Site icon Vistara News

Nava Karnataka Summit: ರಾಜ್ಯದಲ್ಲಿ ವಿಮಾನ ಉತ್ಪಾದನಾ ಘಟಕ ಸ್ಥಾಪಿಸುವ ಗುರಿ: ಸಿಎಂ ಬೊಮ್ಮಾಯಿ

CM Basavaraj Bommai says Aim to set up aeroplane manufacturing plant in Karnataka

ಹುಬ್ಬಳ್ಳಿ: ಏರ್ ಬಸ್, ಸ್ಯಾಫ್ರನ್ ಸೇರಿದಂತೆ ವಿವಿಧ ಸಂಸ್ಥೆಗಳ ವಿಮಾನದಲ್ಲಿನ ಬಹುಪಾಲು ಭಾಗಗಳ ಉತ್ಪಾದನೆಯನ್ನು ಕರ್ನಾಟಕದಲ್ಲಿ ಮಾಡಲಾಗುತ್ತಿದೆ. ಅದರಂತೆ ಸರ್ಕಾರ ಕರ್ನಾಟಕದಲ್ಲಿ ವಿಮಾನ ಉತ್ಪಾದನಾ ಘಟಕವನ್ನು ಸ್ಥಾಪಿಸುವ ದೂರದೃಷ್ಟಿ ಹೊಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ನವ ಕರ್ನಾಟಕ ಶೃಂಗ ಆವಿಷ್ಕಾರ, ಪ್ರಗತಿ ಹಾಗೂ ಪರಿವರ್ತನೆ ಕಾರ್ಯಕ್ರಮವನ್ನು (Nava Karnataka Summit) ಉದ್ಘಾಟಿಸಿ ಅವರು ಮಾತನಾಡಿ, ಕರ್ನಾಟಕದ ಶಕ್ತಿ, ಅಭಿವೃದ್ಧಿಗೆ ಪೂರಕ ಹಾಗೂ ಮಾರಕವಾದ ಅಂಶಗಳಾವುವು ಎಂಬ ಬಗ್ಗೆ ತಿಳಿಯುವುದು ಅವಶ್ಯಕವಾಗಿದೆ ಎಂದರು.

ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಸೇರಿ ಕರ್ನಾಟಕಕ್ಕೆ ತನ್ನದೇ ಆದ ರಾಜಕೀಯ ಬಳುವಳಿಯಿದೆ. ವಿವಿಧ ಹವಾಮಾನ ಹಾಗೂ ನಿಸರ್ಗದ ವೈವಿಧ್ಯಗಳನ್ನು ಹೊಂದಿರುವ ಸಮೃದ್ಧ ರಾಜ್ಯ ಕರ್ನಾಟಕವಾಗಿದೆ. ಪಶ್ಚಿಮ ಘಟ್ಟದ ಸಂರಕ್ಷಣೆ ಬಹಳ ಮುಖ್ಯ. ಇಲ್ಲಿಂದ ಹರಿಯುವ ನದಿಗಳು ರಾಜ್ಯಕ್ಕೆ ವರದಾನವಾಗಿದೆ. ನದಿಗಳ ಹರಿಯುವಿಕೆಯಿಂದ ಜೀವ ಸಂಕುಲ, ಆಹಾರ ಸಂಪತ್ತು ಹೇರಳವಾಗಿವೆ ಎಂದರು.

ಇದನ್ನೂ ಓದಿ | Apple-Foxconn plant : ಬೆಂಗಳೂರಿನ ಆ್ಯಪಲ್-ಫಾಕ್ಸ್‌ಕಾನ್‌ ಘಟಕದಲ್ಲಿ ಏನಿರಲಿದೆ? ಕೇಂದ್ರ ಸಚಿವರ ವಿವರಣೆ ಏನು?

