ಬೆಳಗಾವಿ: ಕಿತ್ತೂರು(Kittur Utsav) ಬಳಿ ಇರುವ ಕೆ.ಐ.ಎ.ಡಿ.ಬಿ. ಜಾಗದಲ್ಲಿ 1,000 ಎಕರೆ ಕೈಗಾರಿಕಾ ಟೌನ್ ಶಿಪ್ ನಿರ್ಮಿಸಲು ನಿರ್ಧರಿಸಲಾಗಿದೆ. ಶೀಘ್ರ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿ 50 ಸಾವಿರ ಯುವಕರಿಗೆ ಉದ್ಯೋಗ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚೆನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯಮಟ್ಟದ ಚೆನ್ನಮ್ಮನ ಕಿತ್ತೂರು ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧಾರವಾಡ-ಬೆಳಗಾವಿ ರೈಲುಮಾರ್ಗವನ್ನು ಕಿತ್ತೂರು ಮಾರ್ಗವಾಗಿ ನಿರ್ಮಿಸಲಾಗುವುದು. ಇದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ | ಕೋಟಿ ಕಂಠ ಗಾಯನ | 29 ರಾಜ್ಯ, 25 ದೇಶಗಳಿಂದ 60 ಲಕ್ಷ ಜನರ ನೋಂದಣಿ: ಸಿನಿ ರಂಗದ ನೀರಸ ಸ್ಪಂದನೆ
ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಸಂಬಂಧಿಸಿದಂತೆ ಇನ್ನು ಕೆಲವು ದಿನಗಳಲ್ಲಿ ಸಿಹಿ ಸುದ್ದಿ ಸಿಗಲಿದೆ.
ಇದಲ್ಲದೇ ಕಳಸಾ-ಬಂಡೂರಿ ಯೋಜನೆಯ ಅನುಷ್ಠಾನಕ್ಕೆ ಸರ್ಕಾರ ಬದ್ಧವಿದೆ. ಅದು ಕೂಡ ಶೀಘ್ರ ಅನುಷ್ಠಾನಕ್ಕೆ ಕಾಲ ಕೂಡಿ ಬರಲಿದೆ ಎಂದರು.
ಕೋಟೆ ಪಕ್ಕದಲ್ಲಿ ಅರಮನೆ ಪ್ರತಿರೂಪ
ರೈತರ ಮನವೊಲಿಸಿ ಜಮೀನು ಸ್ವಾಧೀನಪಡಿಸಿಕೊಂಡು ಈಗಿರುವ ಚೆನ್ನಮ್ಮನ ಕೋಟೆಯ ಪಕ್ಕದಲ್ಲೇ ಅರಮನೆಯ ಪ್ರತಿರೂಪ ನಿರ್ಮಿಸಲಾಗುವುದು. ಶಿಥಿಲಾವಸ್ಥೆಯಲ್ಲಿರುವ ಕೋಟೆಯ ಜೀರ್ಣೋದ್ಧಾರಕ್ಕೆ 27 ಕೋಟಿ ರೂಪಾಯಿ ಅನುದಾನವನ್ನು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ತೆಗೆದಿರಿಸಲಾಗಿದೆ. ಏತ ನೀರಾವರಿ ಯೋಜನೆಗೆ 580 ಕೋಟಿ ಅನುದಾನ ನೀಡಲಾಗಿದೆ. ಅದೇ ರೀತಿ ಜಲಜೀವನ ಮಿಷನ್ ಯೋಜನೆಯಡಿ ಕಿತ್ತೂರು, ಖಾನಾಪುರ ಹಾಗೂ ಬೈಲಹೊಂಗಲ ಕ್ಷೇತ್ರಗಳಿಗೆ 960 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ. ಚೆನ್ನಮ್ಮನ ಅರಮನೆ ನಿರ್ಮಾಣಕ್ಕೆ 115 ಕೋಟಿ ರೂಪಾಯಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಸುವರ್ಣಸೌಧದಲ್ಲಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಮುಂದಿನ ತಿಂಗಳು ಅಡಿಗಲ್ಲು ಇಡಲಾಗುವುದು. ಅಡಿಗಲ್ಲು ಮಾತ್ರವಲ್ಲ, ನಮ್ಮ ಅವಧಿಯಲ್ಲಿ ಉದ್ಘಾಟನೆ ಕೂಡ ಮಾಡಲಾಗುತ್ತದೆ. ಬೈಲಹೊಂಗಲ ಸ್ಮಾರಕ ಅಭಿವೃದ್ಧಿಗೆ ಎರಡು ಕೋಟಿ ಅನುದಾನವನ್ನು ಪ್ರಾಧಿಕಾರದ ವತಿಯಿಂದ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ರೈತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿದ್ಯಾನಿಧಿ
ರೈತರ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ರೈತರ ಮಕ್ಕಳಿಗೆ ಹಾಗೂ ಕೃಷಿ ಕೂಲಿಕಾರರ ಮಕ್ಕಳಿಗಾಗಿ ವಿದ್ಯಾನಿಧಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಈ ಸಂದರ್ಭದಲ್ಲಿ ರೈತ ವಿದ್ಯಾನಿಧಿ ಯೋಜನೆಯಡಿ ಸೌಲಭ್ಯ ಪಡೆದುಕೊಂಡು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೇದಿಕೆಯ ಮೇಲೆ ಕೆಲಕಾಲ ಸಂವಾದ ನಡೆಸಿದರು.
