ಬೆಂಗಳೂರು: ಶಿಕ್ಷಕರ ಕೆಲಸ ಅತ್ಯಂತ ಕಠಿಣವಾದ ಕೆಲಸ. ಈ ವೃತ್ತಿಗೆ ಗೌರವ ಬರಬೇಕು, ಸಮಾಜದಲ್ಲಿ ತನ್ನದೇ ಆದ ಸ್ಥಾನ ಬರಬೇಕು. ದೇಶಕ್ಕೆ ದೊಡ್ಡ ಚರಿತ್ರೆ ಇದೆ. ನಾವು ಏನಾದರೂ ತಪ್ಪು ಮಾಡಿದರೆ ಮೊದಲು ತಾಯಿ ತಿದ್ದುತ್ತಾಳೆ, ನಂತರ ಗುರುಗಳು ತಿದ್ದುತ್ತಾರೆ. ಚಾರಿತ್ರ್ಯ ನಿರ್ಮಾಣ ಮಾಡುವ ಕೆಲಸವನ್ನು ಗುರುಗಳು (Teachers Day) ಮಾಡುತ್ತಾರೆ. ಪ್ರತಿಯೊಬ್ಬ ಗುರುವೂ ವಿದ್ಯಾರ್ಥಿಗಳನ್ನು ಸುಚಾರಿತ್ರ್ಯವಂತರನ್ನಾಗಿ ನಿರ್ಮಾಣ ಮಾಡಬೇಕು. ಬೆಳೆಯುವ ಸಸಿಯಲ್ಲಿಯೇ ಆಚರಣೆಯನ್ನು ರೂಢಿ ಮಾಡಿದರೆ ಆ ಮಗು ಸಮಾಜಕ್ಕೆ ಕೊಡುಗೆ ನೀಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧದಲ್ಲಿ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಇದನ್ನೂ ಓದಿ | Teachers Day | ವಿಜ್ಞಾನ ಪ್ರಯೋಗಾಲಯ ರೂಪಿಸಿ ರಾಜ್ಯಕ್ಕೇ ಮಾದರಿಯಾದ ಕೊಡಗಿನ ಇಬ್ರಾಹಿಂ
ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರ-ವಿರೋಧ ಅಭಿಪ್ರಾಯ ಇರುತ್ತದೆ. ಆದರೆ, ಚಾರಿತ್ರ್ಯ ಬೆಳೆಸುವುದು, ನಿರ್ಮಾಣ ಮಾಡುವುದು ಬಹಳ ಮುಖ್ಯ. ಹೀಗಾಗಿ ಇದರಲ್ಲಿ ಯಾವುದೇ ರಾಜೀ ಇಲ್ಲ. ನಾನು ನಿಮ್ಮ ಜತೆ ಶಿಕ್ಷಕರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ದಿನ ನಿತ್ಯ ಕಲಿತಿದ್ದೇನೆ, ಕಲಿಸುತ್ತಿದ್ದೇನೆ. ರಾಜ್ಯದಲ್ಲಿ ಒಳ್ಳೆಯ ಆಡಳಿತ ಕೊಡಲು ನಾನು ನನ್ನ ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.
ಮನುಷ್ಯನ ಬುದ್ಧಿಯಿಂದ ಜ್ಞಾನ, ಜ್ಞಾನದಿಂದ ಭಾಷೆ, ಭಾಷೆಯಿಂದ ಅಕ್ಷರ ಸೃಷ್ಟಿಯಾಗುತ್ತದೆ. ಭಾಷೆಯಿಂದ ಜ್ಞಾನವೃದ್ಧಿ, ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನ ಬೆಳವಣಿಗೆಯಾಗಿದೆ. ಶಿಕ್ಷಣದ ಜೀವಾಳ ಶಿಕ್ಷಕರು. ಶಿಕ್ಷಕರಿಲ್ಲದ ಶಿಕ್ಷಣವನ್ನು ಊಹಿಸಲಾಗದು. ಅನಾದಿಕಾಲದಿಂದಲೂ ಗುರುಗಳಿದ್ದಾರೆ. ಬದುಕಿನಲ್ಲಿ ಎಲ್ಲ ಹಂತದಲ್ಲೂ ನಾವು ಕಲಿಯಲು ಸಾಧ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಶಿಕ್ಷಣ ತಜ್ಞ ದೊರೆಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ಶಾಂತಾರಾಂ ಸಿದ್ದಿ, ಅರುಣ್ ಕುಮಾರ್ ಭಾಗಿಯಾಗಿದ್ದರು.
ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಕರ್ನಾಟಕ ಶಿಕ್ಷಣ ಇಲಾಖೆಯಿಂದ ಕಾರ್ಯಕ್ರಮದಲ್ಲಿ 2022-23ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. 20 ಪ್ರಾಥಮಿಕ ಮತ್ತು 11 ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಕಿಯರಿಗೆ ಅಕ್ಷರ ಮಾತೆ “ಸಾವಿತ್ರಿಬಾಯಿ ಫುಲೆ” ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿ ಶಿಕ್ಷಕರಿಗೆ 10 ಸಾವಿರ ರೂ. ನಗದು ಬಹುಮಾನ ನೀಡಲಾಗಿದೆ.
