Site icon Vistara News

Anand Mahindra: ಹಣ್ಣು ಮಾರುವ ಹಾಲಕ್ಕಿ ಮಹಿಳೆಯ ಪರಿಸರ ಪ್ರೇಮ; ಸ್ವಚ್ಛ ಭಾರತ್‌ನ ಹೀರೊಗಳು ಇವರೇ ಎಂದು ಕೊಂಡಾಡಿದ ಆನಂದ್‌ ಮಹೀಂದ್ರ

ಅಂಕೋಲಾ ಬಸ್‌ ನಿಲ್ದಾಣ ಹಾಲಕ್ಕಿ ಮಹಿಳೆ

ಅಂಕೋಲಾ ಬಸ್‌ ನಿಲ್ದಾಣ ಹಾಲಕ್ಕಿ ಮಹಿಳೆ

ಕಾರವಾರ: ಹಾಲಕ್ಕಿ ಮಹಿಳೆಯೊಬ್ಬರ ಕಾರ್ಯವೂ ಇದೀಗ ದೇಶದ ಗಮನ ಸೆಳೆಯುತ್ತಿದೆ. ಅಂಕೋಲಾ ಬಸ್‌ ನಿಲ್ದಾಣದಲ್ಲಿ (Ankola Bus stop) ಹಣ್ಣು ಮಾರುವ ಹಾಲಕ್ಕಿ ಮಹಿಳೆಯ‌ ಸ್ವಚ್ಛತಾ ಕಾರ್ಯವನ್ನು (Swachh Bharat) ಮಹೀಂದ್ರಾ ಸಂಸ್ಥೆಯ ಮಾಲೀಕ ಆನಂದ್ ಮಹೀಂದ್ರಾ (Anand Mahindra) ಕೊಂಡಾಡಿದ್ದಾರೆ.

ಸದ್ದಿಲ್ಲದೆ ಸ್ವಚ್ಛ ಭಾರತದ ಪ್ರಯತ್ನವನ್ನು ಸಹಕಾರಗೊಳಿಸುವ ಇಂತಹವರೇ ಸ್ವಚ್ಛ ಭಾರತ್‌ನ ನಿಜವಾದ ಹೀರೋಗಳು ಎಂದಿದ್ದಾರೆ. ಇವರ ಕಾರ್ಯವನ್ನು ಗಮನಿಸದಿರುವುದು, ಶ್ಲಾಘಿಸದೆ ಇರುವುದು ದುರಂತ ಎಂದು ಟ್ವೀಟ್‌ ಮೂಲಕ ಹಾಲಕ್ಕಿ ಮಹಿಳೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ವೀಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ ಆನಂದ್‌ ಮಹೀಂದ್ರಾ

ಅಂದಹಾಗೆ, ಪಟ್ಟಣದ ಬಸ್ ನಿಲ್ದಾಣದಲ್ಲಿ ಹಾಲಕ್ಕಿ ಮಹಿಳೆಯೊಬ್ಬರು ಜೀವನೋಪಾಯಕ್ಕಾಗಿ ಪ್ರತಿನಿತ್ಯ ಎಲೆಯ ಕೊಟ್ಟೆಯಲ್ಲಿ ನೇರಳೆ ಹಣ್ಣುಗಳನ್ನು ತಂದು ಮಾರಾಟ ಮಾಡುತ್ತಾರೆ. ಮಹಿಳೆಯಿಂದ ನೇರಳೆ ಹಣ್ಣು ಖರೀದಿಸುವ ಪ್ರಯಾಣಿಕರು ಹಣ್ಣುಗಳನ್ನು ತಿಂದು, ಎಲೆಯನ್ನು ಬಸ್‌ನ ಕಿಟಕಿಯಿಂದ ಹೊರಗೆ ಬಿಸಾಡಿ ತೆರಳುತ್ತಾರೆ.

ಹೀಗೆ ಪ್ರಯಾಣಿಕರು ಎಸೆದ ಎಲೆಗಳನ್ನು ಹಾಲಕ್ಕಿ ಮಹಿಳೆ ಆರಿಸಿ ತಂದು ಕಸದ ಬುಟ್ಟಿಗೆ ಹಾಕುವುದನ್ನು ರೂಢಿಸಿಕೊಂಡಿದ್ದಾರೆ. ಹೀಗೆ ಮಹಿಳೆ ಎಲೆ ಹೆಕ್ಕುತ್ತಿದ್ದ ವೇಳೆ ಆದರ್ಶ ಹೆಗಡೆ ಎಂಬುವವರು ಮೊಬೈಲ್‌ನಲ್ಲಿ ವಿಡಿಯೊ ಮಾಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Elephant attack: ಯುವತಿಯನ್ನು ಕೊಂದ ಆನೆ ಹಿಡಿಯಲು ಶತಪ್ರಯತ್ನ; ಅನಸ್ತೇಷಿಯಾ ಕೊಡಲು ಹತ್ತಿರ ಹೋದ ಡಾಕ್ಟರ್‌ ಮೇಲೇ ಅಟ್ಯಾಕ್‌

ಈ ವಿಡಿಯೊ ಸಾಕಷ್ಟು ವೈರಲ್ ಆಗಿದ್ದು, ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ಅಲ್ಲದೇ ಹಾಲಕ್ಕಿ ಮಹಿಳೆಯ ಕಾರ್ಯವನ್ನು ಶ್ಲಾಘಿಸಿ ಸ್ವಚ್ಛ ಭಾರತದ ನಿಜವಾದ ಹೀರೋ ಇವರೇ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಮಹಿಳೆಯನ್ನು ಸಂಪರ್ಕಿಸಿ ಮಾತನಾಡಿಸಲು ಅವಕಾಶ ಮಾಡಿಕೊಡಿ ಎಂದು ಕೂಡ ಕೇಳಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಇನ್ನಷ್ಟು ವೈರಲ್ ಆಗಿದ್ದು 3.59 ಲಕ್ಷ ವೀಕ್ಷಣೆ ಕಂಡಿದೆ.

Exit mobile version