ಬೆಂಗಳೂರು: ಹನುಮನ ಜನ್ಮಸ್ಥಳದ ಬಗ್ಗೆ ನೆರೆಯ ರಾಜ್ಯಗಳು ವಿವಾದ ಹುಟ್ಟುಹಾಕುತ್ತಿರುವ ಹಿನ್ನೆಲೆಯಲ್ಲಿ ಆಂಜನೇಯನ ನಿಜ ಜನ್ಮಸ್ಥಳವಾದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಯ ವಿಷಯವನ್ನು ಗಂಭಿರವಾಗಿ ತೆಗೆದುಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಶನಿವಾರ ರಾಜಧಾನಿಯಲ್ಲಿಯೇ ಮಹತ್ವದ ಸಭೆ ನಡೆಸಿದ್ದಾರೆ.
ಸಚಿವರಾದ ಆನಂದ್ ಸಿಂಗ್, ಹಾಲಪ್ಪ ಬಸಪ್ಪ ಆಚಾರ್, ಕೊಪ್ಪಳ ಸಂಸದ ಕರಡಿ ಸಂಗಣ್ಣ ಸೇರಿ ಅನೇಕ ಜನಪ್ರತಿನಿಧಿಗಳು ಈ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಸಭೆಯ ನಂತರ ಮಾತನಾಡಿದ ಬಸವರಾಜ ಬೊಮ್ಮಾಯಿ, “ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗಾಗಿ ವಿಸ್ತೃತ ಯೋಜನಾ ವರದಿಯನ್ನು ಕೂಡಲೇ ಸಿದ್ಧಪಡಿಸಬೇಕು. ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಿ, ಕೆಲಸ ಪ್ರಾರಂಭಿಸಬೇಕುʼʼ ಎಂದು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಜುಲೈ 15ರೊಳಗೆ ತಾವೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಬೆಟ್ಟದ ಅಭಿವೃದ್ಧಿ ಯೋಜನೆಗಳಿಗಾಗಿ ಸುಮಾರು 60 ಎಕರೆ ಭೂಮಿ ಅಗತ್ಯವಿದ್ದು, ಇದರಲ್ಲಿ 58 ಎಕರೆ ಖಾಸಗಿ ಜಮೀನಾಗಿದೆ. ಇದನ್ನು ರೈತರ ಒಪ್ಪಿಗೆಯ ಮೇರೆಗೆ ಅಥವಾ ಅಥವಾ ಕೆಐಎಡಿಬಿ ಮೂಲಕ ಭೂಮಿ ಖರೀದಿಸಿ ತ್ವರಿತವಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.
ಬೆಟ್ಟದ ಬುಡದಲ್ಲಿ ಯಾತ್ರಿಕರಿಗೆ ಪಾರ್ಕಿಂಗ್ ಮತ್ತಿತರ ಮೂಲಸೌಕರ್ಯ ಒದಗಿಸುವ ಕಾಮಗಾರಿ ಕೈಗೊಳ್ಳಬೇಕು. ಯೋಜನೆಯ ಆರ್ಥಿಕ ಅನುಮೋದನೆಗಾಗಿ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆಂದು ತಿಳಿದು ಬಂದಿದೆ.
ಯೋಜನೆಯ ಮೊದಲ ಹಂತದಲ್ಲಿ ಅಂಜನಾದ್ರಿಯ ಸಂಪರ್ಕ ರಸ್ತೆ ಅಭಿವೃದ್ಧಿ, ಪರ್ಯಾಯ ರಸ್ತೆಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಬೇಕು. ರಾಷ್ಟ್ರೀಯ ಹೆದ್ದಾರಿಯಿಂದ ಗಂಗಾವತಿವರೆಗಿನ ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಲೋಕೋಪಯೋಗಿ ಇಲಾಖೆಯ ಮೂಲಕ ಕ್ರಮ ವಹಿಸಬೇಕು ಎಂದು ತೀರ್ಮಾನಿಸಲಾಗಿದೆ.
ವರದಿ ಬಂದ ನಂತರ ಜನ್ಮಸ್ಥಳದ ಕುರಿತು ಘೋಷಣೆ
ಅಂಜನಾದ್ರಿ ಬೆಟ್ಟದ ಅಭಿವೃದ್ಧಿಯ ಕುರಿತು ನಡೆದ ಸಭೆಯ ನಂತರ ಮಾತನಾಡಿದ ಸಚಿವ ಆನಂದ್ ಸಿಂಗ್, ಹನುಮನ ಜನ್ಮಸ್ಥಳ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ಅಂಜನಾದ್ರಿ ಬೆಟ್ಟದ ದಾಖಲೆಗಳನ್ನು ಪರಿಶೀಲನೆ ಮಾಡಿ ಹಾಗೂ ಸಂಶೋಧನೆ ನಡೆಸಿ ಅಧಿಕೃತ ಬೋರ್ಡ್ ಹಾಕಲು ಕೇಂದ್ರ ಪುರಾತತ್ವ ಇಲಾಖೆ ಹಾಗೂ ರಾಜ್ಯ ಪುರಾತತ್ವ ಇಲಾಖೆಗೆ ಸಿಎಂ ಸೂಚಿಸಿದ್ದಾರೆ ಎಂದು ಹೇಳಿದರು.
