ಬೆಳಗಾವಿ: ಜನಸಂಕಲ್ಪ ಯಾತ್ರೆಯ ಸಂದರ್ಭದಲ್ಲಿಯೇ ನವದೆಹಲಿಗೆ ಭೇಟಿ ನೀಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಬೆಳಗಾವಿಗೆ ಶುಭ ಸುದ್ದಿ ಇದೆಯೇ ಎಂಬ ಪ್ರಶ್ನೆಗೆ ನಗರದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿ, ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ನಿರ್ಣಯ ಕೈಗೊಂಡಾಗ ಎಲ್ಲರಿಗೂ ತಿಳಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ | ಅಲ್ಪಸಂಖ್ಯಾತರ ಪರ ಕಾಂಗ್ರೆಸ್; ರೈತರು, ಬಡವರ ಪರ ಬಿಜೆಪಿ: ರಾಜ್ಯ ಬಿಜೆಪಿ ಪ್ರಭಾರಿ ಅರುಣ್ ಸಿಂಗ್
ರಾಜ್ಯ ಹಾಗೂ ಭಾಷೆಗಳು ಅಡಚಣೆ ಆಗಬಾರದು
ಕೊಲ್ಲಾಪುರದ ಕನ್ಹೇರಿ ಮಠದಲ್ಲಿ ಕನ್ನಡ ಭವನ ಕಟ್ಟಲು ಶಿವಸೇನೆ ವಿರೋಧಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಈಗಾಗಲೇ ಮಹಾರಾಷ್ಟ್ರದಲ್ಲಿ ಹತ್ತು ಹಲವಾರು ಸಂಘಗಳ ಕನ್ನಡ ಭವನಗಳು ಇವೆ. ಹಲವಾರು ದೇವಸ್ಥಾನಗಳು, ಯಾತ್ರಿನಿವಾಸಗಳೂ ಇವೆ. ಈ ವಿಚಾರದಲ್ಲಿ ರಾಜ್ಯ ಹಾಗೂ ಭಾಷೆಗಳು ಅಡಚಣೆ ಆಗಬಾರದು ಎಂಬುದು ನನ್ನ ಅನಿಸಿಕೆ ಎಂದರು.
ಪ್ರಭಾಕರ ಕೋರೆ ಸ್ನೇಹಜೀವಿ
ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಕೋರೆ ಅವರ 75ನೇ ವರ್ಷದ ಅಮೃತ ಮಹೋತ್ಸವ ಆಚರಿಸುತ್ತಿರುವುದು ಸಂತೋಷದ ವಿಷಯ. ಇಡೀ ಉತ್ತರ ಕರ್ನಾಟಕಕ್ಕೆ ಅವರ ಸುದೀರ್ಘ ನಾಲ್ಕು ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಶೈಕ್ಷಣಿಕ, ಆರೋಗ್ಯ, ಕೃಷಿ, ಸಹಕಾರಿ ಕ್ಷೇತ್ರಗಳಲ್ಲಿ ಅವರು ಕೆಲಸ ಮಾಡಿ ಜನಪ್ರಿಯರಾಗಿದ್ದಾರೆ. ಜನಾನುರಾಗಿಯಾದ ಕೋರೆಯವರಲ್ಲಿ ನಿರಂತರವಾಗಿ ಕೆಲಸ ಮಾಡುವ ಶಕ್ತಿ ಇದೆ. ಎಲ್ಲರೊಂದಿಗೂ ಸ್ನೇಹದಿಂದಿರುವ ಸ್ನೇಹಜೀವಿ. ಈ ಸಮಾರಂಭ ಅರ್ಥಪೂರ್ಣವಾಗಿರಲಿದೆ ಎಂದು ತಿಳಿಸಿದರು.
ಇದನ್ನೂ ಓದಿ | ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಮುಂದಾಗಲಿ; ಮಾಜಿ ಸಚಿವ ಆರ್.ವಿ ದೇಶಪಾಂಡೆ