Site icon Vistara News

ಹಿಂದಿ ಬಲ್ಲ ಮಕ್ಕಳಿಗೆ ಪ್ರವಾಸ; ಸರ್ಕಾರಕ್ಕೆ ಗೊತ್ತಿಲ್ಲದೆ ಹೊರಟಿತ್ತು ಆದೇಶ!

azadi ka amrit mahotsav

ಬೆಂಗಳೂರು: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ʼಏಕ್‌ ಭಾರತ್‌ ಶ್ರೇಷ್ಠ ಭಾರತ್‌ʼ ಕಾರ್ಯಕ್ರಮದಡಿ ಕರ್ನಾಟಕದಿಂದ ಹೊರ ರಾಜ್ಯಕ್ಕೆ ಪ್ರವಾಸಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಹಿಂದಿ ಭಾಷೆ ಜ್ಞಾನ ಕಡ್ಡಾಯ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯು ಹೊರಡಿಸಿದ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕರು ಹೊರಡಿಸಿದ್ದ ಈ ಆದೇಶಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶಿಕ್ಷಣ ಸಿಚಿವ ಬಿ ಸಿ ನಾಗೇಶ್‌ ಈ ತೀರ್ಮಾನ ತೆಗೆದುಕೊಂಡಿದ್ದು, ʼʼಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕದಿಂದ ಹೊರ ರಾಜ್ಯಕ್ಕೆ ಪ್ರವಾಸಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಹಿಂದಿ/ಇಂಗ್ಲೀಷ್ ಭಾಷೆ ಜ್ಞಾನ ಕಡ್ಡಾಯ ಎಂಬ ಸೂಚನೆಯನ್ನು ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ನೀಡಿಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಅಥವಾ ರಾಜ್ಯ ಸರ್ಕಾರ ಸೂಚನೆ ನೀಡದೇ ಇದ್ದರೂ ಈ ಆದೇಶ ಹೊರಡಿಸಿ, ಗೊಂದಲಕ್ಕೆ ಕಾರಣವಾದ ಅಧಿಕಾರಿ/ಸಿಬ್ಬಂದಿ ವಿರುದ್ಧ ಇಲಾಖೆಯಿಂದ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದವರು ತಿಳಿಸಿದ್ದಾರೆ.

ಏನಿದು ವಿವಾದ?

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ʼಏಕ್‌ ಭಾರತ್‌ ಶ್ರೇಷ್ಠ ಭಾರತ್‌ʼ ಎಂಬ ಕಾರ್ಯಕ್ರಮ ಜಾರಿಗೆ ತಂದಿದೆ. ಈ ಕಾರ್ಯಕ್ರಮದಡಿ ದೇಶದ ಬೇರೆ ರಾಜ್ಯಗಳಿಗೆ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಕಾರ್ಯಕ್ರಮ ರೂಪಿಸಲಾಗಿದೆ. ಇದರ ಪ್ರಕಾರ ರಾಜ್ಯದ 50 ವಿದ್ಯಾರ್ಥಿಗಳನ್ನು ಉತ್ತರಾಖಂಡ ರಾಜ್ಯ ಪ್ರವಾಸ ಕೈಗೊಳ್ಳಲು ಆಯ್ಕೆಮಾಡಬೇಕಿದೆ.

ಬೆಂಗಳೂರಿನ ಆರ್‌ಎನ್‌ಎಸ್‌ ತಾಂತ್ರಿಕ ಕಾಲೇಜು ಮತ್ತು ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜುಗಳನ್ನು ಈ ಕಾರ್ಯಕ್ರಮಕ್ಕೆ ನೋಡಲ್‌ ಸಂಸ್ಥೆಗಳನ್ನಾಗಿ ಆಯ್ಕೆ ಮಾಡಲಾಗಿದೆ. ಆರ್‌ಎನ್‌ಎಸ್‌ ಕಾಲೇಜಿನ ಉಪನ್ಯಾಸಕಿ ಡಾ ಪಲ್ಲವಿ ಅವರಿಗೆ ರಾಜ್ಯದ ವಿದ್ಯಾರ್ಥಿಗಳನ್ನು ಉತ್ತರಾಖಂಡಕ್ಕೆ ಕಳುಹಿಸುವ ಪ್ರಕ್ರಿಯೆಯ ಜವಾಬ್ದಾರಿ ನೀಡಲಾಗಿದೆ.

ಈ ಸಂಬಂಧ ಸುತ್ತೋಲೆ ಹೊರಡಿಸಿದ ಬೆಂಗಳೂರು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ʼʼಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪೈಕಿ ಹಿಂದಿ ಭಾಷೆಯಲ್ಲಿ ಮಾತನಾಡುವ ಮತ್ತು ತಂತ್ರಜ್ಞಾನದ ತಿಳಿವಳಿಕೆ, ಸಾಂಸ್ಕೃತಿಕ, ಕ್ರೀಡಾ ಸ್ಫೂರ್ತಿ ಹೊಂದಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಕಳುಹಿಸಲು ಸೂಚಿಸಿದೆʼʼ ಎಂದು ಶಾಲೆಗಳ ಮುಖ್ಯಸ್ಥರಿಗೆ ತಿಳಿಸಿದ್ದರು.

