ಬೆಂಗಳೂರು: ಸಾಂಕ್ರಾಮಿಕ ಕೋವಿಡ್ ಸೋಂಕು ಕಾಡಿದಾಗ ಖಾಸಗಿ ಆಸ್ಪತ್ರೆಗಳು ದುಬಾರಿ ಬಿಲ್ ನೀಡಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದವು. ಸರ್ಕಾರಿ ಕೋಟಾದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳಿಂದಲೂ ಹಣ ಪಡೆದ ಆಸ್ಪತ್ರೆಗಳಿಂದ ಹಣವನ್ನು ವಸೂಲಿ ಮಾಡಲು ಸರ್ಕಾರ ಪ್ರತ್ಯೇಕ ತಂಡವನ್ನು ರಚಿಸಿತ್ತು. ಈ ರೀತಿ ಹೆಚ್ಚುವರಿ ಬಿಲ್ ಪಡೆದಿದ್ದವರಿಗೆ ಆರೋಗ್ಯ ಇಲಾಖೆ ಬಿಸಿ ಮುಟ್ಟಿಸುತ್ತಿದ್ದು, ಆಸ್ಪತ್ರೆಗಳಿಂದ 1.26 ಕೋಟಿ ರೂ. ಪಡೆದು ರೋಗಿಗಳಿಗೆ ಹಿಂದಿರುಗಿಸಲಾಗಿದೆ.
ಇದನ್ನೂ ಓದಿ | ಖಾಸಗಿ ಆಸ್ಪತ್ರೆಗಳ ಬಿಲ್ ಪಾವತಿಸಿದ ಆರೋಗ್ಯ ಇಲಾಖೆ: ಕೋವಿಡ್ ಚಿಕಿತ್ಸೆ ಪಡೆದವರೆಷ್ಟು ಗೊತ್ತಾ?
ಆಮ್ಲಜನಕ ಕೊರತೆ, ಹಾಸಿಗೆ ಕೊರತೆ ಸೇರಿ ಅನೇಕ ಸಮಸ್ಯೆಗಳಿದ್ದ ದಿನಗಳಲ್ಲಿ ಜನರು ಚಿಕಿತ್ಸೆ ಸಿಕ್ಕರೆ ಸಾಕು ಎನ್ನುವಂತಿದ್ದರು. ಆದರೆ ಇದೇ ಅಸಹಾಯಕತೆಯನ್ನೇ ಆಸ್ಪತ್ರೆಗಳು ಬಂಡವಾಳ ಮಾಡಿಕೊಂಡಿದ್ದವು. ಸರ್ಕಾರದಿಂದ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತಿತ್ತು. ಈ ರೋಗಿಗಳ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತಿತ್ತು. ಆದರೆ ಈ ಮಾಹಿತಿಯನ್ನು ರೋಗಿಗಳಿಂದ ಹಾಗೂ ಅವರ ಕುಟುಂಬದವರಿಂದ ಮುಚ್ಚಿಟ್ಟು ಬಿಲ್ ಪಾವತಿಸಿಕೊಳ್ಳುತ್ತಿದ್ದರು.
ಕೆಲವು ಸೇವೆಗಳಿಗೆ ಸರ್ಕಾರ ದರ ನಿಗದಿ ಮಾಡಿತ್ತು. ಅದನ್ನೂ ಮುಚ್ಚಿಡುತ್ತಿದ್ದ ಆಸ್ಪತ್ರೆಗಳು, ಸರ್ಕಾರ ನಿಗದಿಪಡಿಸಿದ್ದಕ್ಕಿಂತಲೂ ಹೆಚ್ಚಿನ ಹಣವನ್ನು ಪಡೆದಿದ್ದವು. ಈ ಕುರಿತು ಅಧಿಕಾರಿಗಳ ಗಮನಕ್ಕೆ ಬಂದಾಗ ಆಸ್ಪತ್ರೆಯವರಿಗೆ ಎಚ್ಚರಿಕೆ ನೀಡಿ ಹಣವನ್ನು ಹಿಂಪಡೆದು ರೋಗಿಗಳಿಗೆ, ಅವರ ಕುಟುಂಬದವರಿಗೆ ನೀಡಲಾಗಿತ್ತು.
ಈ ರೀತಿ ಖಾಸಗಿ ಆಸ್ಪತ್ರೆಗಳಿಗೆ ಬಿಸಿ ಮುಟ್ಟಿಸುತ್ತಿರುವ ಆರೋಗ್ಯ ಇಲಾಖೆ ಇಲ್ಲಿಯವರೆಗೆ 1,26,36,833 ರೂ. (1.26 ಕೋಟಿ ರೂ.) ವಾಪಸ್ ಕೊಡಿಸಿದೆ. ಮೊದಲ ಹಾಗೂ ಎರಡನೇ ಅಲೆ ವೇಳೆ ಆಸ್ಪತ್ರೆಗಳ ಕಳ್ಳಾಟ ಪತ್ತೆ ಮಾಡಿ ಹಣ ವಾಪಸ್ ಮಾಡಲಾಗುತ್ತಿದೆ. ಈಗಲೂ ಈ ವ್ಯವಸ್ಥೆ ಜಾರಿಯಲ್ಲಿದ್ದು, ಹೆಲ್ಪ್‌ಲೈನ್ ಸ್ಥಾಪಿಸಲಾಗಿದೆ.