ಸಮಯೋಚಿತ ನೀತಿ ಅಭಿವೃದ್ಧಿಗೆ ಅವಶ್ಯಕ

ವರ್ಷಪೂರ್ತಿ ಕೃಷಿ ಚಟುವಟಿಕೆಗೆ ಪೂರಕವಾದ 10 ವಿಧಧ ಕೃಷಿ ಹವಾಮಾನ ವಲಯಗಳು ರಾಜ್ಯದಲ್ಲಿವೆ. ರಾಜ್ಯದಲ್ಲಿ ಡಿಆರ್‌ಡಿಒ, ಬಿಎಚ್‌ಇಎಲ್ ಸೇರಿ ಹಲವು ತಂತ್ರಜ್ಞಾನದ ಸಂಸ್ಥೆಗಳಿವೆ. ಹೇರಳವಾದ ಖನಿಜ ಸಂಪತ್ತು ರಾಜ್ಯದಲ್ಲಿದೆ. ಕರ್ನಾಟಕ ಕೃಷಿ ಪ್ರಧಾನ ರಾಜ್ಯವಾಗಿದ್ದು, ಶೇ. 1 ಕೃಷಿ ಅಭಿವೃದ್ಧಿಯಿಂದ ಶೇ. 4ರಷ್ಟು ಉತ್ಪಾದನಾ ಕ್ಷೇತ್ರ ಹಾಗೂ ಶೇ. 10 ರಷ್ಟು ಸೇವಾ ವಲಯದ ಅಭಿವೃದ್ಧಿ ಸಾಧ್ಯ. ಈ ಮುಂಚೆ, ಕೃಷ್ಣೆ ಹಾಗೂ ಕಾವೇರಿ ನದಿಯ ನೀರಿನ ಸದ್ಬಳಕೆ ಮಾಡಿದ್ದಿದ್ದರೆ ಕೃಷಿಯಲ್ಲಿ ರಾಜ್ಯ ಮಹತ್ವಪೂರ್ಣ ಸಾಧನೆ ಮಾಡುತ್ತಿತ್ತು. ಸಮಯೋಚಿತವಾದ ನೀತಿ ನಿರೂಪಣೆಗಳು ಅಭಿವೃದ್ಧಿಗೆ ಅತ್ಯಂತ ಅವಶ್ಯಕವಾಗುತ್ತದೆ ಎಂದರು.

ಕರ್ನಾಟಕ ರಾಜ್ಯಕ್ಕೆ ದೇಶದ ಶೇ. 38 ಎಫ್‌ಡಿಐ

ಕಳೆದ ವರ್ಷಗಳಿಂದ ಕರ್ನಾಟಕ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ದೇಶಕ್ಕೆ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಶೇ. 38 ರಷ್ಟು ಪ್ರಮಾಣ ಕರ್ನಾಟಕ ರಾಜ್ಯಕ್ಕೆ ಹರಿದುಬಂದಿದೆ. ದೇಶದ 500 ಫಾರ್ಚೂನ್ ಸಂಸ್ಥೆಗಳಲ್ಲಿ 400 ಕಂಪನಿಗಳು ರಾಜ್ಯದಲ್ಲಿವೆ. ಬೆಂಗಳೂರಿನಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ 400 ಸಂಶೋಧನಾ ಕೇಂದ್ರಗಳಿವೆ. 2025-26 ರಲ್ಲಿ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಗುರಿ ಹೊಂದಲಾಗಿದೆ. 1 ಟ್ರಿಲಿಯನ್ ಡಾಲರ್ ಅನ್ನು ಕರ್ನಾಟಕ ನೀಡಲಿದೆ. ಪುನರ್ ಬಳಕೆ ಶಕ್ತಿ ಸಂಪನ್ಮೂಲಗಳು, ಸೌರ ಶಕ್ತಿ, ಜಲ ಶಕ್ತಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಮುದ್ರದ ನೀರಿನಿಂದ ಅಮೋನಿಯಾ ತೆಗೆದು, ಶಕ್ತಿ ಉತ್ಪಾದನೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಹನಿ ನೀರಾವರಿಗೆ ಮಾರ್ಪಾಡು