ಈ ಸುತ್ತೋಲೆ ಬಹಿರಂಗವಾಗುತ್ತಿದ್ದಂತೆಯೇ, ವಿದ್ಯಾರ್ಥಿಗಳು ಹಿಂದಿ ಭಾಷೆಯನ್ನು ಕಲಿತಿರಬೇಕೆಂದು ತಿಳಿಸಿರುವುದು ಎಷ್ಟು ಸರಿ ಎಂದು ಪೋಷಕರು ಪ್ರಶ್ನೆ ಮಾಡಿದ್ದರಲ್ಲದೆ, ಸರ್ಕಾರದ ಕ್ರಮವನ್ನು ಖಂಡಿಸಿದ್ದರು.

ಸುತ್ತೋಲೆಗೆ ವ್ಯಾಪಕ ವಿರೋಧ

ಹಿಂದಿ ತಿಳಿದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವಾಸ ಭಾಗ್ಯ ಎಂಬ ಸುತ್ತೋಲೆಗೆ ಪೋಷಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಶಿಕ್ಷಣ ಇಲಾಖೆಯ ಈ ಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಖಂಡಿಸಿದ್ದವು.

ಸಾಮಾಜಿಕ ಜಾಲತಾಣಗಳಲ್ಲಿ ಶಿಕ್ಷಣ ಇಲಾಖೆಯ ಈ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತಲ್ಲದೆ, ಹಿಂದಿ ಹೇರುವ ಕುತಂತ್ರ ಇದರ ಹಿಂದಿದೆ ಎಂದು ಟೀಕೆ ಮಾಡಲಾಗಿತ್ತು. ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಸರಣಿ ಟ್ವೀಟ್‌ ಮಾಡಿ ಶಿಕ್ಷಣ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ʼʼಇಂಥ ಕರಾಳ ಆದೇಶಕ್ಕೆ ರಾಜ್ಯ ಬಿಜೆಪಿ ಸರಕಾರ ಮತ್ತು ಶಿಕ್ಷಣ ಸಚಿವರೇ ನೇರ ಹೊಣೆ. ಸರಕಾರಕ್ಕೆ ಗೊತ್ತಿಲ್ಲದೆಯೇ ಇಂಥ ಆದೇಶ ಬರಲು ಸಾಧ್ಯವೇ? ತಿಳಿಗೇಡಿ ಆಡಳಿತಕ್ಕೆ ಹಿಡಿದ ಕನ್ನಡಿ ಇದುʼʼ ಎಂದು ಟೀಕಿಸಿದ್ದರು.

ಕೇಂದ್ರದ ಸೂಚನೆ ಇರಲಿಲ್ಲ

ಈ ಪ್ರವಾಸ ಕಾರ್ಯಕ್ರಮಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಹಿಂದಿ ಗೊತ್ತಿರಬೇಕೆಂದು ಕೇಂದ್ರ ಸರ್ಕಾರವೇನು ಸೂಚಿಸಿರಲಿಲ್ಲ. ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಕೇಂದ್ರ ಕಳುಹಿಸಿದ್ದ ಮಾರ್ಗಸೂಚಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಹಿಂದಿ ಗೊತ್ತಿರಬೇಕೆಂಬ ಪ್ರಸ್ತಾಪವಿಲ್ಲ.

ಪ್ರವಾಸಕ್ಕೆ ಆಯ್ಕೆ ಮಾಡುವಾಗ ಹಿಂದಿ ಅಥವಾ ಇಂಗ್ಲಿಷ್‌ ಮಾತನಾಡಲು ಬರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಂತೆ ಸರ್ಕಾರ ಅಧಿಕೃತವಾಗಿ ಸೂಚಿಸಿರಲಿಲ್ಲ. ಆದರೆ ಸರ್ವಶಿಕ್ಷಾ ಅಭಿಯಾನದ ಸಭೆಯಲ್ಲಿ ಈ ಬಗ್ಗೆ ಸೂಚನೆ ನೀಡಲಾಗಿತ್ತು. ಇದರಂತೆ ಈ ಸುತ್ತೋಲೆ ಹೊರಡಿಸಲಾಗಿತ್ತು ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ವಿಸ್ತಾರ ನ್ಯೂಸ್‌ ಗೆ ತಿಳಿಸಿದ್ದಾರೆ.

ಇದನ್ನೂ ಓದಿ| ಅಮೃತ ಮಹೋತ್ಸವ ಸಂಭ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮಾಧವಾನಂದರ ಮರೆತ ಸರ್ಕಾರ

Exit mobile version