Site icon Vistara News

Karnataka Election Results: ಕಾಂಗ್ರೆಸ್‌ಗೆ ಬಹುಮತ; ನಿಜವಾಯ್ತಾ ಬೊಂಬೆ, ಮೈಲಾರಲಿಂಗೇಶ್ವರ ಕಾರ್ಣಿಕ ಭವಿಷ್ಯ?

Karnataka Election Results

Karnataka Election Results

ಧಾರವಾಡ/ವಿಜಯನಗರ: ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದಿದ್ದು, ಸರ್ಕಾರ (Karnataka Election Results) ರಚನೆಗೆ ಸಿದ್ಧತೆ ನಡೆಯುತ್ತಿದೆ. ಮತ್ತೊಂದೆಡೆ ಈ ಹಿಂದೆ ರಾಜ್ಯದಲ್ಲಿ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂದು ಹೇಳಲಾಗಿದ್ದ ಭವಿಷ್ಯವಾಣಿಗಳ ಕುರಿತ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.

ಧಾರವಾಡದಲ್ಲಿ ಬೊಂಬೆ ಭವಿಷ್ಯ

ಧಾರವಾಡ ಜಿಲ್ಲೆಯ ಉಪ್ಪಿನಬೆಟಗೇರಿಯ ಗ್ರಾಮದಲ್ಲಿ ಪ್ರತಿ ವರ್ಷವೂ ಬೊಂಬೆ ಮೂಲಕ ಭವಿಷ್ಯ ತಿಳಿಯುವ ಸಂಪ್ರದಾಯ ಆಚರಣೆಯಲ್ಲಿದೆ. ರಾಜಕೀಯ ಸೇರಿ ಎಲ್ಲ ವಿಷಯಗಳಲ್ಲಿ ಬೊಂಬೆಯ ಭವಿಷ್ಯವಾಣಿಯನ್ನು ಸ್ಥಳೀಯರು ನಂಬುತ್ತಾರೆ. ಈ ಬಾರಿ ಯುಗಾದಿಯಂದು ಮಣ್ಣಿನ ಬೊಂಬೆಯ ಬಲಗಾಲಿಗೆ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ರಾಜ್ಯ ನಾಯಕನ ಬದಲಾವಣೆಯಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗಿತ್ತು. ಈ ಹಿಂದೆಯೂ ಯಡಿಯೂರಪ್ಪ, ಇಂದಿರಾ ಗಾಂಧಿ ಸೇರಿ ನಾಯಕರ ಬದಲಾವಣೆ ಭವಿಷ್ಯವನ್ನು ಬೊಂಬೆ ತಿಳಿಸಿತ್ತು ಎನ್ನಲಾಗಿದೆ.

ಉಪ್ಪಿನಬೆಟಗೇರಿಯ ಹನುಮನಕೊಪ್ಪ ಗ್ರಾಮಸ್ಥರು ಪ್ರತಿವರ್ಷ ಯುಗಾದಿ ಸಂದರ್ಭದಲ್ಲಿ ಗ್ರಾಮದ ತುಪ್ಪರಿ ಹಳ್ಳದ ದಂಡೆಯ ಮೇಲೆ ಒಂದು ಸಮತಟ್ಟಾದ ಕಲಾಕೃತಿ ಮಾಡಿ, ಅದರ ನಾಲ್ಕೂ ದಿಕ್ಕಿಗೆ ರಾಜಕಾರಣದ ಬೊಂಬೆಗಳನ್ನು ಮಾಡಿಡುತ್ತಾರೆ. ಒಳಗಡೆ ರೈತರು, ಸೈನಿಕರು, ಕಾಳುಗಳನ್ನು ಇಡುತ್ತಾರೆ. ಅಮವಾಸ್ಯೆ ದಿನ ಈ ಆಕೃತಿ ಮಾಡಿಟ್ಟು, ಮಾರನೇ ದಿನ ಬೆಳಗ್ಗೆ ಅದನ್ನು ನೋಡಲು ಹೋಗುತ್ತಾರೆ. ಈ ಆಕೃತಿಯ ಯಾವ್ಯಾವ ಭಾಗಕ್ಕೆ ಪೆಟ್ಟಾಗಿದೆ ಎಂಬುದನ್ನು ನೋಡಿ ಅದರ ಆಧಾರದ ಮೇಲೆ ಭವಿಷ್ಯವನ್ನು ನಿರ್ಧರಿಸುತ್ತಾರೆ.