ಕೆಲವು ವಿದ್ಯಾರ್ಥಿಗಳು ವಿದ್ಯಾನಿಧಿ ಯೋಜನೆಯ ಅನುಕೂಲಗಳ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.
ಇದೇ ವೇಳೆ ಯೋಜನೆಯ ಫಲಾನುಭವಿ ವಿದ್ಯಾರ್ಥಿಗಳು ನೇಗಿಲು ನೀಡಿ, ಹಸಿರು ಶಾಲು ಹೊದಿಸಿ ಸನ್ಮಾನಿಸಿದರು.
ಚೆನ್ನಮ್ಮನ ಹೋರಾಟ ನಮಗೆ ಪ್ರೇರಣೆ
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರು 1857 ರಲ್ಲಿ ಹೋರಾಡಿದರು. ಆದರೆ ಅದಕ್ಕೂ ಮುಂಚೆ 1824ರಲ್ಲಿ ಚೆನ್ನಮ್ಮ ಹೋರಾಡಿದ್ದರು. ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ಚೆನ್ನಮ್ಮ ಎಂಬ ಸತ್ಯವನ್ನು ಇತಿಹಾಸದ ಪುಟಗಳಲ್ಲಿ ಸೇರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಜೈಲಿಗೆ ಹಾಕಿದರೂ ಎದೆಗುಂದದೇ ಹೋರಾಟವನ್ನು ಮುಂದುವರಿಸಿದ ಚೆನ್ನಮ್ಮ ಸಂಗೊಳ್ಳಿ ರಾಯಣ್ಣ ಸೆರೆ ಸಿಕ್ಕಾಗ ಅಧೀರಗೊಂಡಿದ್ದರು. ಸ್ವಾತಂತ್ರ್ಯದ ಕಹಳೆ ಊದುವ ಮೂಲಕ ಈ ನಾಡನ್ನು ಪವಿತ್ರಗೊಳಿಸಿದ ಚೆನ್ನಮ್ಮಳಿಗೆ ಕೋಟಿ ಕೋಟಿ ನಮನ. ಚೆನ್ನಮ್ಮನ ತ್ಯಾಗ-ಬಲಿದಾನ 200 ವರ್ಷಗಳ ಬಳಿಕವೂ ನಮಗೆ ಪ್ರೇರಣೆಯಾಗಿದೆ ಎಂದರು.
ಚೆನ್ನಮ್ಮನ ಕಿತ್ತೂರು ಆಡಳಿತಸೌಧ ಉದ್ಘಾಟನೆ
ಇದೇ ಸಂದರ್ಭದಲ್ಲಿ ಚನ್ನಮ್ಮನ ಕಿತ್ತೂರು ತಾಲೂಕು ಆಡಳಿತ ಸೌಧವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಇದಲ್ಲದೇ ತಾಲೂಕು ಆಸ್ಪತ್ರೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚೆನ್ನಮ್ಮನ ಕಿತ್ತೂರಿನ ಶಾಸಕರಾದ ಮಹಾಂತೇಶ್ ದೊಡ್ಡಗೌಡರ, ಚೆನ್ನಮ್ಮನ ಉತ್ಸವವನ್ನು ರಾಜ್ಯಮಟ್ಟಕ್ಕೆ ಮೇಲ್ದರ್ಜೆಗೆ ಏರಿಸುವುದರ ಜತೆಗೆ ವಿಜಯ ಜ್ಯೋತಿಯನ್ನು ರಾಜ್ಯಾದ್ಯಂತ ಸಂಚರಿಸಲು ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕ್ಷೇತ್ರದ ಜನರ ಪರವಾಗಿ ಅಭಿನಂದನೆ ಸಲ್ಲಿಸಿ, ಕಿತ್ತೂರು ಮತಕ್ಷೇತ್ರದ 104 ಗ್ರಾಮಗಳಿಗೆ ನೀರು ಒದಗಿಸಲು ಸಿಎಂ ನೆರವು ನೀಡಿದ್ದಾರೆ. ನೇಸರಗಿಯಿಂದ ಚನ್ನಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಅವಕಾಶ ಕಲ್ಪಿಸಿದ್ದಾರೆ ಎಂದರು.
ಕೋಟೆಯ ಪಕ್ಕದಲ್ಲಿಯೇ ಕೋಟೆ ಪ್ರತಿರೂಪ ನಿರ್ಮಿಸಬೇಕು ಎಂದು ಸಿಎಂಗೆ ಮನವಿ ಮಾಡಿ, ಶಿಥಿಲಗೊಂಡಿರುವ ಚೆನ್ನಮ್ಮನ ಕೋಟೆಯ ಜೀರ್ಣೋದ್ಧಾರ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜನತೆಯ ಪರವಾಗಿ ಶಾಸಕ ದೊಡ್ಡಗೌಡರ ಮನವಿ ಮಾಡಿಕೊಂಡರು.
ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಹಾಗೂ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿದರು. ಸಚಿವ ಮುರಗೇಶ ನಿರಾಣಿ, ಮಹಾಂತೇಶ ಕೌಜಲಗಿ, ದುರ್ಯೋಧನ ಐಹೊಳೆ ಮತ್ತಿತರರು ಇದ್ದರು.
ಇದನ್ನೂ ಓದಿ | Kittur Utsav | ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ; ಗಮನ ಸೆಳೆದ ಮೆರವಣಿಗೆ, ಕಲಾತಂಡಗಳು