Site icon Vistara News

Karnataka Election: ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‌ಗೆ ಲಿಂಗಾಯತರ ಮೇಲೆ ಪ್ರೀತಿ: ಸಿಎಂ ಬೊಮ್ಮಾಯಿ

CM Basavaraj Bommai says Congress loves Lingayats only when elections come

ಬಾಗಲಕೋಟೆ (ಮುಧೋಳ): ಕರ್ನಾಟಕದಲ್ಲಿ ಲಿಂಗಾಯತ ಮತದಾರರು ಜಾಗೃತರಾಗಿದ್ದಾರೆ. ಚುನಾವಣೆ (Karnataka Election) ಬಂದಾಗ ಮಾತ್ರ ಲಿಂಗಾಯತರ ಮೇಲೆ ಕಾಂಗ್ರೆಸ್‌ ಪ್ರೀತಿ ತೋರಿಸುತ್ತಿದೆ. ಲಿಂಗಾಯತರನ್ನೇ ಒಡೆದು ಛಿದ್ರ ಮಾಡಲು ಹೊರಟ ಕಾಂಗ್ರೆಸ್‌ನ ಒಡೆದು ಆಳುವ ನೀತಿ ಯಾರೂ ಎಂದಿಗೂ ಮರೆಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮುಧೋಳದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಹೆಲಿಪ್ಯಾಡ್ ಬಳಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಲಿಂಗಾಯತರಿಗೆ ಮೀಸಲಾತಿ ನೀಡಲು ಕಾಂಗ್ರೆಸ್ ವಿರೋಧ ಮಾಡಿತ್ತು. 2009ರಲ್ಲಿ 2ಎ ಸೇರಿಸಲು ವಿರೋಧಿಸಿ, 2016ರಲ್ಲಿ ಅದನ್ನು ತಿರಸ್ಕಾರ ಮಾಡಿದ್ದರು. ನಾವು 2ಡಿ ವರ್ಗ ರಚನೆ ಮಾಡಿ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದೇವೆ. ಈಗ ಪರೋಕ್ಷವಾಗಿ ಕುಮ್ಮಕ್ಕು ನೀಡಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ ಕೇಸ್ ಹಾಕಿದ್ದಾರೆ. ಲಿಂಗಾಯತರ ಪ್ರತಿಯೊಂದು ಅಭಿವೃದ್ಧಿಯಲ್ಲೂ ಕಾಂಗ್ರೆಸ್ ವಿರೋಧ ಮಾಡಿದೆ. ಸಿದ್ದರಾಮಯ್ಯ ಕಾಲದಲ್ಲಿ ಇದ್ದ ಜಿಲೇಬಿ ಫೈಲ್ ಯಾರೂ ಮರೆಯಲ್ಲ ಎಂದು ಹರಿಹಾಯ್ದರು.

ಇದನ್ನೂ ಓದಿ | Karnataka Election 2023 : ಕಾಂಗ್ರೆಸ್‌ ನಾಲ್ಕನೇ ಪಟ್ಟಿ ಪ್ರಕಟ; ಸಿಎಂ ಬೊಮ್ಮಾಯಿ ವಿರುದ್ಧ ಮಹ್ಮದ್ ಯೂಸುಫ್ ಕಣಕ್ಕೆ

ಕೃಷ್ಣಾ ನದಿ ವಿಚಾರದಲ್ಲಿ ಏನು ಮಾಡಿದ್ದೀರಿ. ಒಂದು ಎಕರೆ ಭೂಮಿಗೆ ನೀರು ಕೊಡುವುದಕ್ಕೆ ಆಗಲಿಲ್ಲ. 1967ರ ನಂತರ ವೀರೇಂದ್ರ ಪಾಟೀಲರನ್ನು ಬಿಟ್ಟರೆ, ಬೇರೆ ಯಾರು ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಾಗಿಲ್ಲ. ಅವರನ್ನು ಕೂಡ ಅತ್ಯಂತ ಹೀನಾಯವಾಗಿ ನಡೆಸಿಕೊಂಡರು. ರಾಜಶೇಖರಮೂರ್ತಿ, ವಿರೂಪಾಕ್ಷಪ್ಪನವರ ಕಥೆ ಏನಾಯಿತು. ಈಗ ಎಸ್. ಆರ್ ಪಾಟೀಲರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಸ್ಥಾನ, ಸಭಾಪತಿ ಸ್ಥಾನವನ್ನು ತಪ್ಪಿಸಿದರು ಕಿಡಿಕಾರಿದರು.