ಕಂಬಳಿ ಬೀಸೀತು, ಅಂಬಳಿ ಹಳಸಿತಲೇ ಪರಾಕ್ : ಕಾರ್ಣಿಕ ಭವಿಷ್ಯವಾಣಿ

ವಿಜಯನಗರ: ಜಿಲ್ಲೆಯ ಸುಕ್ಷೇತ್ರ ಐತಿಹಾಸಿಕ ಮೈಲಾರಲಿಂಗೇಶ್ವರ ಕ್ಷೇತ್ರದಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ರಾಮಪ್ಪ “ಕಂಬಳಿ ಬೀಸೀತು, ಅಂಬಳಿ ಹಳಸಿತಲೇ ಪರಾಕ್” ಎಂದು ಕಾರ್ಣಿಕ ಭವಿಷ್ಯವಾಣಿ ನುಡಿದಿದ್ದರು. ಹೀಗಾಗಿ ಪರೋಕ್ಷವಾಗಿ ಸಿದ್ದರಾಮಯ್ಯ. ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗಿತ್ತು.

ಮೈಲಾರಲಿಂಗೇಶ್ವರ ನುಡಿದ ಕಾರ್ಣಿಕ ಸುಳ್ಳಾಗಿಲ್ಲ ಎಂಬ ಪ್ರತೀತಿ ಇದೆ. ಹೀಗಾಗಿ ಈ ವರ್ಷ ಮೈಲಾರಲಿಂಗೇಶ್ವರ ಕಾರ್ಣಿಕ ನಿಜವಾಗೋ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ. ಅಂದು ಗೊರವಯ್ಯ ರಾಮಪ್ಪ 14 ಅಡಿ ಎತ್ತರದ ಬಿಲ್ಲನ್ನೇರಿ ವರ್ಷದ ಕಾರ್ಣಿಕ ನುಡಿದಿದ್ದರು.

ಇದನ್ನೂ ಓದಿ | Karnataka Election Results: ಗೆಲ್ಲಲು ಘಟಾನುಘಟಿಗಳಿಗೆ ನೀರು ಕುಡಿಸಿದ ಕ್ಷೇತ್ರಗಳಿವು!

ಪ್ರಾಮಾಣಿಕ, ನಿಷ್ಠೆ ಇರುವ ವ್ಯಕ್ತಿಯು ರಾಜ್ಯ ಹಾಗೂ ರಾಷ್ಟ್ರವನ್ನಾಳುತ್ತಾನೆ ಎನ್ನಲಾಗಿತ್ತು. ಭಗವಂತ ದೈವವಾಣಿ ಮೂಲಕ ತಿಳಿಸಿದ್ದಾನೆ ಎಂದು ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಹೇಳಿದ್ದರು. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ನಿಷ್ಠೆಯಿರುವ ನಾಯಕರಿಗೆ ರಾಜ್ಯದ ಪಟ್ಟ ಸಿಗುತ್ತದೆ ಎಂದಿದ್ದರು. ಅಂದು ಪರೋಕ್ಷವಾಗಿ ಕುರಬ ಸಮುದಾಯದ ವ್ಯಕ್ತಿಯೇ ರಾಜ್ಯ ಆಳುತ್ತಾರೆ ಎಂದು ಗೊರವಯ್ಯ ಕಾರ್ಣಿಕ ನುಡಿದಿದ್ದರಿಂದ ಭಾರಿ ಕೂತುಹಲ ಹಾಗೂ ಚರ್ಚೆ ಹುಟ್ಟು ಹಾಕಿತ್ತು.

Exit mobile version