ನೆಲಮಂಗಲ: ಮನೆಯ ಬಳಿ ಹುಲ್ಲು ಮೇಯಲು ಬಂದ ಹಸುಗಳ ಮೇಲೆ ಕ್ರೈಸ್ತ ವೃದ್ಧೆಯೊಬ್ಬರು ಆ್ಯಸಿಡ್ ಎರಚಿ (Acid Attack) ಪೈಶಾಚಿಕ ಕೃತ್ಯವೆಸಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿ ಗುಣಿ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಆ್ಯಸಿಡ್ ಎರಚಿದ ಹಿನ್ನೆಲೆಯಲ್ಲಿ 10ಕ್ಕೂ ಹೆಚ್ಚು ಹಸುಗಳು ಗಾಯಗೊಂಡಿದ್ದು, ನೋವು ತಾಳಲಾರದೇ ರೋದಿಸುತ್ತಿವೆ.
ಗುಣಿ ಅಗ್ರಹಾರ ಗ್ರಾಮದ ನಿವಾಸಿ ಗ್ರೀಸ್ ಜೋಸೆಫ್ ಎಂಬ ಕ್ರೈಸ್ತ ವೃದ್ಧ ಮಹಿಳೆ ವಿರುದ್ಧ ಅಮಾನವೀಯ ಕೃತ್ಯ ಎಸಗಿದ ಆರೋಪ ಕೇಳಿಬಂದಿದೆ. ಆ್ಯಸಿಡ್ ದಾಳಿಯಿಂದ ಗ್ರಾಮದ ಕೃಷ್ಣ, ನಾಗರಾಜು, ಹನುಮಂತ ರಾಜು ಮತ್ತು ಶ್ರೀರಾಮ್ ಎಂಬುವರ ಹಸುಗಳು ಗಾಯಗೊಂಡಿವೆ. ಹೊಟ್ಟೆ ಮತ್ತು ಬೆನ್ನಿನ ಭಾಗದಲ್ಲಿ ತೀವ್ರವಾಗಿ ಗಾಯಗಳಾಗಿರುವುದರಿಂದ ನೋವು ತಾಳಲಾರದೇ ಮೂಕ ಪ್ರಾಣಿಗಳು ರೋದಿಸುತ್ತಿವೆ.
ಮನೆ ಬಳಿ ಹುಲ್ಲು ಮೇಯಲು ಬಂದ ಹಸುಗಳ ಮೇಲೆ ಟೈಲ್ಸ್ ಕ್ಲೀನ್ ಮಾಡುವ ಆ್ಯಸಿಡ್ ಅನ್ನು ವೃದ್ಧೆ ಎರಚಿದ್ದಾಳೆ. ಕಳೆದ 20 ದಿನಗಳಿಂದ ಪ್ರತಿನಿತ್ಯ ಮೇವಿಗಾಗಿ ಹೊರಟ ಹಸುಗಳ ಬೆನ್ನು, ಹೊಟ್ಟೆ ಭಾಗದ ಮೇಲೆ ಒಂದು ರೀತಿಯ ಧ್ರವ ಸೋರಿದ ಹಾಗೆ ಕಾಣುತ್ತಿತ್ತು. ನಂತರ ಗಾಯಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈತರು ಏನೋ ರೋಗದ ಲಕ್ಷಣ ಅಂತ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಇದು ವೃದ್ಧ ಮಹಿಳೆಯ ಕೃತ್ಯ ಎಂದು ಗ್ರಾಮಸ್ಥರೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Road Accident: ಕ್ರಷರ್ ಲಾರಿ ಹರಿದು ವ್ಯಕ್ತಿ ದಾರುಣ ಸಾವು; ನಜ್ಜುಗುಜ್ಜಾದ ದೇಹ