ಈ ಭಾಗದ ಅಭಿವೃದ್ಧಿಯಾಗಿದ್ದು ಬಿಜೆಪಿಯಿಂದ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಅಭಿವೃದ್ಧಿ ಮಾಡಿ ಸಾಮಾಜಿಕ ನ್ಯಾಯವನ್ನು ಬಿಜೆಪಿ ಪಕ್ಷ ಕೊಟ್ಟಿದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಯಾರೇ ಹೋದರು ಯಾವುದೇ ಪರಿಣಾಮ ಆಗುವುದಿಲ್ಲ. ಕರ್ನಾಟಕದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನದಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರು.

ಪಕ್ಷ ಯಾರ ಕಪಿಮುಷ್ಟಿಯಲ್ಲಿಲ್ಲ

ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಒಬ್ಬರ ಹಿಡಿತದಲ್ಲಿ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ಇಲ್ಲಿ ಒಂದು ವ್ಯವಸ್ಥೆ ಇದೆ ಎಂದು ಅವರು, ಬಿಜೆಪಿ ಅಭ್ಯರ್ಥಿಗಳ ಪರ ನಟ ಸುದೀಪ್ ಪ್ರಚಾರದ ಬಗ್ಗೆ ರೂಪುರೇಷೆ ಪೂರ್ಣ ಆಗಿಲ್ಲ. ನಾಳೆ ಸುದೀಪ್ ಪ್ರಚಾರದ ಬಗ್ಗೆ ರೂಪುರೇಷೆ ಮಾಡುತ್ತೇವೆ. ಬಳಿಕ ಸುದೀಪ್ ಎಲ್ಲ ಕಡೆಯೂ ಪ್ರಚಾರಕ್ಕೆ ಬರುತ್ತಾರೆ ಎಂದರು.

ಇದನ್ನೂ ಓದಿ | Karnataka Election 2023: ಆಸ್ಪತ್ರೆ ಬೆಡ್‌ನಿಂದಲೇ ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಚುನಾವಣಾ ಪ್ರಚಾರ

ಬಿಜೆಪಿ ಸುನಾಮಿ

ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ. ಮತ್ತೆ ಬಿಜೆಪಿ ಸರ್ಕಾರ ನೂರಕ್ಕೆ ನೂರು ಬರುತ್ತದೆ. ಕಾಂಗ್ರೆಸ್‌ನವರು ನೀಡುತ್ತಿರುವುದು ಗ್ಯಾರಂಟಿ ಕಾರ್ಡ್ ಅಲ್ಲ, ಅದು ವಿಸಿಟಿಂಗ್ ಕಾರ್ಡ್, ಅದು ಮುಂದೆ ಗಳಗಂಟಿ ಆಗುತ್ತದೆ.
ಕಾರಜೋಳ ಅವರು ರಾಜ್ಯ ಸುತ್ತಬೇಕಿದೆ. ನಾವು ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಒಳ ಮೀಸಲಾತಿ ನೀಡಿದ್ದೇವೆ. ಒಕ್ಕಲಿಗ ಲಿಂಗಾಯತರ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಕಾರಜೋಳ ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ಕಾಂಗ್ರೆಸ್‌ನವರು ಮುಂದಿನ ಬಾರಿ ಅರ್ಜಿ ಹಾಕದಂತೆ ಮಾಡಬೇಕು ಎಂದು ಹೇಳಿದರು.

Exit mobile version