Site icon Vistara News

BJP jan sankalp yatra | ಒಡೆದಾಳುವ ನೀತಿ ಕಾಂಗ್ರೆಸ್‌ಗೆ ಬ್ರಿಟಿಷರಿಂದ ಬಳುವಳಿಯಾಗಿ ಬಂದಿದೆ: ಸಿಎಂ ಬಸವರಾಜ ಬೊಮ್ಮಾಯಿ

BJP jan sankalp yatra

ಬೆಳಗಾವಿ: ಒಡೆದು ಆಳುವ ನೀತಿಯನ್ನು ಬ್ರಿಟಿಷರು ಬಳುವಳಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟು ಹೋಗಿದ್ದಾರೆ. ಕಾಂಗ್ರೆಸ್‌ ಸ್ಥಾಪನೆಯಾಗಿ ನೂರು ವರ್ಷ ದಾಟಿದ್ದರೂ ಬ್ರಿಟಿಷರ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಬಿಟ್ಟಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಜಿಲ್ಲೆಯ ಖಾನಾಪುರದಲ್ಲಿ ಬಿಜೆಪಿಯಿಂದ ಬುಧವಾರ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಆಡಳಿತದಲ್ಲಿ ತುರ್ತು ಪರಿಸ್ಥಿತಿ ಹೇರಿದರು. ಸಂವಿಧಾನವನ್ನು ಮೊಟಕುಗೊಳಿಸಿದ ಕಾಂಗ್ರೆಸ್‌, ಚುನಾವಣೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸೋಲಿಸಿತು. ಅವರು ತೀರಿ ಹೋದಾಗ ದೆಹಲಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಸ್ಥಳ ನೀಡಲಿಲ್ಲ. ಖಲಿಸ್ತಾನ ನಾಯಕ ಬಿಂದ್ರನ್ ವಾಲೆಗೆ, ನಕ್ಸಲರಿಗೆ ಪುಷ್ಟಿಯನ್ನು ಕೊಟ್ಟ ಕಾಂಗ್ರೆಸ್, ದೇಶವನ್ನು ವಿಭಜಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದರು.

ಇದನ್ನೂ ಓದಿ | U B Banakar | ಬಿಜೆಪಿಗೆ ಗುಡ್‌ಬೈ ಹೇಳಿದ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ ಬಣಕಾರ್‌, ಕಾಂಗ್ರೆಸ್‌ ಸೇರ್ಪಡೆ ಪಕ್ಕಾ

ಸತೀಶ್ ಜಾರಕಿಹೊಳಿ ಅಸ್ಮಿತೆಗೆ, ನಂಬಿಕೆಗೆ, ಬುನಾದಿಗೆ ಧಕ್ಕೆ ತಂದಿದ್ದಾರೆ
ಭಾರತ್ ಜೋಡೋ ಮಾಡುವ ರಾಹುಲ್ ಗಾಂಧಿ ಒಂದೆಡೆಯಾದರೆ, ಇನ್ನೊಂದು ಕಡೆ ಕಾಂಗ್ರೆಸ್ ಪಕ್ಷದ ನಾಯಕ ಸತೀಶ್ ಜಾರಕಿಹೊಳಿ ಭಾರತವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅವರ ಮನಸ್ಥಿತಿ, ಭಾವನೆಗಳು ಹೊಲಸಿದೆ. ವಾಲ್ಮೀಕಿ ಕುಲಕ್ಕೆ ಸೇರಿದ ಸತೀಶ್ ಜಾರಕಿಹೊಳಿ ವಾಲ್ಮೀಕಿಯವರನ್ನು ನಂಬುತ್ತಾರೊ ಇಲ್ಲವೋ? ವಾಲ್ಮೀಕಿ ಶ್ರೇಷ್ಠ ಕುಲತಿಲಕ. ರಾಮಾಯಣ ರಚಿಸಿದವರು. ರಾಮಾಯಣ, ವಾಲ್ಮೀಕಿ ಹಾಗೂ ರಾಮನ ಬಗ್ಗೆ ನಂಬಿಕೆ ಇದ್ದರೆ ಈ ರೀತಿ ಹೇಳುತ್ತಿರಲಿಲ್ಲ. ಇದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ತಾಕೀತು ಮಾಡಿದರು.

