ಬೆಂಗಳೂರು: ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ.2 ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಇದರ ಜತೆಗೆ ಕ್ರೀಡಾ ಕರ್ನಾಟಕವನ್ನಾಗಿ ರೂಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಗ್ರಾಮೀಣ ಕ್ರೀಡೋತ್ಸವ, ಯೋಗಾಥಾನ್, 2020ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ ಹಾಗೂ 2021-22ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರಾವಳಿಯ ಕಂಬಳ, ಉತ್ತರ ಕರ್ನಾಟಕದ ಚಕ್ಕಡಿ ಹೊಡೆಯುವ ಸ್ಪರ್ಧೆ, ಕುಸ್ತಿ, ಸೈಕಲ್, ಮೋಟಾರ್ ಸೈಕಲ್, ಕಾರ್ ರ‍್ಯಾಲಿಗಳು, ಗಾಲ್ಫ್, ವಾಲಿಬಾಲ್ ಕ್ರೀಡೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಕನ್ನಡದ ಯುವಕರು ಯಶಸ್ಸಿನ ಉತ್ತುಂಗಕ್ಕೆ ಏರಬೇಕು. ಸೀನಿಯರ್ ಒಲಿಂಪಿಕ್ಸ್ ಏರ್ಪಡಿಸಲು ರಾಜ್ಯ ಸರ್ಕಾರ 8 ಕೋಟಿ ರೂ.ಗಳನ್ನು ನೀಡಿದೆ. ಕರ್ನಾಟಕವನ್ನು ಕ್ರೀಡಾ ಕರ್ನಾಟಕವನ್ನಾಗಿ ಮಾಡುವ ಗುರಿ ರಾಜ್ಯ ಸರ್ಕಾರಕ್ಕಿದ್ದು, ಕ್ರೀಡೆಯ ತರಬೇತುದಾರರಿಗೆ ಎಲ್ಲ ಸಹಕಾರ ನೀಡಲಾಗುವುದು ಎಂದರು.
ಗ್ರಾಮೀಣ ಕ್ರೀಡಾಕೂಟ ಆರಂಭ
ಮುಂದಿನ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (2024) ಭಾಗವಹಿಸಲು ರಾಜ್ಯದ ಆಯ್ದ 75 ಕ್ರೀಡಾಪಟುಗಳಿಗೆ ವಿಶ್ವಮಟ್ಟದ ತರಬೇತಿ ನೀಡಲಾಗುತ್ತಿದೆ. ಇವರಲ್ಲಿ ಹಲವರು ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆಲ್ಲಬೇಕೆಂಬುದು ಸರ್ಕಾರದ ಗುರಿಯಾಗಿದೆ. ಜತೆಗೆ ಗ್ರಾಮೀಣ ಕ್ರೀಡೆಗಳನ್ನು ಸರ್ಕಾರದಿಂದ ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಗ್ರಾಮೀಣ ಕ್ರೀಡಾಕೂಟವನ್ನು ಪ್ರಾರಂಭಿಸಲಾಗಿದೆ. ಕಬಡ್ಡಿ, ಖೋ ಖೋ, ಕಂಬಳ, ಎತ್ತಿನಗಾಡಿ ಸ್ಪರ್ಧೆ ಹೀಗೆ ಹಲವು ಕ್ರೀಡೆಗಳು ಗ್ರಾಮೀಣ ಪ್ರದೇಶದ ಸೊಗಡನ್ನು ಎತ್ತಿಹಿಡಿಯುತ್ತವೆ. ಈ ಮೂಲಕ ಗ್ರಾಮ ಮಟ್ಟದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗುತ್ತಿದೆ ಎಂದರು.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ತನಿಖೆಯಲ್ಲಿ ವಿಳಂಬವಿಲ್ಲ, ಕಾನೂನು ಪ್ರಕಾರ ಕ್ರಮ; ಗೃಹ ಸಚಿವ ಆರಗ ಜ್ಞಾನೇಂದ್ರ
ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ
ಯುವಜನ ಸಬಲೀಕರಣಕ್ಕಾಗಿ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯನ್ನು ಆಗಸ್ಟ್ 15ರಂದು ಚಾಲನೆ ನೀಡಲಾಗಿದೆ. ಪ್ರತಿ ಗ್ರಾಮದಲ್ಲಿ 30 ಜನರ ಯುವಜನರ ಸಂಘವನ್ನು ಗುರುತಿಸಿ, 7.5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗಿನ ಯೋಜನೆಗಳನ್ನು ನೀಡಲಾಗುತ್ತಿದೆ. ಸಂಘಕ್ಕೆ 1.5 ಲಕ್ಷ ರೂ. ಅನುದಾನವನ್ನು ಸರ್ಕಾರವೇ ಭರಿಸಿ, ಉತ್ಪನ್ನಗಳ ತಯಾರಿಕೆಗೆ ತರಬೇತಿ, ಹಾಗೂ ಮಾರುಕಟ್ಟೆ ಜೋಡಣೆಯನ್ನು ಕಲ್ಪಿಸಲಿದೆ. ಸ್ವಯಂ ಉದ್ಯೋಗ ಮಾಡಿ ಇತರರಿಗೆ ಉದ್ಯೋಗ ನೀಡುವ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಿಂದ ಒಂದು ವರ್ಷಕ್ಕೆ ಸುಮಾರು 5 ಲಕ್ಷ ಯುವಕರಿಗೆ ಉದ್ಯೋಗ ಸೃಷ್ಟಿಸಿದಂತಾಗುತ್ತದೆ ಎಂದರು.
ಭಾರತದ ಭವಿಷ್ಯ ಯುವಜನತೆಯ ಮೇಲಿದೆ
ಧ್ಯಾನ್‍ಚಂದ್ ಅವರು ಒಲಿಂಪಿಕ್ಸ್‌ನಲ್ಲಿ ಮೂರು ಬಾರಿ ಚಿನ್ನದ ಪದಕ ಗೆದ್ದು, ಭಾರತಕ್ಕೆ ಕೀರ್ತಿ ತಂದವರು. ಹಾಕಿಯ ಜಾದೂಗಾರರಾಗಿದ್ದ ಅವರು ಹಾಕಿಯನ್ನು ಅಗ್ರಮಾನ್ಯ ಸ್ಥಾನಕ್ಕೆ ತಂದಿದ್ದಾರೆ. ಧ್ಯಾನ್ ಚಂದ್ ಅವರ ಹೆಸರಿನಲ್ಲಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕರ್ನಾಟಕದಲ್ಲಿ ನೀಡಲಾಗುವ ಏಕಲವ್ಯ ಪ್ರಶಸ್ತಿ, ಕ್ರೀಡಾರತ್ನ ಪ್ರಶಸ್ತಿ, ನಗದು ಪ್ರಶಸ್ತಿ ನೀಡಲಾಗುತ್ತಿದೆ. ಕ್ರೀಡಾಕ್ಷೇತ್ರದಲ್ಲಿನ ತಮ್ಮ ಶ್ರಮ, ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ನಿಮ್ಮ ಬೆನ್ನುತಟ್ಟಿ ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಭಾರತದಲ್ಲಿ ಶೇ.46 ಜನಸಂಖ್ಯೆಯುಳ್ಳ ಯುವಜನರಿದ್ದಾರೆ. ಮುಂದಿನ 25 ವರ್ಷಗಳು ಭಾರತದ ಭವಿಷ್ಯ ಈ ಯುವಜನತೆಯ ಮೇಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ | ಚಾಮರಾಜಪೇಟೆ ಮೈದಾನ | ಹೈಕೋರ್ಟ್ ತೀರ್ಪು ಪ್ರಶ್ನಿಸಿದ ವಕ್ಫ್ ಮಂಡಳಿ: ನಾಳೆ ಸುಪ್ರೀಂ ವಿಚಾರಣೆ