ರಾಯಚೂರು: ಅಂಬೇಡ್ಕರ್ ಅವರ ದೂರದೃಷ್ಟಿಯಿಂದ ತುಳಿತಕ್ಕೊಳಗಾದವರಿಗೆ ಶಿಕ್ಷಣ, ಉದ್ಯೋಗ ಮೀಸಲಾತಿ ಸಿಕ್ಕಿದ್ದು, ಸ್ವಾಭಿಮಾನಿ ಬದುಕು ನಡೆಸಲು ಸಾಧ್ಯವಾಗಿದೆ. ಹೀಗಾಗಿ ನಾನು ಅಂಬೇಡ್ಕರ್ ವಾದಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಎಸ್‌ಸಿ-ಎಸ್‌ಟಿ ಜನಾಂಗಕ್ಕೆ ಸಾಮಾಜಿಕ ನ್ಯಾಯ ನೀಡಬೇಕು ಎಂದು ಮೀಸಲಾತಿ ಹೆಚ್ಚಳ ಮಾಡುವ ದಿಟ್ಟ ನಿರ್ಧಾರ ಮಾಡಲಾಗಿದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾನ ಮನಸ್ಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರಗಳು ಮೀಸಲಾತಿ ಹೆಚ್ಚಳದ ನಿರ್ಧಾರ ಯಾಕೆ ಮಾಡಲಿಲ್ಲ? ಸಾಮಾಜಿಕ ನ್ಯಾಯವನ್ನು ಕೇವಲ ಭಾಷಣದಲ್ಲಿ ಹೇಳುವ ಕೆಲ ನಾಯಕರು, ಪರಿಶಿಷ್ಟರನ್ನು ಕೇವಲ ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ | Rahul Gandhi: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ, ಸಾಮಾನ್ಯ ಕಾರ್ಯಕರ್ತರಿಗೂ ಸರ್ಕಾರದಲ್ಲಿ ಸ್ಥಾನ: ರಾಹುಲ್ ಗಾಂಧಿ
ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ
ಭಾರತದ ಜನಸಂಖ್ಯೆ 130 ಕೋಟಿ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಆರು ಜಾತಿಗಳು ಎಸ್‌ಸಿಗೆ ಸೇರಿದ್ದವು. ಈಗ 103 ಜಾತಿಗಳಿವೆ. ಜನಸಂಖ್ಯೆ ಹೆಚ್ಚಳವಾದರೂ ಮೀಸಲಾತಿ ಪ್ರಮಾಣ ಹೆಚ್ಚಾಗಿರಲಿಲ್ಲ. ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಿದರು. ಆದರೆ ಮೀಸಲಾತಿ ಹೆಚ್ಚಿಸುವ ಪ್ರಯತ್ನ ಮಾಡಲಿಲ್ಲ. ಸಂವಿಧಾನದಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಹೆಚ್ಚಿಸಲು ಅಂಬೇಡ್ಕರ್ ಹೇಳಿದ್ದು, ಆ ಕೆಲಸವಾಗಿಲ್ಲ. ಇಂದಿರಾ ಸಹಾನಿ ಪ್ರಕರಣದ ತೀರ್ಪನ್ನು ನಾಗಮೋಹನ್ ದಾಸ್ ಸಮಿತಿ ಎತ್ತಿ ಹಿಡಿದು ಶಿಫಾರಸು ಮಾಡಿದೆ. ನ್ಯಾ. ಸುಭಾಷ್ ಅಡಿ ನೇತೃತ್ವದ ಸಮಿತಿ ತನ್ನ ನಿರ್ಧಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ಸರ್ಕಾರ ಮೀಸಲಾತಿ ಹೆಚ್ಚಿಸಿದೆ ಎಂದು ತಿಳಿಸಿದರು.
ನಾಟಕ ನಡೆಯುವುದಿಲ್ಲ
ಅಭಿವೃದ್ದಿ, ಶಿಕ್ಷಣ, ಉದ್ಯೋಗ ಹಕ್ಕುಗಳನ್ನು ಯಾರು ಕೊಡುತ್ತಾರೋ ಅವರೇ ನಮ್ಮವರು ಎಂಬ ಜಾಗೃತಿ ಮೂಡಬೇಕು. ಹೀಗಾಗಿ ಸುಳ್ಳು ಭರವಸೆಗಳ ನಾಟಕ ನಡೆಯುವುದಿಲ್ಲ. ಇನ್ನು ಮುಂದೆ ಯಾರು ನಮ್ಮ ಪರವಾಗಿ ನಿಲ್ಲುತ್ತಾರೆ ಅವರಿಗೆ ನಮ್ಮ ಮತ ಎಂಬ ತೀರ್ಮಾನವನ್ನು ಜನರು ಮಾಡಬೇಕು. ಸಮಾಜದಲ್ಲಿ ಬಹಳಷ್ಟು ಬದಲಾವಣೆ ಆಗುತ್ತಿದೆ, ಯುವಕರಲ್ಲಿ ಜಾಗೃತಿ ಮೂಡಿದೆ ಎಂದರು.