿದ್ದೆ. ಆದರೆ, ಸಹಿ ಮಾಡುವಂತೆ ಠಾಣೆಗೆ ಕರೆಸಿ ಮತ್ತೆ ಬಂಧಿಸಿದ್ದಾರೆ ಎಂದು ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕರೆದೊಯ್ದಾಗ ಪೊಲೀಸರ ವಿರುದ್ಧ ಮಣಿಕಂಠ ರಾಠೋಡ್ ಆಕ್ರೋಶ ಹೊರಹಾಕಿದ್ದಾರೆ.
ಜಾಮೀನಿನ ಮೇಲೆ ಹೊರಬಂದಿದ್ದ ಮಣಿಕಂಠ ರಾಥೋಡ್
ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ (False propaganda in Social Media) ಹಬ್ಬಿಸಿದ ಆರೋಪದಲ್ಲಿ ಮಾಡಬೂಳ್ ಠಾಣೆ ಪೊಲೀಸರು ಮಣಿಕಂಠ ರಾಠೋಡ್‌ನನ್ನು ಆ.23ರಂದು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಏನಿದು ಪ್ರಕರಣ?
ಚಿತ್ತಾಪುರ ತಾಲೂಕಿನ ಕಲಗುರ್ತಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಎರಡು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಪ್ರಕರಣ ಆರೋಪಿಗಳು, ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರಾಗಿದ್ದಾರೆ. ಈ ಸಾವಿಗೆ ಕೆಲವರು ಕುಮ್ಮಕ್ಕು ನೀಡಿದ್ದಾರೆ ಎಂದು ಮಣಿಕಂಠ ರಾಠೋಡ್ ಆರೋಪಿಸಿದ್ದ.
ಮಣಿಕಂಠ ರಾಠೋಡ್ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಆತನ ವಿರುದ್ಧ ಚಿತ್ತಾಪುರ ತಾಲೂಕಿನ ಮಾಡಬೂಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ತಪ್ಪು ಸಂದೇಶ ಪ್ರಚಾರ ಆರೋಪದಲ್ಲಿ ಐಪಿಸಿ ಸೆಕ್ಷನ್ 153 a 505(1)b ಅಡಿ ಕೇಸ್ ದಾಖಲಾಗಿತ್ತು.
ಇದನ್ನೂ ಓದಿ | Murder Case: ದಲಿತ ಮುಖಂಡನ ಹತ್ಯೆ; ಆರೋಪಿಯ ಸಂಬಂಧಿ ಮನೆ ಮೇಲೆ ಕಲ್ಲು ತೂರಾಟ
ʻಆರೋಪಿಗಳನ್ನು ಪೊಲೀಸರು ಬಂಧಿಸುತ್ತಿಲ್ಲ. ಪೊಲೀಸರು ಸಚಿವ ಪ್ರಿಯಾಂಕ್ ಖರ್ಗೆ ಕೈಗೊಂಬೆಯಾಗಿದ್ದಾರೆ ಎಂದು ಆರೋಪಿಸಿದ್ದ ಮಣಿಕಂಠ ರಾಠೋಡ್, ಆ.24ರಂದು ಚಿತ್ತಾಪುರ ಪಟ್ಟಣದಲ್ಲಿ ಪ್ರತಿಭಟನೆಯನ್ನೂ ಆಯೋಜಿಸಿದ್ದ. ಆದರೆ, ಜನರಿಗೆ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆ ಅಂತ ಆರೋಪಿಸಿ ಮಣಿಕಂಠ ರಾಠೋಡ್ ಬಂಧನ ಮಾಡಲಾಗಿತ್ತು. ಪ್ರತಿಭಟನೆಗೆ ಸಜ್ಜಾಗುವ ಮುನ್ನ ಬೆಳಗ್ಗೆ ಮಣಿಕಂಠ ಅವರ ನಿವಾಸ ಇರುವ ಅಪಾರ್ಟ್‌ಮೆಂಟ್‌ಗೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಇದೀಗ ನಿಯಮ ಉಲ್ಲಂಘಿಸಿ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಬಂಧಿಸಲಾಗಿದೆ.