ನಾನು ಕೂಡ ಬ್ಯಾಕ್ ಬೆಂಚ್ ಸ್ಟುಡೆಂಟ್
ಮನುಷ್ಯನಿಗೆ ಎರಡು ವಿಚಾರದಲ್ಲಿ ಬಹಳ ಸವಾಲು ಇರುತ್ತದೆ. ನಾವು ಹುಟ್ಟಿದಾಗಿನಿಂದ ಇಲ್ಲಿವರಗೆ ಹೋಲಿಕೆ ಮಾಡಿದರೆ ನಾವು ಮುಗ್ಧತೆ ಕಳೆದುಕೊಂಡಿರುತ್ತೇವೆ. ಮಕ್ಕಳಲ್ಲಿ ಮಾತ್ರ ಆ ಮುಗ್ಧತೆ ಇರುತ್ತದೆ, ಆ ಮುಗ್ಧತೆಯನ್ನು ಜೀವಾಂತವಾಗಿ ಇಡುವವರು ಶಿಕ್ಷಕರು, ನಾನು ಕೂಡ ವಿದ್ಯಾರ್ಥಿಯಾಗಿದ್ದವ, ಬ್ಯಾಂಕ್ ಬೆಂಚ್‌ನಲ್ಲಿ ನಾನು ಕೂತಿದ್ದೇನೆ ಎಂದು ಹೇಳಿದರು.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಯಾವುದಾದರೂ ವಿಚಾರದಲ್ಲಿ ಪ್ರಶ್ನೆ ಹಾಕಿ ಅದಕ್ಕೆ ಉತ್ತರಿಸದಿದ್ದಾಗ ಮಕ್ಕಳ ತಲೆಗೆ ಹೊಡೆಯಬೇಡಿ. ಪ್ರಶ್ನೆ ಕೇಳುವ ಹಕ್ಕು ಆ ಮಕ್ಕಳಿಗೆ ಇರುತ್ತದೆ ಎಂದು ಹೇಳಿದರು.
ತಮ್ಮ ಕಾಲೇಜು ಜೀವನದ ಪ್ರಿನ್ಸಿಪಲ್ ಚಂದ್ರೇಶೇಖರ್ ಬೆಲ್ಲದ್ ಅವರನ್ನು ಸ್ಮರಿಸಿದ ಸಿಎಂ, ಪ್ರಾಂಶುಪಾಲರು ತುಂಬಾ ಬುದ್ಧಿವಂತರಾಗಿದ್ದರು. ಗಣಿತ ವಿಷಯದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ಹಾಸ್ಯಭರಿತ ಮಾತುಗಳಿಂದ ವಿದ್ಯಾರ್ಥಿಗಳ ಗಮನವನ್ನು ಪಾಠದತ್ತ ಸೆಳೆಯುತ್ತಿದ್ದರು ಎಂದರು.
ಶಿಕ್ಷಕರ ಜತೆಗೆ ಬುದ್ಧಿವಂತಿಕೆಯಲ್ಲಿ ನಾನು ಪೈಪೋಟಿ ಮಾಡಲ್ಲ. ಆದರೆ, ಹೃದಯದಿಂದ ಮಾತನಾಡುತ್ತೇನೆ. ನಿಮ್ಮನ್ನೆಲ್ಲ ನೋಡಿದರೆ ನನಗೆ ಕಾಲೇಜು ದಿನಗಳು ನೆನಪಾಗುತ್ತವೆ. ನೀವು ಕಾಲೇಜು ಕ್ಯಾಂಪಸ್‌ನಲ್ಲಿದ್ದರೆ, ನಾವು ಬದುಕಿನ ಕ್ಯಾಂಪಸ್‌ನಲ್ಲಿ ಇದ್ದೇವೆ. ಯಾವುದೇ ವ್ಯಕ್ತಿಗೆ ಒಂದು ಸ್ಥಾನಮಾನ ಸಿಕ್ಕಿದೆ ಎಂದರೆ ಅದು ಜಗತ್ತಿನಲ್ಲಿ ಇರುವ ಗುರುಗಳಿಂದ ಮಾತ್ರ ಎಂದರು.
ಸಮಾರಂಭದಲ್ಲಿ ಸಚಿವರಾದ ಅಶ್ವತ್ಥನಾರಾಯಣ್, ಬೈರತಿ ಬಸವರಾಜ್ ಸೇರಿದಂತೆ ಆರು ಜಿಲ್ಲೆಗಳ ಉಪನ್ಯಾಸಕರು ಉಪಸ್ಥಿತರಿದ್ದರು.
ಇದನ್ನೂ ಓದಿ | Death News | ಶಿಕ್ಷಕರ ದಿನದಂದೇ ನಿವೃತ್ತ ಶಿಕ್ಷಕ, ಮಾಜಿ ಸಚಿವ ಪ್ರಭಾಕರ ರಾಣೆ ನಿಧನ