Site icon Vistara News

HD Kumaraswamy : ಶೀಘ್ರ ಸರ್ಕಾರ ಪತನ ಎಚ್‌ಡಿಕೆ ಮೇಲೆ ಮುಗಿಬಿದ್ದ ಕೈ ನಾಯಕರು

HD Kumaraswamy and zameer Khan

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಪತನಗೊಳ್ಳಲಿದೆ (Congress Government Collapse). ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮತ್ತೆ ತಿಹಾರ್ ಜೈಲಿಗೆ ಹೋಗೋದು ಗ್ಯಾರಂಟಿ ಎಂಬ ಭವಿಷ್ಯ ನುಡಿದ ಜೆಡಿಎಸ್‌ ನಾಯಕ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರ ವಿರುದ್ಧ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನಾಯಕರು ಮುಗಿಬಿದ್ದಿದ್ದಾರೆ.

ಸೋಮವಾರ ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿಯಲ್ಲಿ ಪಕ್ಷದ ಮುಖಂಡರ ಜೊತೆಗಿನ ಸಭೆಯಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ಮೈತ್ರಿ ಸರ್ಕಾರದ ಪತನಕ್ಕೆ ಡಿಕೆ ಶಿವಕುಮಾರ್ ಕಾರಣ. ಈಗ ಇರುವ ಕಾಂಗ್ರೆಸ್‌ ಸರ್ಕಾರ ಸ್ವಲ್ಪ ಸಮಯದಲ್ಲಿ ಪತನವಾಗಲಿದೆ ಎಂದು ಹೇಳಿದ್ದರು.

ಸರ್ಕಾರ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಡಿಕೆಶಿ

ಎಚ್.‌ಡಿ ಕುಮಾರಸ್ವಾಮಿ ಅವರ ಮಾತಿಗೆ ಪ್ರತ್ಯುತ್ತರ ನೀಡಿರುವ ಮಾಜಿ ಸಂಸರ ವಿ.ಎಸ್‌. ಉಗ್ರಪ್ಪ ಅವರು, ಅಂದು ಕಾಯ ವಾಚಾ ಮನಸ್ಸಾ ನಿಮ್ಮ ಸರ್ಕಾರ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು ಡಿ.ಕೆ ಶಿವಕುಮಾರ್. ಯಾವ ನಾಲಿಗೆಯಿಂದ ಮಾತಾಡುತ್ತೀರಿ ಕುಮಾರಸ್ವಾಮಿ ಅವರೇ ಎಂದು ಕೇಳಿದರು.

ʻʻಬಿಜೆಪಿ ಜೊತೆಗೆ ಮೈತ್ರಿ ಆದ ಮೇಲೆ‌‌ ಕುಮಾರಸ್ವಾಮಿ ಈ ರೀತಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ ಗೆಲುವಿನಿಂದ ಅವರು ವಿಚಲಿತರಾಗಿದ್ದಾರೆ, ಹತಾಶರಾಗಿದ್ದಾರೆʼʼ ಎಂದು ಉಗ್ರಪ್ಪ ಹೇಳಿದರು.

ʻʻಮೈತ್ರಿ ಸರ್ಕಾರ ಪತನದ ಸಂದರ್ಭದಲ್ಲಿ ವಿದೇಶದಿಂದ ಬಂದು ಯಡಿಯೂರಪ್ಪ ಅಂಡ್ ಟೀಮ್ ಶಾಸಕರನ್ನು ಖರೀದಿ ಮಾಡಿದೆ ಎಂದು ಹೇಳಿದ್ದಿರಿ. ಈಗ ಬಿಜೆಪಿ ಜತೆ ಸೇರಿಕೊಂಡು ಏನೇನೋ ಹೇಳುತ್ತಿದ್ದೀರಿʼʼ ಎಂದು ಹೇಳಿದ್ದಾರೆ.

ಸರ್ಕಾರ ಬೀಳೋದು ಹೇಗ್‌ ಸ್ವಾಮಿ ಎಂದು ಕೇಳಿದ ಜಮೀರ್‌

ʻʻನಾನು ಕುಮಾರಸ್ವಾಮಿ ಜೊತೆಗೆ ಇದ್ದವನು. ಯಾವುದಾದರೂ ಸರ್ಕಾರ ಐದು ವರ್ಷ ನಡೆಯಲಿದೆ ಎಂದು ಅವರು ಯಾವತ್ತಾದರೂ ಹೇಳಿದ್ದಾರಾ..? ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬಿಳುತ್ತೆ ಅಂದ್ರು.. ಅಮೇಲೆ ಇವರದ್ದೇ ಸರ್ಕಾರ ಇವರಿಗೆ ಉಳಿಸಿಕೊಳ್ಳಲು ಆಗಲಿಲ್ಲ… ಈಗ ನಮ್ಮ ಸರ್ಕಾರ ಬೀಳುತ್ತೆ ಅಂತಿದ್ದಾರೆʼʼ ಎಂದು ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದ್ದಾರೆ.

