Site icon Vistara News

Kiccha Sudeep: ಐಟಿ-ಇಡಿಗೆ ಬೆದರಿ ಬಿಜೆಪಿಗೆ ಸುದೀಪ್‌ ಬೆಂಬಲ ಎಂದ ಸುರ್ಜೆವಾಲ: ಬಿಜೆಪಿ ಪಾಳೆಯ ಕೆಂಡಾಮಂಡಲ

Kichcha Sudeep

ಬೆಂಗಳೂರು: ಚಿತ್ರನಟ ಕಿಚ್ಚ ಸುದೀಪ (Kiccha Sudeep) ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲಿನ ಅಭಿಮಾನದ ಮೇರೆಗೆ ಬಿಜೆಪಿಯನ್ನು ಬೆಂಬಲಿಸಲು ಮುಂದಾಗಿರುವುದು ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ.

ಬುಧವಾರ ಸುದ್ದಿಗೋಷ್ಠಿ ನಡೆಸಿದ ಕಿಚ್ಚ ಸುದೀಪ್‌, ಸಿಎಂ ಬಸವರಾಜ ಬೊಮ್ಮಾಯಿ ಅವರು ಸಾಕಷ್ಟು ಸಹಾಯ ಮಾಡಿದ್ದಾರೆ. ಅದಕ್ಕೆ ಕೃತಜ್ಞತೆ ಸಲ್ಲಿಸುವುದು ನನ್ನ ಕರ್ತವ್ಯ. ಹಾಗಾಗಿ ಅವರು ಯಾವ್ಯಾವ ಕ್ಷೇತ್ರಗಳಿಗೆ ತಿಳಿಸುತ್ತಾರೆಯೋ ಅಲ್ಲೆಲ್ಲ ಪ್ರಚಾರ ನಡೆಸುತ್ತೇನೆ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ, ಫಿಲ್ಮ್ ಸ್ಟಾರ್‌ಗಳು ಯಾರನ್ನು ಬೆಂಬಲಿಸಬೇಕೆಂದು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರು, ಕೆಲವೊಮ್ಮೆ IT-ED ಅಥವಾ ಬೇರೆ ರೀತಿಯಲ್ಲೂ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಕರ್ನಾಟಕದಲ್ಲಿ ಬಿಜೆಪಿಯ ದಿವಾಳಿತನ ಸ್ಪಷ್ಟವಾಗಿದೆ. ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ನಾಯಕರ ಮಾತುಗಳನ್ನು ಕೇಳಲು ಯಾರೂ ಸುಳಿಯದ ಕಾರಣ, ಅವರು ಈಗ ಪ್ರೇಕ್ಷಕರನ್ನು ಸೆಳೆಯಲು ಚಲನಚಿತ್ರ ತಾರೆಯರನ್ನು ಅವಲಂಬಿಸಿದ್ದಾರೆ. ಕರ್ನಾಟಕದ ಭವಿಷ್ಯವನ್ನು ನಿರ್ಧರಿಸುವವರು ಸಿನಿಮಾ ತಾರೆಯರಲ್ಲ, ಜನರು ಎಂದು ಸುರ್ಜೆವಾಲ ಹೇಳಿದ್ದಾರೆ.

ಸುರ್ಜೆವಾಲ ಮಾತಿಗೆ ಬಿಜೆಪಿ ಪಾಳೆಯ ತಿರುಗಿಬಿದ್ದಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕರ್ನಾಟಕ ಬಿಜೆಪಿ, ಬುಡಕಟ್ಟು ಹಿನ್ನೆಲೆಯುಳ್ಳ ಸಫಲ ನಾಯಕರೊಬ್ಬರು ಸಾಮಾಜಿಕ ನ್ಯಾಯದ ಪರವಾಗಿರುವ ಬಿಜೆಪಿಯನ್ನು ಬೆಂಬಲಿಸಿರುವುದನ್ನು ಜೀರ್ಣಿಸಿಕೊಳ್ಳಲು ಕಾಂಗ್ರೆಸಿಗರಿಗೆ ಸಾಧ್ಯವಾಗುತ್ತಿಲ್ಲ. ಇದೇ ವೇಳೆ, ಸುದೀಪ್‌ ಅವರಿಗೆ ಇವತ್ತು ಬೆಳಗ್ಗೆ ಕಳಿಸಿದ ಪತ್ರದೊಂದಿಗೆ (ಬೆದರಿಕೆ ಪತ್ರ) ನಿಮ್ಮ ಸಂಬಂಧವೇನಾದರೂ ಇದೆಯೇ? ಎಂದು ಪ್ರಶ್ನಿಸಿದೆ.

ಕಿಚ್ಚ ಸುದೀಪ್‌ ಸುದ್ದಿಗೋಷ್ಠಿಗೆ ಶ್ರೀರಾಮುಲು ಆಗಮಿಸದೇ ಇದ್ದರೂ ಸುರ್ಜೆವಾಲ ಟ್ವೀಟ್‌ಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಶ್ರೀರಾಮುಲು, ಸುದೀಪ್‌ ಅವರು ಕರ್ನಾಟಕದ ಹೆಮ್ಮೆ. ಕಿಚ್ಚ ಸುದೀಪ್‌ ಅವರು ರಣಕಣವನ್ನು ಪ್ರವೇಶಿಸಿರುವುದು ಕಾಂಗ್ರೆಸಿಗರನ್ನು ಮಳೆಯಲ್ಲಿ ನೆನೆದಬೆಕ್ಕುಗಳನ್ನಾಗಿ ಪರಿವರ್ತಿಸಿದೆ. ಈಗತಾನೆ ಸಿನಿಮಾ ಆರಂಬವಾಗಿದೆ, ಇನ್ನೂ ಸಾಕಷ್ಟಿದೆ ಎಂದಿದ್ದಾರೆ.

ಅತ್ತ ತಮಿಳುನಾಡು ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯ ಬಿಜೆಪಿ ಸಹ ಉಸ್ತುವಾರಿ ಅಣ್ಣಾಮಲೈ ಸಹ ಅಖಾಡಕ್ಕೆ ಧುಮುಕಿದ್ದಾರೆ. ಭಾರತ ವಿರೋಧಿ ಶಕ್ತಿಗಳನ್ನು ಬೆಂಬಲಿಸಿದ್ದ ನಟಿಯಿಂದ ನಿಮ್ಮ ನಾಯಕರು (ರಾಹುಲ್‌ ಗಾಂಧಿ) ಹೂ ಸ್ವೀಕರಿಸುತ್ತಿದ್ದಾರೆ. ಇದೀಗ ಸಿನಿಮಾ ಕ್ಷೇತ್ರದಲ್ಲಿರುವ ರಾಷ್ಟ್ರೀಯವಾದಿ ಶಕ್ತಿಗಳು ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ನಿಮಗೆ ಅಸಹನೆ ಉಂಟಾಗಿದೆ ಎಂದು ಹೇಳಿದ್ದಾರೆ.

Exit mobile version