ರಾಜ್ಯದಲ್ಲಿ ನೀರಾವರಿಗೆ ಒತ್ತು ನೀಡಲಾಗುತ್ತಿದೆ. ತುಂಗಭದ್ರಾ ಯೋಜನೆಯಿಂದ 7 ಲಕ್ಷ ಎಕರೆ ನೀರಾವರಿಯನ್ನು ಹನಿ ನೀರಾವರಿಗೆ ಮಾರ್ಪಡಿಸಲಾಗುವುದು. ಅಂತಾರಾಜ್ಯ ನದಿ ವಿವಾದಗಳು ಅಭಿವೃದ್ಧಿಗೆ ಹಿನ್ನೆಡೆಯಾಗಿವೆ. ರವಿ ಚೆನಾಬ್ ಟ್ರಿಬ್ಯುನಲ್ 50 ವರ್ಷದಿಂದ ಬದಲಾವಣೆ ಆಗಿಲ್ಲ. ಕೃಷ್ಣಾ, ಮಹಾದಾಯಿ, ಕಾವೇರಿ ನದಿಗಳ ವಿವಾದದಲ್ಲಿವೆ ಎಂದರು.

1 ಲಕ್ಷ ಉದ್ಯೋಗ

ಸೆಮಿ ಕಂಡಕ್ಟರ್, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲಾಗುತ್ತಿದೆ. ಸ್ಟಾರ್ಟಪ್‌ಗಳು ಹೆಚ್ಚಾಗಿ ಸ್ಥಾಪನೆಯಾಗುತ್ತಿವೆ. ಬೆಂಗಳೂರು ಹೊರತಾಗಿ ಬೇರೆ ಕಡೆಗಳಲ್ಲಿ ಸ್ಥಾಪಿಸಲಾಗುವ ಸ್ಟಾರ್ಟಪ್‌ಗಳಿಗೆ ರೂ. 50 ಲಕ್ಷ ನೀಡಲಾಗುತ್ತಿದೆ. 1 ಲಕ್ಷ ಉದ್ಯೋಗ ನೀಡುವ ನಿಟ್ಟಿನಲ್ಲಿ ಎಫ್‌ಎಂಸಿಜಿ ಕ್ಲಸ್ಟರ್ ಅನ್ನು ಅವಳಿ ನಗರದಲ್ಲಿ ಆರಂಭಿಸಲಾಗುವುದು, ವಿಶೇಷ ಹೂಡಿಕೆದಾರರ ವಲಯವನ್ನೂ ಸ್ಥಾಪಿಸಲಾಗುತ್ತಿದೆ ಎಂದರು.

ಇದನ್ನೂ ಓದಿ | ಹಾವೇರಿ ಜಿಲ್ಲೆಯ 1.65 ಲಕ್ಷ ರೈತರಿಗೆ 438 ಕೋಟಿ ರೂ.ಗಳ ಬೆಳೆ ವಿಮೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬಟ್ಟೆ ಉದ್ಯಮದಲ್ಲಿ ಕರ್ನಾಟಕ ನಂ.1

ಬಟ್ಟೆ ಉದ್ಯಮದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಸುಮಾರು 10 ಲಕ್ಷ ಜನರು ಬಟ್ಟೆ ಉದ್ಯಮದಲ್ಲಿ‌ ತೊಡಗಿಕೊಂಡಿದ್ದಾರೆ. ರಾಜ್ಯದಲ್ಲಿ 25 ಜವಳಿ ಪಾರ್ಕ್‌ಗಳನ್ನು ಆರಂಭಿಸಲಾಗುವುದು. ಇದರಿಂದ ರಫ್ತು ಮತ್ತು ಆರ್ಥಿಕತೆ ಹೆಚ್ಚಳವಾಗಲಿದೆ. ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಅಭಿವೃದ್ಧಿ ಹೊಂದುತ್ತಿದೆ ಎಂದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಕೋಟ ಶ್ರೀನಿವಾಸ ಶ್ರೀನಿವಾಸ ಪೂಜಾರಿ, ಶಾಸಕರಾದ ಅರವಿಂದ ಬೆಲ್ಲದ್, ಉದ್ಯಮಿಗಳು, ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.

Exit mobile version