ನಂತರ ರೈತರು ಹೋಗಿ ವೃದ್ಧೆಯನ್ನು ವಿಚಾರಿಸಿದಾಗ ಅವರು ಉದ್ಧಟತನದ ಮಾತುಗಳನ್ನು ಆಡಿದ್ದಾರೆ ಎನ್ನಲಾಗಿದೆ. ಹೀಗಾಗಿ ನ್ಯಾಯ ಕೊಡಿಸಿ ಎಂದು ಹಸುಗಳು ಮಾಲೀಕರು ಸಮೀಪದ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪತ್ನಿ ದೂರ ಮಾಡಿದ ಸಿಟ್ಟಿಗೆ ಆಕೆಯ ಸಂಬಂಧಿಯ ಕೊಲೆ ಮಾಡಿದ ಪತಿ
ಬೆಂಗಳೂರು: ಪತ್ನಿ ತನ್ನನ್ನು ದೂರ ಮಾಡಿದ್ದರಿಂದ ಡಿಪ್ರೆಷನ್ಗೆ ಒಳಗಾದ ವ್ಯಕ್ತಿಯೊಬ್ಬ ಆಕೆಯ ಸಂಬಂಧಿ ಮಹಿಳೆಯನ್ನು ಕೊಲೆ (Murder Case) ಮಾಡಿದ್ದಾನೆ. ಬೆಂಗಳೂರಿನ ಜೆಜೆ ನಗರದ ನಾಲ್ಕನೆ ಕ್ರಾಸ್ನಲ್ಲಿ ಈ ಘಟನೆ ನಡೆದಿದೆ.
ಪರ್ವಿನ್ ತಾಜ್ ಹಲ್ಲೆಗೀಡಾಗಿ ಮೃತಪಟ್ಟ ಮಹಿಳೆ. ಮಹಮ್ಮದ್ ಜುನೈದ್ ಎಂಬಾತನಿಂದ ಕೊಲೆ ನಡೆದಿದೆ. ಆರೋಪಿ ಮತ್ತು ಮೃತ ಮಹಿಳೆ ಸಂಬಂಧಿಗಳಾಗಿದ್ದಾರೆ. ಜುನೈದ್ ಹಾಗೂ ಆತನ ಪತ್ನಿ ಜಗಳವಾಡಿಕೊಂಡಿದ್ದರು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿ ಇಬ್ಬರಿಗೂ ಬುದ್ಧಿವಾದ ಹೇಳಿ ಕಳಿಸಲಾಗಿತ್ತು.
ಇದಾದ ಮೇಲೆ ಜುನೈದ್ ಪತ್ನಿಯಿಂದ ದೂರಾಗಿದ್ದ. ಪತ್ನಿಯಿಂದ ದೂರವಾಗಿ ಡಿಪ್ರೆಶನ್ಗೆ ಒಳಗಾಗಿದ್ದ. ಪತ್ನಿ ದೂರವಾದುದರಿಂದ ಮಾನಸಿಕವಾಗಿ ನೊಂದಿದ್ದ. ಈ ವೇಳೆ ಆತ ಪರ್ವಿನ್ ತಾಜ್ಗೆ ಹತ್ತಿರವಾಗಿದ್ದ. ಪರ್ವಿನ್ ತಾಜ್ ಆರೋಪಿಯ ಪತ್ನಿಯ ಸಂಬಂಧಿಯಾಗಿದ್ದಳು. ಆದರೆ ಇತ್ತೀಚೆಗೆ ಪರ್ವಿನ್ ಸಹ ಜುನೈದ್ನನ್ನು ದೂರವಿಟ್ಟಿದ್ದಳು.
ಇದನ್ನೂ ಓದಿ | Road Accident : ಕೆಎಸ್ಆರ್ಟಿಸಿ ಬಸ್ ಹಿಂದಿನ ಚಕ್ರಕ್ಕೆ ಸಿಲುಕಿ ಮಹಿಳೆ ಸಾವು
ಈ ವಿಚಾರಕ್ಕೆ ಕೋಪಗೊಂಡಿದ್ದ ಆರೋಪಿ ಜುನೈದ್, ಚಾಕು ಸಹಿತ ನೇರವಾಗಿ ಪರ್ವಿನ್ ಮನೆಗೆ ಹೋಗಿದ್ದ. ಪರ್ವಿನ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಪರ್ವಿನ್ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಪರಾರಿಯಾಗಿರುವ ಆರೋಪಿ ಜುನೈದ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