ಬೆಂಗಳೂರು: ಬಿಸಿಯೂಟದ ಸಾಂಬಾರ್ ಪಾತ್ರೆಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಕಲಬುರಗಿಯ (Kalaburagi) ಎರಡನೇ ತರಗತಿ ವಿದ್ಯಾರ್ಥಿನಿ ಮಹಾಂತಮ್ಮ (8) ಮೃತಪಟ್ಟಿದ್ದಾಳೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ಚಿಕಿತ್ಸೆ ಫಲಿಸದೆ ಭಾನುವಾರ ಬೆಳಗ್ಗೆ (ನವೆಂಬರ್ 19) ಮಹಾಂತಮ್ಮ ಮೃತಪಟ್ಟಿದ್ದಾಳೆ.
ನವೆಂಬರ್ 16ರಂದು ಅಫಜಲಪುರ ತಾಲೂಕಿನ ಚಿಣಮಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಸಾಂಬರ್ ಪಾತ್ರೆಗೆ ಮಹಾಂತಮ್ಮ ಬಿದ್ದಿದ್ದಳು. ಮಧ್ಯಾಹ್ನ 1.30ರ ಸುಮಾರಿಗೆ ಬಿಸಿಯೂಟ ಬಡಿಸುವ ವೇಳೆ ಮಹಾಂತಮ್ಮ ಬಿದ್ದಿದ್ದು, ಗಂಭೀರವಾಗಿ ಗಾಯಗಳಾಗಿದ್ದವು. ಕಲಬುರಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಮೊದಲು ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ.
ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಶಾಲೆಗೆ ಹೋಗಿದ್ದ ಮಗಳು ಸಾಂಬಾರ್‌ನಲ್ಲಿ ಬಿದ್ದು ಮೃತಪಟ್ಟ ಹಿನ್ನೆಲೆಯಲ್ಲಿ ಮಹಾಂತಮ್ಮ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದಕ್ಕೆಲ್ಲ ಬಿಸಿಯೂಟದ ಸಿಬ್ಬಂದಿಯೇ ಕಾರಣ ಎಂದು ಬಾಲಕಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Students Fall Sick: ಚಿತ್ರದುರ್ಗದಲ್ಲಿ ಬಿಸಿಯೂಟ ಸೇವಿಸಿ 30 ಮಕ್ಕಳು ಅಸ್ವಸ್ಥ
ಮುಖ್ಯ ಶಿಕ್ಷಕಿ, ಸಹ ಶಿಕ್ಷಕ ಅಮಾನತು
ಮಹಾಂತಮ್ಮ ಸಾಂಬಾರ್‌ಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಣಮಗೇರಾ ಶಾಲೆ ಮುಖ್ಯ ಶಿಕ್ಷಕಿ ಲಾಲಬಿ ನದಾಫ್ ಹಾಗೂ ಸಹ ಶಿಕ್ಷಕ ರಾಜು ಚೌಹಾಣ್ ಅವರನ್ನು ಕಲಬುರಗಿ ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ ಅವರು ಅಮಾನತುಗೊಳಿಸಿದ್ದಾರೆ. ಮುಖ್ಯ ಅಡುಗೆಯವರಾದ ಕಸ್ತೂರಿಬಾಯಿ ಎಂ. ತಳಕೇರಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