ವಿಧಾನಸಭೆ: ವಿದ್ಯುತ್ ಬಿಲ್ ಏರಿಕೆ ಕುರಿತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡುತ್ತಿರುವ ವೇಳೆ ವಿಧಾನಸಭೆಯಲ್ಲಿ (Assembly Session) ಸಚಿವ ಕೆ.ಜೆ. ಜಾರ್ಜ್ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ವಾಗ್ವಾದ ನಡೆಯಿತು.
ವಿದ್ಯುತ್ ಬಿಲ್ ಹೆಚ್ಚಳ ಆಗಿದ್ದು ಕಾಂಗ್ರೆಸ್ ಸಮಯದಲ್ಲಿ ಎಂದು ಬೊಮ್ಮಾಯಿ ವಿಷಯ ಪ್ರಸ್ತಾಪಿಸಿದರು. ಬೊಮ್ಮಾಯಿ ಮಾತಿನ ವೇಳೆ ಜಾರ್ಜ್ ಆಕ್ಷೇಪ ವ್ಯಕ್ತಪಡಿಸಿದರು. ನಿಮ್ಮ ಕಾಲದಲ್ಲಿ ಬಿಲ್ ಏರಿಕೆ ಆಗಿದ್ದು ಎಂದರು. ಈ ವೇಳೆ ಯತ್ನಾಳ ಮಧ್ಯ ಪ್ರವೇಶ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಾರ್ಜ್, ನಿವೇನೇ ಮಾತನಾಡಿದರೂ ವಿಪಕ್ಷ ನಾಯಕ ಆಗಲ್ಲ ಎಂದರು. ಬಳಿಕ ವಿದ್ಯುತ್ ಬಿಲ್ ಏರಿಕೆ ವಿಚಾರವಾಗಿ ಜಾರ್ಜ್ ಮತ್ತು ಬೊಮ್ಮಾಯಿ ನಡುವೆ ವಾಕ್ಸಮರ ನಡೆಯಿತು. ಈ ವೇಳೆ ಮತ್ತೆ ಎದ್ದ ಯತ್ನಾಳರನ್ನು ಜಾರ್ಜ್ ಗದರಿದರು. ನಿಮಗೆ ಗೊತ್ತಿಲ್ಲ ಕೂತುಕೊಳ್ಳಿ ಎಂದರು.
ಜಾರ್ಜ್ ಮಾತಿಗೆ ಕೆರಳಿದ ಯತ್ನಾಳ್, ನಿವೇನು ಸರ್ವಜ್ಞನ ಎಲ್ಲ ಗೊತ್ತು ಅನ್ನೋಕೆ? ಕೂತುಕೊಳ್ಳಲು ಹೇಳಲು ನಿನ್ಯಾರು? ನಾನೇನು ನಿಮ್ಮ ಮನೆಗೆ ಬಂದಿದ್ನಾ ಮಂತ್ರಿ ಮಾಡು ಅಂತ? ಎಂದರು.
ಇದನ್ನೂ ಓದಿ: Assembly Session: ಸಂವಿಧಾನ ಪ್ರಸ್ತಾವನೆಯನ್ನೇ ತಪ್ಪಾಗಿ ನೀಡಿದ ಸಚಿವಾಲಯ; ಸ್ಪೀಕರ್ ನಡೆಗೆ ಬಸನಗೌಡ ಯತ್ನಾಳ್ ಆಕ್ಷೇಪ
ವಿರೋಧ ಪಕ್ಷದ ಕುರ್ಚಿ ಖಾಲಿ ಇದೆ. ಅದಕ್ಕಾಗಿ ಯತ್ನಾಳ್ ಮಾತನಾಡುತ್ತಿದ್ದಾರೆ ಎಂದು ಜಾರ್ಜ್ ಮತ್ತೆ ಕಾಲೆಳೆದರು. ಇದರಿಂದ ಮತ್ತಷ್ಟು ಕೆರಳಿದ ಯತ್ನಾಳ್, ನಾನು ಮನಸ್ಸು ಮಾಡಿದ್ರೆ ಸಿಎಂ ಆಗುತ್ತಿದ್ದೆ ಎಂದರು. ಈ ಸಮಯದಲ್ಲಿ ಬೊಮ್ಮಾಯಿ, ಸ್ಪೀಕರ್ ಮಧ್ಯಪ್ರವೇಶಿಸಿ ಜಗಳವನ್ನು ಶಮನ ಮಾಡಿದರು.