ಕಿಷ್ಕಿಂದೆ ಹನುಮನ ಜನ್ಮಸ್ಥಳ ಹೇಗಾಯಿತು ಎಂದು ಇನ್ನುಮುಂದೆ ಯಾರೂ ಚಕಾರ ಎತ್ತಬಾರದು. ಅಷ್ಟರ ಮಟ್ಟಿಗೆ ದಾಖಲೆಗಳನ್ನು ಸಂಗ್ರಹಿಸಿ, ಘೋಷಣೆ ಮಾಡಲು ಕ್ರಮ ಕೈಗೊಳ್ಳಿ ಎಂದು ಸಿಎಂ ಸೂಚಿಸಿದ್ದಾರೆ. 15 ದಿನದಲ್ಲಿ ಕೇಂದ್ರ ಪುರಾತತ್ವ ಇಲಾಖೆ ಹಾಗೂ ರಾಜ್ಯ ಪುರಾತತ್ವ ಇಲಾಖೆ ಸಂಶೋಧನಾ ವರದಿ ಕೊಟ್ಟ ಬಳಿಕ ರಾಜ್ಯ ಸರ್ಕಾರ ಅಧಿಕೃತವಾಗಿ ಅಂಜನಾದ್ರಿ ಹನುಮನ ಜನ್ಮಸ್ಥಳ ಎಂದು ಘೋಷಣೆ ಮಾಡಲಿದೆ ಎಂದರು ತಿಳಿಸಿದ್ದಾರೆ.
ರೋಪ್ ವೇ ಯೋಜನೆ
ಅಂಜನಾದ್ರಿ ಬೆಟ್ಟಕ್ಕೆ 430 ಮೀಟರ್ ರೋಪ್ ವೇ ನಿರ್ಮಿಸಲು ಪ್ರಸ್ತಾಪಿಸಲಾಗಿದ್ದು, ಈ ಯೋಜನೆಯ ಟೆಂಡರ್ ಪ್ರಕ್ರಿಯೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಸಿಎಂ ಸೂಚಿಸಿದ್ದಾರೆ. ಈ ಯೋಜನೆಯಡಿ ರೋಪ್ ವೇ ಬೇಸ್‍ನಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಕರ್ಯ, ಸರದಿಯಲ್ಲಿ ಕಾಯುವ ಸಂದರ್ಭ ಬಂದಾಗ ಅಗತ್ಯ ಮೂಲಸೌಕರ್ಯಗಳು, ಪಾರ್ಕಿಂಗ್ ಸೌಲಭ್ಯಗಳನ್ನು ಕಲ್ಪಿಸಬೇಕು, ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಸಭೆಯಲ್ಲಿ ಜನ ಪ್ರತಿನಿಧಿಗಳಲ್ಲದೆ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ, ಆರ್ಥಿಕ ಇಲಾಖೆಯ ಕಾರ್ಯದರ್ಶಿ ಏಕ್‍ರೂಪ್ ಕೌರ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಮೀಸಲಿಟ್ಟಿರುವ 100 ಕೋಟಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ಎರಡು ತಿಂಗಳೊಳಗೆ ಎಲ್ಲ ಕಾಮಗಾರಿಗಳಿಗೂ ಚಾಲನೆ ನೀಡಲು ನಿರ್ದೇಶಿಸಿದ್ದಾರೆ ಎಂದು ಸಭೆಯ ನಂತರ ಮಾತನಾಡಿದ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ದೀರ್ಘ ದಂಡ ನಮಸ್ಕಾರದ ಮೂಲಕವೇ ಅಂಜನಾದ್ರಿ ಬೆಟ್ಟ ಏರಿದ ಸ್ವಾಮೀಜಿ
ಐತಿಹಾಸಿಕ ಅಂಜನಾದ್ರಿ ಬೆಟ್ಟವನ್ನು ದೀರ್ಘ ದಂಡ ನಮಸ್ಕಾರ ಮೂಲಕ ಸ್ವಾಮೀಜಿಯೊಬ್ಬರು ಏರಿದ್ದಾರೆ. ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ ಜಿಲ್ಲೆಯ ಕಾರಟಗಿ ತಾಲೂಕಿನ ಮೈಲಾಪೂರ ಗ್ರಾಮದ ಅಮರಯ್ಯ ಸ್ವಾಮೀಜಿ ದೀರ್ಘ ದಂಡ ನಮಸ್ಕಾರದ ಮೂಲಕ ಬೆಟ್ಟವನ್ನೇರಿದ್ದಾರೆ. 575 ಮೆಟ್ಟಿಲುಗಳುಳ್ಳ ಅಂಜನಾದ್ರಿ ಪರ್ವತವನ್ನು ಅಮರಯ್ಯ ಸ್ವಾಮೀಜಿ ಹತ್ತುವಾಗ ಭಕ್ತರಿಂದ ಜೈ ಶ್ರೀರಾಮ್ ಘೋಷಣೆಗಳು ಮೊಳಗಿದವು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಇದನ್ನೂ ಓದಿ | ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿ ಪರ್ವತ ಎಂಬುದಕ್ಕಿದೆ ಪುರಾವೆ: ಸಚಿವ ಆನಂದ್ ಸಿಂಗ್