ಹಾವೇರಿ: ಟಿಕೆಟ್ ಹಂಚಿಕೆ ಬಳಿಕ ಟೆಂಪಲ್ ರನ್ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ, ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಸಾಂಕೇತಿಕವಾಗಿ ಉಮೇದುವಾರಿಕೆ (Karnataka Election 2023) ಸಲ್ಲಿಸಿದರು. ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ 5.98 ಕೋಟಿ ರೂ. ಮೌಲ್ಯದ ಚರಾಸ್ತಿ, 22.95 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 28.93 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ.
ಅವರ ಬಳಿ 3 ಲಕ್ಷ ರೂ. ನಗದು, ಎಫ್‌ಡಿ ಮತ್ತು ಆರ್‌ಡಿಗಳಲ್ಲಿ 6.83 ಲಕ್ಷ ರೂ, ಉಳಿತಾಯ (ಎಸ್‌ಬಿ) ಖಾತೆಗಳಲ್ಲಿ 33.80 ಲಕ್ಷ ರೂ.ಗಳನ್ನು ಹೊಂದಿದ್ದಾರೆ. ಸಾರ್ವಜನಿಕ ಕಂಪನಿಗಳಲ್ಲಿ 64.77 ಲಕ್ಷ ರೂ, ಖಾಸಗಿ ಕಂಪನಿಗಳಲ್ಲಿ 64.98 ಲಕ್ಷ ರೂ. ಹಾಗೂ ಪಾರ್ಟ್ನರ್‌ಶಿಪ್‌ನಲ್ಲಿ 1.44 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.
ಪುತ್ರ ಭರತ್ ಬೊಮ್ಮಾಯಿಗೆ 14.74 ಲಕ್ಷ ರೂಪಾಯಿ ವೈಯಕ್ತಿಕ ಸಾಲ ನೀಡಿದ್ದಾರೆ. 1.50 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳಿದ್ದು, ಇವರ ಹೆಸರಿನಲ್ಲಿ ಯಾವುದೇ ವಾಹನವಿಲ್ಲ. ಬಸವರಾಜ ಬೊಮ್ಮಾಯಿ ಅವರಿಗೆ 22.95 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯಿದ್ದು, ಹುಬ್ಬಳ್ಳಿ ತಾಲೂಕು ತಾರಿಹಾಳ ಗ್ರಾಮದ ಬಳಿ 82 ಲಕ್ಷ ರೂ. ಮೌಲ್ಯದ ಕೃಷಿ ಜಮೀನಿದೆ. ಯಲಹಂಕ ಹೋಬಳಿಯಲ್ಲಿ 4250 ಚ.ಅಡಿ ವಿಸ್ತೀರ್ಣದ 3 ಕೋಟಿ ರೂ. ಮೌಲ್ಯದ ಹಾಗೂ ಹುಬ್ಬಳ್ಳಿ ಬೆಂಗೇರಿಯಲ್ಲಿ 4.44 ಕೋಟಿ ರೂ. ಮೌಲ್ಯದ 21780 ಚ.ಅಡಿ ವಿಸ್ತೀರ್ಣದ ಕೃಷಿಯೇತರ ಜಮೀನಿದೆ.
ಇದನ್ನೂ ಓದಿ | Karnataka Election 2023: ಸವದಿ ಪಕ್ಷ ತೊರೆದಿದ್ದಕ್ಕೆ ಯತ್ನಾಳ್, ರಾಮುಲು ಬೇಸರ; ಉಭಯ ನಾಯಕರಿಂದ ತಾಳ್ಮೆ ಪಾಠ
ಧಾರವಾಡದ ಲಕ್ಕಮನಹಳ್ಳಿ ಕೈಗಾರಿಕಾ ಪ್ರದೇಶ, ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶ ಹಾಗೂ ಕಾರವಾರ ತಾಲೂಕು ಮಾಜಾಳಿ ಗ್ರಾಮದಲ್ಲಿ ಸೇರಿ 6.50 ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳಿವೆ. ಶಿಗ್ಗಾಂವಿಯಲ್ಲಿ ಮನೆ ಹಾಗೂ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ ಕ್ಯಾಸಲಾವೆಲ್ಲೆ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ಹೊಂದಿದ್ದಾರೆ. ಸಿಎಂ ಬೊಮ್ಮಾಯಿ ಅವರು 5.79 ಕೋಟಿ ರೂ. ಸಾಲವನ್ನೂ ಹೊಂದಿದ್ದಾರೆ. ಪತ್ನಿ ಚೆನ್ನಮ್ಮ ಅವರಲ್ಲಿ 50 ಸಾವಿರ ರೂ. ನಗದು, 78.83 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಸೇರಿ 1.14 ಕೋಟಿ ರೂ ಮೌಲ್ಯದ ಚರಾಸ್ತಿಯಿದೆ.