ಸತೀಶ್‌ ಜಾರಕಿಹೊಳಿ ಸಹೋದರನ ಹೆಸರು ಲಕ್ಷ್ಮಣ. ರಾಮಾಯಣದ ರಾಮನ ತಮ್ಮನ ಹೆಸರು ಕೂಡ ಲಕ್ಷಣ. ಅವರನ್ನು ಕರೆಯುವಾಗ ಇದರ ನೆನಪಾಗಲಿಲ್ಲವೇ. ನಿಮ್ಮ ಚುನಾವಣೆ, ಶಾಲೆಯಲ್ಲಿ ಏನೆಂದು ಬರೆಸಿದ್ದಾರೆ. ಈಗ ಕೇವಲ ರಾಜಕಾರಣಕ್ಕಾಗಿ, ಮತಕ್ಕಾಗಿ ತುಷ್ಟೀಕರಣದ ರಾಜಕಾರಣಕ್ಕಾಗಿ ಈ ಮಾತುಗಳನ್ನು ಆಡುತ್ತಿದ್ದಾರೆ. ತಾವು ಹುಟ್ಟಿದ ಸಂಸ್ಕೃತಿ, ಪರಂಪರೆಯ ಬಗ್ಗೆ ಅವಹೇಳನ ಮಾಡುವುದು ಶೋಭೆ ತರಲ್ಲ ಎಂದು ಕಿಡಿ ಕಾರಿದರು.

ನಂಬಿಕೆ ಇಲ್ಲದವರಿಗೆ ನಮ್ಮನ್ನು ಆಳುವ ಹಕ್ಕು ಇಲ್ಲ
ಈ ರೀತಿಯ ಮನಸ್ಥಿತಿ ಇರುವ ಪಕ್ಷ ನಮಗೆ ಬೇಕಿಲ್ಲ. ನಮ್ಮ ನಂಬಿಕೆಗಳ ಮೇಲೆ ನಂಬಿಕೆ ಇಲ್ಲದಿದ್ದರೆ ಅವರಿಗೆ ನಮ್ಮನ್ನು ಆಳುವ ಹಕ್ಕು ಇಲ್ಲ ಎಂದು ತೀರ್ಮಾನ ಮಾಡಬೇಕಿದೆ. ನಮ್ಮ ನಂಬಿಕೆಗಳು ಬಹಳ ಮುಖ್ಯ. ನಮ್ಮ ಭವಿಷ್ಯ ಈ ನಂಬಿಕೆಯ ಮೇಲಿದೆ. ಈ ಮನಸ್ಥಿತಿಯುಳ್ಳ ಪಕ್ಷಕ್ಕೆ ಎಂದಿಗೂ ಅಧಿಕಾರ ನೀಡಬಾರದು ಎನ್ನುವ ಸಂಕಲ್ಪವನ್ನು ಮಾಡೋಣ ಎಂದರು.

ಕರ್ನಾಟಕ ರಾಜ್ಯವನ್ನು 5 ವರ್ಷ ಆಡಳಿತ ನಡೆಸಿ ಭಾಗ್ಯಗಳನ್ನು ಘೋಷಿಸಿದರೂ ಯಾವ ಭಾಗ್ಯವೂ ಜನರಿಗೆ ಮುಟ್ಟಿಲ್ಲ. ಕೊನೆಗೆ ಜನರಿಗೆ ಇವರನ್ನು ಆಯ್ಕೆ ಮಾಡಿದ್ದು ದೌರ್ಭಾಗ್ಯ ಎಂದು ತಿಳಿಯಿತು. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತಮ್ಮ ಸ್ಥಾನ ಕಳೆದುಕೊಂಡರು, ಕಾಂಗ್ರೆಸ್ ಸೋತು ಹೋಯಿತು. ಆತ್ಮಾವಲೋಕನ ಮಾಡಿಕೊಳ್ಳಲೂ ಅವರು ತಯಾರಿಲ್ಲ. ಅಧಿಕಾರದ ಗುಂಗು, ಮದದಲ್ಲಿ ಮಾತನಾಡುತ್ತಾರೆ. ಆದರೆ ಕರ್ನಾಟಕದ ಜನತೆ ಈ ಬಾರಿ ಕಾಂಗ್ರೆಸ್ ಅನ್ನು ಮಣ್ಣುಮುಕ್ಕಿಸಲು ತೀರ್ಮಾನ ಮಾಡಿದ್ದಾರೆ ಎಂದರು.

ಇದನ್ನೂ ಓದಿ | BJP Janasankalpa yatre | ಕೇಂದ್ರದ ಅಕ್ಕಿ ಚೀಲಕ್ಕೆ ಸಿದ್ದು ಫೋಟೊ, ಮಣ್ಣಿನಲ್ಲೂ ಕಾಂಗ್ರೆಸ್‌ ಲೂಟಿ ಎಂದ ಬೊಮ್ಮಾಯಿ

Exit mobile version