ಬೆಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುವಾಗ (City Traffic Police) ಒಮ್ಮೊಮ್ಮೆ ಇಳಿಯುವ ಅವಸರದಲ್ಲಿ ಕೈನಲ್ಲಿದ್ದ ಲಗೇಜ್ ಮರೆತು ಹೋಗುವುದು ಮಾಮೂಲಿ. ಆದರೆ, ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಸ್ಟಾಪ್ ಬಂತೆಂದು ಅವಸರದಲ್ಲಿ ಜತೆಗೆ ಇದ್ದ ಮಗಳನ್ನು ಮರೆತು ಬಸ್ ಇಳಿದು ಪೇಚಿಗೆ ಸಿಲುಕಿದ್ದರು.
ಇಂಥದ್ದೊಂದು ಪ್ರಕರಣ ನಗರದ ಸಿಎಂಟಿ ಜಂಕ್ಷನ್ ಬಳಿ ನಡೆದಿದೆ. ಬುಧವಾರ ತಾಯಿಯೊಬ್ಬರು ಶಾಲೆಗೆ ಮಗಳನ್ನು ಕರೆದೊಯ್ಯುತ್ತಿದ್ದರು. ತಮ್ಮ ಸ್ಟಾಪ್ ಬಂತೆಂದು ಇಳಿಯುವ ಆತುರದಲ್ಲಿ ಜತೆಗೆ ಇದ್ದ ಮಗುವನ್ನು ಮರೆತು ಇಳಿದುಬಿಟ್ಟಿದ್ದಾರೆ. ಈ ಮಧ್ಯೆ ಬಸ್ ಸಿಎಂಟಿ ಜಂಕ್ಷನ್‌ನಿಂದ ಹೊರಟು ಬಿಟ್ಟಿದೆ.
ತಮ್ಮ ಸ್ಟಾಪ್‌ನಲ್ಲಿ ಇಳಿದ ತಾಯಿಗೆ ಮೊದಲಿಗೆ ಮಗಳ ಅರಿವು ಬಂದಿರಲಿಲ್ಲ. ಬಸ್ ಹೊರಡುತ್ತಿದ್ದಂತೆ ಮಗಳು ಇಳಿಯದಿರುವುದು ತಿಳಿದಿದೆ. ಆದರೆ, ಅಷ್ಟರಲ್ಲಿ ಬಸ್ ಮುಂದಕ್ಕೆ ಹೋಗಿದೆ. ಅಯ್ಯೋ ತನ್ನ ಮಗಳು ಬಸ್‌ನಲ್ಲಿ ಒಬ್ಬಳೇ ಹೋಗಿದ್ದಾಳೆಂದು ಕಂಗಾಲಾದ ತಾಯಿ, ಪೇಚಾಡಿದ್ದಾರೆ. ಮುಂದೆ ಏನು ಮಾಡಬೇಕೆಂದು ಸಹ ಅವರಿಗೆ ತೋಚದ ಸಂದರ್ಭದಲ್ಲಿ ಮಹಿಳೆಯ ಒದ್ದಾಟ ನೋಡಿ ಎಎಸ್‌ಐ ರಾಜಶೇಖರ್ ಸಹಿತ ಪೊಲೀಸ್ ಸಿಬ್ಬಂದಿಯಾಗಿರುವ ಮಂಜಣ್ಣ, ಶಿವಕುಮಾರ್ ಸಹಾಯಕ್ಕೆ ಬಂದಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಅವರು ತಮ್ಮ ವಾಕಿಟಾಕಿ ಮೂಲಕ ಉಳಿದ ಸಂಚಾರಿ ಸಿಬ್ಬಂದಿಗೆ ವಿಚಾರ ಮುಟ್ಟಿಸಿದ್ದಾರೆ.
ಬಸ್ ಹೋಗುವ ರೂಟ್ ಮಾಹಿತಿ ಪಡೆದುಕೊಂಡ ಸಂಚಾರಿ ಪೊಲೀಸರು, ಬಸ್ ಅನ್ನು ಟ್ರೇಸ್ ಮಾಡಿದ್ದಾರೆ. ಬಳಿಕ ಆ ಬಸ್ ಅನ್ನು ತಡೆದು ಹೆಣ್ಣು ಮಗುವನ್ನು ವಾಪಸ್ ತಾಯಿ ಮಡಿಲು ಸೇರಿಸಿದ್ದಾರೆ.
ಇದನ್ನೂ ಓದಿ | ಟ್ರಾಫಿಕ್ ರೂಲ್ಸ್ ಉಲ್ಲಂಘಿಸದಿರಿ, ದಂಡ ಇನ್ನೂ ಹೆಚ್ಚಿಸಲಾಗಿದೆ!