100 ಆಸ್ಪತ್ರೆಗಳಿಂದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ 731 ಪ್ರಕರಣಗಳು, 51 ಆಸ್ಪತ್ರೆಗಳಿಂದ ಜಿಲ್ಲಾವಾರು ಮಟ್ಟದಲ್ಲಿ 226 ಪ್ರಕರಣಗಳನ್ನು ನಿರ್ವಹಿಸಲಾಗಿದೆ. ನಿರ್ವಹಣೆ ಹಂತದಲ್ಲಿ 685 ಪ್ರಕರಣಗಳಿವೆ. ಈವರೆಗೆ 307 ರೋಗಿಗಳಿಗೆ ಹಣ ವಾಪಸ್ ಮಾಡಲಾಗಿದೆ. 78 ಆಸ್ಪತ್ರೆಗಳು ಹೆಚ್ಚುವರಿ ಹಣ ಪಡೆದು ಈಗ ವಾಪಸ್ ನೀಡಿವೆ.
ಹೆಚ್ಚುವರಿ ಹಣ ಕಟ್ಟಿದ್ದರೆ ಹೀಗೆ ಮಾಡಿ
ಸರ್ಕಾರಿ ಕೋಟಾದಡಿ ದಾಖಲಾಗಿದ್ದರೂ ಖಾಸಗಿ ಆಸ್ಪತ್ರೆಗಳು ಹಣ ವಸೂಲಿ ಮಾಡಿದ್ದರೆ ಆರೋಗ್ಯ ಇಲಾಖೆಗೆ ಸಾರ್ವಜನಿಕರು ತಿಳಿಸಬಹುದು. ಆರೋಗ್ಯ ಮಿತ್ರ ಸಹಾಯವಾಣಿಗೆ ದೂರು ನೀಡಿ ಬಳಿಕ ದಾಖಲೆ ಒದಗಿಸಿದರೆ, ಹಣ ವಾಪಸ್ ಕೊಡಿಸುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡಲಿದೆ. ಆಸ್ಪತ್ರೆಗಳಲ್ಲಿ ಇರುವ ಆರೋಗ್ಯಮಿತ್ರ ತಂಡವನ್ನು ನೇರವಾಗಿ ಸಂಪರ್ಕಿಸಬಹುದು. ಜತೆಗೆ cvosast@gmail.com ಈ ಇಮೇಲ್ ವಿಳಾಸಕ್ಕೆ ದಾಖಲೆ ಸಹಿತ ದೂರು ಸಲ್ಲಿಸಬಹುದು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾಲ್ ಸೆಂಟರ್ ( 1800 425 2646ಅಥವಾ 1800 425 8660) ಕರೆ ಮಾಡಿಯೂ ದೂರು ನೀಡಬಹುದು. ಈ ಕಾಲ್‌ಸೆಂಟರ್ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ಕಾರ್ಯನಿರ್ವಹಿಸಲಿದೆ.
ಆರೋಗ್ಯ ಇಲಾಖೆಗೆ ಬಂದ ದೂರುಗಳೆಷ್ಟು?
ಆರೋಗ್ಯ ಇಲಾಖೆಗೆ ದಾಖಲಾದ ಒಟ್ಟು ದೂರುಗಳು – 2,701
ಬಿಲ್ ಅಕ್ರಮದಲ್ಲಿ ಭಾಗಿಯಾದ ಒಟ್ಟು ಆಸ್ಪತ್ರೆಗಳು – 316
ಜಿಲ್ಲಾ ಕಮಿಟಿಗಳಿಗೆ ವರ್ಗಾವಣೆ ಆದ ಪ್ರಕರಣಗಳು – 921
ಬಿಬಿಎಂಪಿಗೆ ವರ್ಗಾವಣೆ ಆದ ಪ್ರಕರಣಗಳು – 138
ವಿಚಾರಣೆ ನಡೆಸಿ ವಸೂಲಿ ಮಾಡಿದ ಒಟ್ಟು ಮೊತ್ತ – 13,30,840 ರೂ.
ನೋಟಿಸ್ ನೀಡಿ ವಸೂಲಿ ಮಾಡಲಾದ ಒಟ್ಟು ಮೊತ್ತ – 1,13,05,993 ರೂ.
ಒಟ್ಟಾರೆ ಕೋವಿಡ್ ರೋಗಿಗಳಿಗೆ ವಾಪಸ್ಸು ಮಾಡಲಾದ ಮೊತ್ತ – 1,26,36,833 ರೂ.
ಇದನ್ನೂ ಓದಿ | ಕೋವಿಡ್ ನಿಯಮ ಉಲ್ಲಂಘನೆ: ಕಾಂಗ್ರೆಸ್ ನಾಯಕರ ವಿರುದ್ಧ ಚಾರ್ಜ್ ಶೀಟ್‌ಗೆ ಕೋರ್ಟ್ ತಡೆ