Site icon Vistara News

ಶಾಸಕ ಯತ್ನಾಳ್‌ ವಿಜಯಪುರದ ಹುಲಿ ಎಂದ ಸಿಎಂ; ದ್ರಾಕ್ಷಿ ಮಾರುಕಟ್ಟೆ ಅಭಿವೃದ್ಧಿಗೆ ₹100 ಕೋಟಿ ಕೊಡಲೂ ಬದ್ಧ

ಬಸವರಾಜ ಬೊಮ್ಮಾಯಿ

ವಿಜಯಪುರ: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಈಚೆಗೆ ಹರಿಹಾಯುತ್ತಾ ಬರುತ್ತಿದ್ದ ಸ್ವಪಕ್ಷೀಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “ಉತ್ತರ ಕರ್ನಾಟಕ ಹಾಗೂ ವಿಜಯಪುರದ ಹುಲಿ” ಎಂದು ಸಂಬೋಧಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನಗರದಲ್ಲಿ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್‌ನಿಂದ ನಿರ್ಮಿಸಿರುವ ಶ್ರೀ ಜ್ಞಾನಯೋಗಿ ಸಿದ್ದೇಶ್ವರ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ, ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಸಿಎಂ ಬೊಮ್ಮಾಯಿ, ಸಿದ್ದೇಶ್ವರ ಶ್ರೀಗಳ ಹೆಸರಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿರುವುದು ಉತ್ತಮ ಕೆಲಸ ಎಂದು ಶಾಸಕ ಯತ್ನಾಳ್‌ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಇವರು ಉತ್ತರ ಕರ್ನಾಟಕ ಹಾಗೂ ವಿಜಯಪುರ ಹುಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಾಮೀಜಿ ಹೆಸರು ಕೇಳಿದರೆ ಸಾಕು ಅರ್ಧ ಅನಾರೋಗ್ಯ ಓಡಿ ಹೋಗುತ್ತದೆ. ಈ ಆಸ್ಪತ್ರೆ 1008 ಬೆಡ್ ವ್ಯವಸ್ಥೆಯುಳ್ಳ ಆಸ್ಪತ್ರೆಯಾಗಲಿ ಎಂದು ಹೇಳಿದ ಅವರು, ಇಂದು ಸುಮಾರು 400 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಿದ್ದೇವೆ. ಕೃಷ್ಣಾ ಮೇಲ್ಡಂಡೆ ಯೋಜನೆ ಕಾಮಗಾರಿಗಳಿಗೆ ನೀರಾವರಿ ಯೋಜನೆಗಳಿಗೆ 10 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದರು.

ಅಗತ್ಯಬಿದ್ದರೆ ದ್ರಾಕ್ಷಿ ಮಾರುಕಟ್ಟೆ ಅಭಿವೃದ್ಧಿಗೆ ೧೦೦ ಕೋಟಿ ರೂ.
ದ್ರಾಕ್ಷಿ ಮಾರುಕಟ್ಟೆ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ದ್ರಾಕ್ಷಿ ಶೀತಲೀಕರಣ ಘಟಕಕ್ಕೆ 35 ಕೋಟಿ ರೂಪಾಯಿ ನೀಡಿದ್ದೇವೆ. ಅಗತ್ಯಬಿದ್ದರೆ ಇನ್ನೂ 100 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ನೀಡಲೂ ಬದ್ಧ. ಮೂರು ತಿಂಗಳ ಒಳಗೆ ವಿಜಯಪುರ ಹಾಗೂ‌ ಕಲಬುರಗಿ ಜಿಲ್ಲೆಗಳಲ್ಲಿ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ ಮಾಡುತ್ತೇವೆ. ಇದರಿಂದ 25‌ ಸಾವಿರ ಜನರಿಗೆ ಉದ್ಯೋಗ ಸಿಗಲಿದೆ, ವೆಲೋಡ್ರಮ್ ಮೈದಾನಕ್ಕೆ ಅನಕೂಲ ಮಾಡುತ್ತೇವೆ. ಜನವರಿಯಲ್ಲಿ ವಿಜಯಪುರ ವಿಮಾನ ನಿಲ್ದಾಣ ‌ಉದ್ಘಾಟನೆಗೆ ಪ್ರಧಾನಿ ನರೇಂದ್ರ ‌ಮೋದಿ ಅವರನ್ನು ಕರೆಸಲಾಗುವುದು ಎಂದು ಸಿಎಂ ಹೇಳಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ಜಾರಿ ಮಾಡಿ ಸ್ಥಳೀಯರಿಗೆ ಉದ್ಯೋಗ ನೀಡುತ್ತೇವೆ. ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಈ ಹಿಂದೆ ಆಡಳಿತ ನಡೆಸಿದರು, ಏನೂ ಮಾಡಿಲಿಲ್ಲ. ನಾವು ಮುಂದಿನ ದಿನಗಳಲ್ಲಿ ಯೋಜನೆ ಜಾರಿ ಮಾಡಿ ಕಾಮಗಾರಿ ಆರಂಭಿಸುತ್ತೇವೆ ಎಂದು ಸಿಎಂ ಭರವಸೆ ನೀಡಿದರು.

