ಬೆಂಗಳೂರು: ಬಿಜೆಪಿ ಪಕ್ಷದ ವತಿಯಿಂದ ಬಿಡುಗಡೆ ಮಾಡಿರುವ 189 ಅಭ್ಯರ್ಥಿಗಳ ಮೊದಲ ಪಟ್ಟಿ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ (Karnataka Election) ಭಾರತೀಯ ಜನತಾ ಪಾರ್ಟಿ ಗೆಲುವಿನ ದಿಕ್ಸೂಚಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ರಾತ್ರಿ ಮಾತನಾಡಿದ ಅವರು, 189 ಅಭ್ಯರ್ಥಿಗಳಲ್ಲಿ ಹೊಸ ಮುಖ ತರುವ ನಿಟ್ಟಿನಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮೊದಲ ಪಟ್ಟಿ ಈ ಬಾರಿ ಬಿಜೆಪಿ ಮತ್ತೊಮ್ಮೆ ಗೆಲುವು ಸಾಧಿಸುವ ದಿಕ್ಸೂಚಿಯಾಗಿದೆ ಎಂದು ತಿಳಿಸಿದರು.
ಟಿಕೆಟ್ ಕೈ ತಪ್ಪಿದವರು ಬಂಡಾಯ ಏಳುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರಿಗೆ ಮೊದಲೇ ಹೇಳಿದ್ದೇವೆ. ಒಟ್ಟು 3 ದಿನ ಚರ್ಚೆ ಮಾಡಿ ಈ ನಿರ್ಧಾರ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲಿ ಎರಡನೇ ಪಟ್ಟಿ ಬಿಡುಗಡೆ ಆಗಲಿದೆ. ಆಗ 34 ಕ್ಷೇತ್ರಗಳ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಇದನ್ನೂ ಓದಿ | Karnataka Election: 189 ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಬಿಜೆಪಿ: 52 ಹೊಸಬರು; ಇಬ್ಬರು ಎರಡು ಕಡೆ ಸ್ಪರ್ಧೆ
ನಾವು ಮಾಡಿರುವ ಕೆಲಸಗಳನ್ನೂ ಮುಂದಿಟ್ಟುಕೊಂಡು ಜನರ ಬಳಿ ಮತ ಕೇಳುತ್ತೇವೆ. ಬೂತ್ ಮಟ್ಟದಲ್ಲಿ ತೆರಳಿ, ಹಳ್ಳಿ ಹಳ್ಳಿಗೂ ಹೋಗಿ ಪ್ರಚಾರ ಮಾಡುತ್ತೇವೆ. ರಾಜ್ಯದ ಸಮರ್ಥ ಅಭಿವೃದ್ಧಿ, ಕೋವಿಡ್ ವೇಳೆ ಎದುರಿಸಿದ ಸವಾಲುಗಳು, ಉದ್ಯೋಗ ಸೃಷ್ಟಿ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವಿನ ವಿಶ್ವಾಸ ಇದೆ ಎಂದು ಹೇಳಿದರು.
ಹಿರಿಯ ನಾಯಕರಿಗೆ ಟಿಕೆಟ್ ಕೈ ತಪ್ಪಿರುವ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿರಿಯರು ಪಕ್ಷವನ್ನು ಕಟ್ಟಿದ್ದಾರೆ. ಪಕ್ಷ ಹಿರಿಯರನ್ನು ಬೆಳೆಸಿದೆ. ಅವರಿಗೆ ಪಕ್ಷದೊಂದಿಗೆ ಅನ್ಯೋನ್ಯ ಸಂಬಂಧ ಇರುವ ಕಾರಣ ಯಾವುದು ತೊಂದರೆ ಆಗುವುದಿಲ್ಲ. ಟಿಕೆಟ್ ತಪ್ಪಿದವರಿಗೆ ಯಾಕೆ? ಏನು ಕಾರಣ? ಮುಂದೆ ಯಾವ ರೀತಿಯ ಅವಕಾಶ ಇದೆ ಎಂಬುದನ್ನು ಹೇಳಿದ್ದೇವೆ. ನಮ್ಮದು ರಾಷ್ಟ್ರೀಯ ಪಕ್ಷ, ಶಿಸ್ತಿನ ಪಕ್ಷ. ಎಲ್ಲ ನಿಭಾಯಿಸುವ ಶಕ್ತಿ ಬಿಜೆಪಿಗೆ ಇದೆ ಎಂದರು.
ಇದನ್ನೂ ಓದಿ | ವಿಸ್ತಾರ TOP 10 NEWS: ಕೊನೆಗೂ ಹೊರಬಿದ್ದ ಬಿಜೆಪಿ ಪಟ್ಟಿಯಿಂದ, ಅಮುಲ್ ಎಮ್ಡಿ ಸ್ಪಷ್ಟನೆವರೆಗಿನ ಪ್ರಮುಖ ಸುದ್ದಿಗಳಿವು
ಇನ್ನು ಪಟ್ಟಿ ತಯಾರಿಸುವ ವೇಳೆ ಯಡಿಯೂರಪ್ಪ ಅಸಮಾಧಾನಗೊಂಡಿದ್ದಾರೆ ಎನ್ನುವುದು ಊಹಾಪೋಹ. ಎರಡು ದಿನ ಪೂರ್ಣ ಪ್ರಮಾಣದಲ್ಲಿ ಕೂತು ನಿರ್ಧಾರ ಮಾಡಲಾಗಿದೆ. ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಕೆಲವು ಸಲಹೆ ಪಡೆಯಲಾಗಿದೆ. ಸಂಪೂರ್ಣವಾಗಿ ಯಡಿಯೂರಪ್ಪ ಅವರು ಈ ಪಟ್ಟಿ ತಯಾರಿಸುವಲ್ಲಿ ಭಾಗಿಯಾಗಿದ್ದಾರೆ ಎಂದರು.