ಹಿಂದು ಅವಿಭಕ್ತ ಕುಟುಂಬದ ಹೆಸರಿನಲ್ಲಿ 19.20 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು 1.57 ಕೋಟಿ ರೂ. ಮೌಲ್ಯದ ಚರಾಸ್ತಿಯಿದೆ. ಮಗಳ ಹೆಸರಿನಲ್ಲಿ 1.28 ಕೋಟಿ ರೂ. ಮೌಲ್ಯದ ಚರಾಸ್ತಿಯಿದೆ. 2018ರ ಚುನಾವಣೆಯಲ್ಲಿ ಬೊಮ್ಮಾಯಿ ಅವರು 10.19 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು. 5 ವರ್ಷಗಳ ಅವಧಿಯಲ್ಲಿ ಇವರ ವೈಯಕ್ತಿಕ ಆಸ್ತಿ ಮೌಲ್ಯ ಸುಮಾರು ಎರಡು ಪಟ್ಟು ಹೆಚ್ಚಿದಂತಾಗಿದೆ.
ಶಿಗ್ಗಾಂವಿ ಕ್ಷೇತ್ರದಿಂದ ಸತತ ಮೂರು ಸಲ ಗೆಲ್ಲುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಲ್ಕನೇ ಬಾರಿ ಉಮೇದುವಾರಿಕೆ ಸಲ್ಲಿಕೆ ಮಾಡುವ ಮೊದಲು ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಶಿಗ್ಗಾಂವಿ ಗ್ರಾಮದೇವತೆ ದ್ಯಾಮವ್ವಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ತಹಸೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು.
ಇದನ್ನೂ ಓದಿ | Karnataka Election 2023 : ಕಾಂಗ್ರೆಸ್‌ನಿಂದ ಒಟ್ಟು 209 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ; ಯಾವ ಜಾತಿಗೆ ಎಷ್ಟು ಟಿಕೆಟ್?
ಏಪ್ರಿಲ್ 19 ರಂದು ಮತ್ತೊಮ್ಮೆ ನಾಮಪತ್ರ ಸಲ್ಲಿಕೆ
ನಾಮಪತ್ರ ಸಲ್ಲಿಕೆಗೆ ತಮ್ಮ ನೆಚ್ಚಿನ ಕಾರಿನಲ್ಲಿ ಬಂದ ಬಸವರಾಜ ಬಂದ ಕೇಸರಿ ಶಾಲನ್ನು ಹೆಗಲ ಮೇಲೆ ಹಾಕಿಕೊಂಡಿದ್ದು ವಿಶೇಷವಾಗಿತ್ತು. ನಾಮಪತ್ರ ಸಲ್ಲಿಕೆ ವೇಳೆ ಸಚಿವ ಸಿ.ಸಿ. ಪಾಟೀಲ, ಸಂಸದ ಶಿವಕುಮಾರ್ ಉದಾಸಿ ಉಪಸ್ಥಿತರಿದ್ದರು. ಬಳಿಕ ಸವಣೂರು ಪಟ್ಟಣದಲ್ಲಿ ಹುರಳಿಕೊಪ್ಪಿ ಹಾಗೂ ಕಾರಡಗಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರ ಸಭೆ ನಡೆಸಿ ಗೆಲುವಿಗೆ ರಣತಂತ್ರ ರೂಪಿಸಿದರು. ಏಪ್ರಿಲ್ 19ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಬಳಿಕ ಬೃಹತ್ ಸಮಾವೇಶ ಮಾಡುವ ಮೂಲಕ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮುಂದೆ ಸಿಎಂ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ.