Site icon Vistara News

ಗುರು ರಾಘವೇಂದ್ರ, ವಸಿಷ್ಠ, ಗುರು ಸಾರ್ವಭೌಮ ಬ್ಯಾಂಕ್‌ ಹಗರಣದ ಸಿಬಿಐ ತನಿಖೆಗೆ ಸಿಎಂ ಒಪ್ಪಿಗೆ

Guru Raghavendra bank

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗುರು ರಾಘವೇಂದ್ರ ಕೋ ಅಪ್ ಬ್ಯಾಂಕ್, ವಸಿಷ್ಠ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಬ್ಯಾಂಕ್‌ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಅನುಮೋದನೆ ನೀಡಿದ್ದಾರೆ.

ಬೆಂಗಳೂರಿನ ಗುರು ರಾಘವೇಂದ್ರ ಕೋ ಅಪ್ ಬ್ಯಾಂಕ್, ವಸಿಷ್ಠ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಬ್ಯಾಂಕ್‌ ಆಡಳಿತ ಮಂಡಳಿಯ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕರು ಮತ್ತು ಸಿಬ್ಬಂದಿ ನಡೆಸಿರುವ ಹಗರಣದ ತನಿಖೆ ಮಾಡಿ, ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಕರಣದ ತನಿಖೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ತನಿಖಾಧಿಕಾರಿಗಳಿಗೆ ಸಹಕರಿಸಬೇಕು ಎಂದು ಗೃಹ ಇಲಾಖೆಯ ಸರ್ಕಾರದ ಕಾರ್ಯದರ್ಶಿ, ಸಿಬಿಐಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಬ್ಯಾಂಕ್‌ಗಳಿಂದ ಠೇವಣಿದಾರರಿಗೆ ಆಗಿರುವ ನಷ್ಟ ಮತ್ತು ವಂಚನೆಯ ವಿರುದ್ಧ ಪ್ರತಿಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಅವರು ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ಮಾಡಿ, ಸೂಕ್ತ ತನಿಖೆ ನಡೆಸಿ ಬ್ಯಾಂಕಿನ ಗ್ರಾಹಕರಿಗೆ ಮತ್ತು ಠೇವಣಿದಾರರಿಗೆ ನ್ಯಾಯ ಒದಗಿಸಲು ಆಗ್ರಹಿಸಿದ್ದರು. ಮೂರೂ ಬ್ಯಾಂಕ್‌ಗಳ ಠೇವಣಿದಾರರು ನಡೆಸಿದ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕರಾಗಿ ಬೆಂಬಲ ಸೂಚಿಸಿದ್ದರು. ಇದೀಗ ಹಗರಣಗಳ ತನಿಖೆ ಹೊಣೆಯನ್ನು ಸಿಬಿಐಗೆ ನೀಡಲು ಅನುಮೋದನೆ ನೀಡಲಾಗಿದೆ.

ಗುರು ರಾಘವೇಂದ್ರ ಬ್ಯಾಂಕ್ ಹಗರಣದ​ ಹಿನ್ನೆಲೆ

ಚಾಲ್ತಿಯಲ್ಲಿರುವ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಬಡ್ಡಿದರದ ಆಮಿಷವೊಡ್ಡಿ ಜನರಿಂದ ಠೇವಣಿ ಪಡೆದು ವಂಚಿಸಿದ ಆರೋಪ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಮೇಲಿದೆ. ಹೆಚ್ಚಿನ ಬಡ್ಡಿ ಆಸೆಗೆ ಸಾವಿರಾರು ಗ್ರಾಹಕರು ಈ ಸಂಸ್ಥೆಯಲ್ಲಿ ನೂರಾರು ಕೋಟಿ ರೂ. ಠೇವಣಿ ಇಟ್ಟಿದ್ದರು. ಆದರೆ ಬ್ಯಾಂಕ್​​ ಸುಳ್ಳು ಸಾಲಗಾರರ ಖಾತೆ ತೆರದು ಈ ಹಣವನ್ನು ಲಾಂಡರಿಂಗ್​ ಮಾಡಿದೆ.

ಇದನ್ನೂ ಓದಿ | Murder case : ವ್ಯಕ್ತಿಯನ್ನು ತುಂಡು ತುಂಡಾಗಿ ಕತ್ತರಿಸಿ ರಸ್ತೆಗೆ ಬೀಸಾಕಿದ ಕಿಡಿಗೇಡಿಗಳು!

ಫೆಬ್ರವರಿ 2022 ರಲ್ಲಿ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಅಧಿಕಾರಿಯೊಬ್ಬರನ್ನು ಮನಿ ಲಾಂಡರಿಂಗ್ ಆರೋಪದ ಮೇಲೆ ಇಡಿ ಬಂಧಿಸಿತು. ಈವರೆಗೆ ಸಂಸ್ಥೆಯ ಅಧ್ಯಕ್ಷ ಸೇರಿ 4 ಮಂದಿಯನ್ನು ಬಂಧಿಸಲಾಗಿದೆ. ಬ್ಯಾಂಕ್​​ನಿಂದ ವಂಚನೆಗೆ ಒಳಗಾದವರಲ್ಲಿ ಹಿರಿಯ ನಾಗರಿಕರೇ ಹೆಚ್ಚಿನವರಾಗಿದ್ದಾರೆ. ಹಿರಿಯ ನಾಗರಿಕರು ತಮ್ಮ ಉಳಿತಾಯ ಹಾಗೂ ನಿವೃತ್ತಿ ವೇತನದ ಹಣವನ್ನು ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿಗುರು ರಾಘವೇಂದ್ರ ಸಹಕಾರ ಬ್ಯಾಂಕ್​ನಲ್ಲಿ ಠೇವಣಿ ಇಟ್ಟಿದ್ದರು.

ಗುರು ರಾಘವೇಂದ್ರ ಬ್ಯಾಂಕ್‌ ಹಾಗೂ ಗುರು ಸಾರ್ವಭೌಮ ಬ್ಯಾಂಕ್‌ನಲ್ಲಿ 1,500 ಕೋಟಿ ರೂ. ಅಕ್ರಮ, ವಸಿಷ್ಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ 450 ರಿಂದ 500 ಕೋಟಿ ವಂಚನೆ ನಡೆದಿರುವ ಆರೋಪವಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version