ʻʻಸರ್ಕಾರ ಹೆಂಗ್ ಬೀಳಲು ಸಾಧ್ಯ ಹೇಳಿ.. ಬಿಜೆಪಿಯವರು 104 ಶಾಸಕರು ಇದ್ದುಕೊಂಡು ಅಪರೇಷನ್ ಕಮಲ ಮಾಡಿ ನಾಲ್ಕು ವರ್ಷ ಸರ್ಕಾರ ನಡೆಸಿದರು. ನಾವು 137 + 3 ಒಟ್ಟು 140 ಇದ್ದೇವೆ. ಸರ್ಕಾರ ಹೇಗೆ ಬೀಳುತ್ತೆ…ಕುಮಾರಸ್ವಾಮಿಯವರು ರಾತ್ರಿ ಕನಸು ಹಗಲು ಕಾಣ್ತಿದ್ದಾರೆʼʼ ಎಂದು ಹೇಳಿದರು

ʻʻನಾವು ಗ್ಯಾರಂಟಿಗಳನ್ನು ಕೊಡ್ತಿದ್ದೇವೆ. ಕುಮಾರಸ್ವಾಮಿ ಅವರಿಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ. ಏನೋ ಒಂದು ನಿರೀಕ್ಷೆ ಇಟ್ಟುಕೊಂಡಿದ್ದರು.. ನಮ್ಮನ್ನ ಬಿಟ್ಟು ಸರ್ಕಾರ ರಚನೆ ಮಾಡೋಕೆ ಆಗಲ್ಲ ಅಂತ ಅಂದುಕೊಂಡಿದ್ದರು. ಸಮ್ಮಿಶ್ರ ಸರ್ಕಾರ ಬರುತ್ತೆ ಅಂತ. ಆದರೆ, ನಿರಾಶೆಯಾಗಿದೆʼʼ ಎಂದು ಜಮೀರ್‌ ನುಡಿದರು.

ಇದನ್ನೂ ಓದಿ : HD Kumaraswamy : ಕತ್ತಲೆ ಭಾಗ್ಯ 6ನೇ ಗ್ಯಾರಂಟಿ; ನವರಾತ್ರಿಗೆ ಮೊದಲೇ ಕರಾಳ ರಾತ್ರಿ ಎಂದ HDK

ʻʻನಾವು ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಗೆ ಹೋದ ಹಿನ್ನೆಲೆಯಲ್ಲಿ ಒಂದು ಸ್ಥಾನಕ್ಕೆ ಇಳಿದೆವು. ಈಗ ಅದೇ ಪರಿಸ್ಥಿತಿ ಬಿಜೆಪಿಗೆ ಬರುತ್ತದೆ. ನಾವು ಏನು ಅನುಭವಿಸಿದ್ವೋ ಅದೇ ಪರಿಸ್ಥಿತಿ ಬಿಜೆಪಿ ಬರಲಿದೆʼʼ ಎಂದು ಹೇಳಿದರು.

ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿರುವ ಸಿ.ಎಂ ಇಬ್ರಾಹಿಂ ಅವರು ಕಾಂಗ್ರೆಸ್‌ ಪಕ್ಷಕ್ಕೆ ಬಂದ್ರೆ ನಿಮಗೆ ಒಪ್ಪಿಗೆನಾ ಎಂಬ ಪ್ರಶ್ನೆಗೆ, ʻʻಪಕ್ಷದ ಸಿದ್ದಾಂತ ಒಪ್ಪಿಕೊಂಡು ಯಾರು ಬೇಕಾದ್ರು ಬರಬಹುದು. ನನ್ನ ಸಂಪರ್ಕದಲ್ಲಿ ಯಾರ್ ಇದ್ದಾರೆ ಎಂಬುದನ್ನ ನಾನು ಮಾಧ್ಯಮಗಳ ಮುಂದೆ ಹೇಳಲ್ಲʼʼ ಎಂದರು ಜಮೀರ್‌.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಎಚ್‌ಡಿ ಕುಮಾರಸ್ವಾಮಿ ಅವರ ಹೇಳಿಕೆ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಮಾತನಾಡಿದ್ದಾರೆ.
ʻʻಪಾಪ ಕುಮಾರಸ್ವಾಮಿ ಅವರು ಭ್ರಮೆಯಲ್ಲಿದ್ದಾರೆ. ಮುಖ್ಯಮಂತ್ರಿ ಆಗ್ತೀಣೀ ಅಂತ ಅಂದುಕೊಂಡಿದ್ದರು.. ಈಗ ಅದು ಆಗಲಿಲ್ವಲ್ಲ.. ಅದಕ್ಕೆ ಏನೋ ಏನೋ ಮಾತನಾಡ್ತಾರೆ. ಕುಮಾರಸ್ವಾಮಿ ಮಾತಿಗೆ ಮೂರು ಕಾಸಿನ ಬೆಲೆ ಇದ್ಯಾ? ಕುಮಾರಸ್ವಾಮಿ ಮಾತಿನಲ್ಲಿ ಸತ್ಯ ಇದ್ಯಾ..?ʼʼ ಎಂದು ಕೇಳಿದರು ಸಿದ್ದರಾಮಯ್ಯ.

Exit mobile version