ಒಳ್ಳೆಯ ಕೆಲಸಕ್ಕೆ ಪರಮ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳ ಆಶೀರ್ವಾದ ಇರಲಿ ಎಂದು ಹೇಳಿದ ಬೊಮ್ಮಾಯಿ, ಮೈಸೂರಿನಲ್ಲಿ ಪ್ರಧಾನಿ ಮೋದಿ ಬಗ್ಗೆ ಸಿದ್ದೇಶ್ವರ ಸ್ವಾಮೀಜಿ‌ ಮಾತನಾಡಿದ್ದರು. ಅವರಿಂದ ನನಗೆ ಸ್ಫೂರ್ತಿ ಬಂದಿದೆ ಎಂದು ಪ್ರಧಾನಿ ಹೇಳಿದ್ದರು. ಕೇಂದ್ರ ಸರ್ಕಾರ ಮೋದಿ ನೇತೃತ್ವದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದೆ. ವಿಜಯಪುರ ಜಿಲ್ಲೆಯ ‌ನೆಲ ಸ್ಪರ್ಶ ಮಾಡಿದಾಗ‌ ವಿಶೇಷ ಅನುಭವ, ಸ್ಫೂರ್ತಿ ಸಿಕ್ಕಿದೆ. ಸಿದ್ದೇಶ್ವರ ಸ್ವಾಮೀಜಿ ಮಾರ್ಗದರ್ಶನದಲ್ಲಿ ರಾಜ್ಯಕ್ಕೆ ಒಳಿತಾಗುವ ಕೆಲಸ ಮಾಡುತ್ತೇವೆ. ನವ ಕರ್ನಾಟಕಕ್ಕಾಗಿ ವಿಜಯಪುರ ಜಿಲ್ಲೆಯ ಪಾತ್ರ ದೊಡ್ಡದಿದೆ ಎಂದರು.

ವಿಜಯಪುರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮಾತನಾಡಿ, ಸೇವಾರ್ಥವಾಗಿ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಹೆಸರಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿರುವುದು ಶ್ಲಾಘನೀಯ ಕೆಲಸ. ರಾಜಕೀಯದಲ್ಲಿ ಸ್ಥಾನಮಾನ ಇಂದು ಇರಲಿದೆ, ನಾಳೆ ಹೋಗಲಿದೆ. ಆದರೆ, ಅಧಿಕಾರದಲ್ಲಿದ್ದಾಗ ನಾವು ಮಾಡಿದ ಕೆಲಸಗಳು ಶಾಶ್ವತವಾಗಿ ಇರಬೇಕು. ನಾವು 21ನೇ ಶತಮಾನದಲ್ಲಿ ಇದ್ದೇವೆ, ದೇಶದ ಜಿಡಿಪಿ ಹಾಗೂ ಇತರ ವಿಷಯಗಳು ಮಾತ್ರ ಮುಖ್ಯವಲ್ಲ, ದೇಶದ ಜನರ ಆರೋಗ್ಯವು ಮುಖ್ಯ. ಈ ನಿಟ್ಟಿನಲ್ಲಿ ಶಾಸಕ ಯತ್ನಾಳ್‌ ಒಳ್ಳೆಯ ಕೆಲಸ ಮಾಡಿದ್ದಾರೆ. ಪ್ರಧಾನಿ ಜನ್ಮ ದಿನವನ್ನು ಜನರ ಸೇವೆ ಮಾಡುವ ಮೂಲಕ ಆಚರಣೆ ಮಾಡಿದ್ದೇವೆ, ಅದು ಪ್ರಧಾನಿ ಅವರ ಆಶಯವೂ ಆಗಿದೆ ಎಂದರು.

