Site icon Vistara News

ಈ ಬಾರಿ ಸಾಂಪ್ರದಾಯಿಕ, ಅದ್ಧೂರಿ ದಸರಾ; ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ಮೈಸೂರು: ಈ ಬಾರಿ ಅದ್ಧೂರಿ ದಸರಾ ನಡೆಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಮಂಗಳವಾರ ಉನ್ನತ ಮಟ್ಟದ ಸಮಿತಿ ಸಭೆ ನಡೆಸಲಾಗಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಅದ್ಧೂರಿಯಾಗಿ ದಸರಾ ಕಾರ್ಯಕ್ರಮವನ್ನು ನಡೆಸಿರಲಿಲ್ಲ. ಆದರೆ, ಈ ಬಾರಿ ಸಾಂಪ್ರದಾಯಿಕ ಗಜಪಯಣ ಸೇರಿ ಎಲ್ಲ ಕಾರ್ಯಕ್ರಮಗಳನ್ನೂ ಅದ್ಧೂರಿಯಾಗಿ ನಡೆಸಲು ತೀರ್ಮಾಣಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಚಾಮುಂಡೇಶ್ವರಿ ವರ್ಧಂತಿ ಹಿನ್ನೆಲೆಯಲ್ಲಿ ಬುಧವಾರ ಚಾಮುಂಡಿಬೆಟ್ಟದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ದಸರಾದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಮುಂದಿನ ಒಂದು ವಾರದಲ್ಲಿ ಮೈಸೂರು ಟೂರಿಸಮ್ ಸರ್ಕಿಟ್‌ ಘೋಷಣೆ ಮಾಡುತ್ತೇವೆ. ಈ ಬಾರಿಯ ದಸರಾಗೆ ಹೊಸ ಆಯಾಮ ಸಿಗಲಿದೆ. ದಸರಾ ಉದ್ಘಾಟಕರ ಬಗ್ಗೆ ಚರ್ಚೆಯಾಗಿದ್ದು, ಮುಂದೆ ಎಲ್ಲರ ಅಭಿಪ್ರಾಯ ಪಡೆದು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತೇವೆ. ದಸರಾ ಪ್ರಾಧಿಕಾರ ರಚನೆ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.

ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್, ಸಚಿವ ಗೋವಿಂದ ಕಾರಜೋಳ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್‌.ಎ.ರಾಮ್‌ದಾಸ್ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ | Dasara 2022 | ಈ ಬಾರಿ ಅದ್ದೂರಿಯಾಗಿ ನಡೆಯಲಿದೆ ವಿಶ್ವ ವಿಖ್ಯಾತ ಮೈಸೂರು ದಸರಾ

ಕಾಂಗ್ರೆಸ್‌ನಲ್ಲಿ ಆಂತರಿಕ ತಿಕ್ಕಾಟ ಶುರುವಾಗಿದೆ
ತಮ್ಮನ್ನು ರಿಮೋಟ್‌ ಕಂಟ್ರೋಲ್‌ ಸಿಎಂ ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಅವರ ಪಕ್ಷದವರೇ ಬಿಡುತ್ತಿಲ್ಲ. ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ತಿಕ್ಕಾಟ ಶುರುವಾಗಿದೆ. ಡಿಕೆಶಿ ಒಂದು ತೀರವಾದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೊಂದು ತೀರ ಎನ್ನುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನಲ್ಲಿ‌ ಎಲ್ಲ ಕಡೆ ಉತ್ತಮ ಮಳೆಯಾಗುತ್ತಿದೆ. ಕಬಿನಿ, ಕಾವೇರಿ ಏಕಕಾಲಕ್ಕೆ ಭರ್ತಿ ಆಗುವುದು ಅಪರೂಪ. ಈ ಬಾರಿ ಒಟ್ಟಿಗೆ ಭರ್ತಿಯಾಗಿವೆ. ತಡ ಮಾಡದೆ ಎರಡೂ ಕಡೆ ಬಾಗಿನ ಸಮರ್ಪಿಸಬೇಕೆಂಬ ಕಾರಣಕ್ಕೆ ಬಂದಿದ್ದೇನೆ ಎಂದರು.

ಜುಲೈ 22ರಂದು ಸುಪ್ರೀಂ ಕೋರ್ಟ್‌ಗೆ ಕ್ಷೇತ್ರ ಮರುವಿಂಗಡಣೆ ಕುರಿತು ಪ್ರಮಾಣ ಪತ್ರ ಸಲ್ಲಿಸುತ್ತೇವೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಜಿಲ್ಲಾ, ತಾಲೂಕು ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆ ನಡೆಸಲು ಸೂಕ್ತ ಕ್ರಮ‌ ಕೈಗೊಳ್ಳುತ್ತೇವೆ. ಮೈಸೂರು ಮೇಯರ್ ಆಯ್ಕೆ ಚುನಾವಣೆ ಕುರಿತು ಮೀಸಲಾತಿ ನಿಗದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ | Dasara 2022 | ಸಾಂಪ್ರದಾಯಿಕ, ಅದ್ಧೂರಿ, ಅಂತಾರಾಷ್ಟ್ರೀಯ ಮೈಸೂರು ದಸರಾ: ಸಿಎಂ ಸಭೆಯಲ್ಲಿ ತೀರ್ಮಾನ

Exit mobile version