ಎರಡನೇ ಮಹಾ ಯುದ್ಧದ ಬಳಿಕ ಅಭಿವೃದ್ಧಿಯಲ್ಲಿ ಯುಎಸ್ಎ ಹಾಗೂ ರಷ್ಯಾ ಮೊದಲ ಸ್ಥಾನದಲ್ಲಿದ್ದವು.
ಕೋವಿಡ್ ಬಳಿಕ ಭಾರತ 200 ಕೋಟಿ ಲಸಿಕೆ ನೀಡಿ ಸಾಧನೆ ಮಾಡಿದೆ. ಮುಂದಿನ ದಿನಗಳಲ್ಲಿ‌ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಲಿದೆ. ದೇಶದ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿ ಮಾಡಲಾಗುತ್ತಿದ್ದು, ಮೂರು‌ ಜಿಲ್ಲೆಗೆ ಒಂದರಂತೆ ಮೆಡಿಕಲ್ ಕಾಲೇಜು ನೀಡಲಾಗುತ್ತದೆ. ರಸ್ತೆ ನಿರ್ಮಾಣದಲ್ಲೂ ಸಾಧನೆ ಮಾಡಲಾಗುತ್ತಿದೆ. ಆರೋಗ್ಯ‌ ರೈಲ್ವೆ ಹಾಗೂ ಸಾರಿಗೆ ಸೇವೆ ಉತ್ತಮ ಮಾಡಲಾಗುತ್ತದೆ. ಭಾರತ ಸರ್ಕಾರ 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ದೇಶ ಮಾಡಲು ಗುರಿ ಹೊಂದಿದೆ ಎಂದರು.

ವಿಜಯಪುರ, ಬಾಗಲಕೋಟೆಗೆ ಮೆಡಿಕಲ್‌ ಕಾಲೇಜು ಮಂಜೂರು ಮಾಡಿ
ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿ ದೈವಿ ಪುರುಷರು, ಕಿಸೆ ಇಲ್ಲದ ಅಂಗಿ ತೊಟ್ಟ ಸ್ವಾಮೀಜಿ ಇರುವುದು ನಮ್ಮ ಸುದೈವ. ಸ್ವಾಮೀಜಿ ಅವರ ಹೆಸರಿನಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿರುವುದು ನಮ್ಮ ಸೌಭಾಗ್ಯ. ಆಸ್ಪತ್ರೆ ಲಾಭಕ್ಕಾಗಿ ಮಾಡಿಲ್ಲ, ಬಡವರ ಸೇವೆಗೆ ನಿರ್ಮಿಸಲಾಗಿದೆ. ಈ ಹಿಂದೆ ಮಾಜಿ ಸಚಿವ ಅನಂತಕುಮಾರ್‌ ಹಿಂದೆ ಇರುತ್ತಿದ್ದೆವು, ಈಗ ಪ್ರಲ್ಹಾದ್ ಜೋಶಿ ಅವರ ಹಿಂದೆ ಇರುತ್ತೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡುವ ಜತೆಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ | Cong Prez Poll | ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಮೂವರು ನಾಯಕರಿಂದ ನಾಮಪತ್ರ; ಹೆಚ್ಚಿನವರಿಗೆ ಖರ್ಗೆ ಪರ ಒಲವು

Exit mobile version