Site icon Vistara News

ಹಾವೇರಿಯಲ್ಲಿ ನ.11ರಿಂದ 13ರವರೆಗೆ ಕನ್ನಡ ಸಾಹಿತ್ಯ ಸಮ್ಮೇಳನ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನವೆಂಬರ್ 11 ರಿಂದ 13ರವರೆಗೆ ಹಾವೇರಿಯಲ್ಲಿ ಆಯೋಜಿಸಲಾಗಿದೆ. ಸಾಹಿತಿ ಡಾ. ದೊಡ್ಡರಂಗೇಗೌಡರ ಅಧ್ಯಕ್ಷತೆಯಲ್ಲಿ ಮೂರು ದಿನಗಳ ಕಾಲ ಸಮ್ಮೇಳನ ನಡೆಯಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದ ಚಾಮರಾಜಪೇಟೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನವೀಕೃತ ಕಟ್ಟಡ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರ, ಕನ್ನಡದ ಶ್ರೀಮಂತ ಪರಂಪರೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಭವಿಷ್ಯಕ್ಕೆ ಕರೆದುಕೊಂಡು ಹೋಗುವ ಕೆಲಸ ಮಾಡಬೇಕಿದೆ. ನಾವೆಲ್ಲರೂ ಕನ್ನಡಿಗರ ಏಳಿಗೆಗೆ ನಿರಂತವಾಗಿ ಕೆಲಸ ಮಾಡಬೇಕು. ಕನ್ನಡ ಎನ್ನುವುದು ಅಭಿಮಾನ ಪಡುವ ಪ್ರದರ್ಶನದ ವಸ್ತುವಲ್ಲ, ಅದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸೀಮಿತವಾಗದೆ ನಿತ್ಯ ನಿರಂತರವಾಗಬೇಕು. ಯುವಜನಾಂಗದ ಮನಸ್ಸನ್ನು ಅರ್ಥಮಾಡಿಕೊಂಡು ಅವರಲ್ಲಿ ಕನ್ನಡ ಪ್ರಜ್ಞೆ ಬೆಳೆಸಬೇಕು ಎಂದರು.

ಇದನ್ನೂ ಓದಿ | ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ತ್ವರಿತ ಅನುಮತಿ ನೀಡಿ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಈಗಾಗಲೇ ಹೊಸ ಶಿಕ್ಷಣ ನೀತಿಯನ್ನು ಸರ್ಕಾರ ಸಿದ್ಧಗೊಳಿಸಿದೆ. ಎಲ್ಲಾ ಹಂತಗಳಲ್ಲೂ ಕನ್ನಡವನ್ನು ಜಾರಿಗೆ ತರಲು ಅದರಲ್ಲಿ ಅವಕಾಶವಿದೆ. ಕನ್ನಡ ಮಾಧ್ಯಮದಲ್ಲೇ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿ ಪಡೆಯಲು ಅವಕಾಶವಿದ್ದು, ಈ ಬಗ್ಗೆ ನಾವು ಪ್ರೋತ್ಸಾಹ ನೀಡಬೇಕು. ಅದರೊಂದಿಗೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ಸಿದ್ಧವಾಗಿದ್ದು, ಅದು ವಿಧಾನಮಂಡಲದಲ್ಲಿ ಚರ್ಚೆಯಾಗುವ ಮುನ್ನ ಸಾರ್ವಜನಿಕವಾಗಿ ಚರ್ಚೆಯಾಗಬೇಕು ಎಂದರು.

ಇದಕ್ಕೆ ಸ್ಪಂದಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು, ಸೆಪ್ಟೆಂಬರ್ ತಿಂಗಳಲ್ಲಿ ಈ ಕುರಿತು ಒಂದು ದಿನದ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸುವುದಾಗಿ ತಿಳಿಸಿದರು. ಜೋಶಿ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಮನವಿ ಮಾಡಿದ ಮೂರು ಬೇಡಿಕೆಗಳಾದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕಕ್ಕೆ ಕಾನೂನು ರೂಪ, ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡಗಳ ನಾನಾ ಅಭಿವೃದ್ಧಿ ಕಾಮಗಾರಿಗಳು, ನವೀಕರಣ ಕಾರ್ಯಕ್ಕೆ 10 ಕೋಟಿ ರೂ. ಧನಸಹಾಯ, ಚಾಮರಾಜಪೇಟೆಯ ಮಿಂಟೋ ವೃತ್ತದ ಬಳಿಯ ಪೊಲೀಸ್ ಠಾಣೆಯ ಎದುರಿನಿಂದ ಮಕ್ಕಳಕೂಟದ ವರೆಗಿನ ರಸ್ತೆಯನ್ನು ಕನ್ನಡ ಮಯ ರಸ್ತೆಯಾಗಿಸಬೇಕು ಎಂಬ ಬೇಡಿಕೆಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.

ಗೋವಾ, ಸೊಲ್ಲಾಪುರ, ಕಾಸರಗೋಡಿನಲ್ಲಿ ಕನ್ನಡ ಭವನ ಗಡಿನಾಡ ಕನ್ನಡಿಗರನ್ನು ಸರ್ಕಾರ ಮರೆತಿಲ್ಲ. ಗೋವಾ, ಸೊಲ್ಲಾಪುರ, ಕಾಸರಗೋಡುಗಳಲ್ಲಿ “ಕನ್ನಡ ಭವನ” ಈ ವರ್ಷದಲ್ಲಿ ಸಿದ್ಧಪಡಿಸುತ್ತೇವೆ. ಎಲ್ಲಾ ಕನ್ನಡ ಶಾಲೆಗಳು ಉಳಿಯಲಿವೆ. ಅವುಗಳನ್ನು ಮುಚ್ಚುವ ಪ್ರಮೇಯ ಇಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇದನ್ನೂ ಓದಿ | Tiger Kirana | ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ನಲ್ಲಿ ಹುಲಿ ಸಾವು

ಕಂದಾಯ ಸಚಿವ ಆರ್. ಅಶೋಕ್‌ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸುಂದರವಾದ ಸನ್ನಿವೇಶ ಹಾಗೂ ವ್ಯವಸ್ಥೆ ನಿರ್ಮಾಣ ಮಾಡಿದ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರನ್ನು ಅಭಿನಂದಿಸಿದರು. ಮುಂದುವರೆದು ಮಾತನಾಡಿ, ಕನ್ನಡದ ಹೋರಾಟಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮುಂಚೂಣಿಯಲ್ಲಿ ನಿಲ್ಲಬೇಕು. ಚಾಮರಾಜಪೇಟೆಯ ಈದ್ಗಾ ಮೈದಾನ ಕಂದಾಯ ಇಲಾಖೆಯ ಆಸ್ತಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಈದ್ಗಾ ಮೈದಾನದಲ್ಲಿ ಕನ್ನಡ ರಾಜೋತ್ಸವ ಆಚರಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಮಾತನಾಡಿ, ಎಂದೆದೂ ಜನರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಕೆಲಸ ಮಾಡುತ್ತಿದೆ. ಭಾಷಾ ಹಿತರಕ್ಷಣೆಗಾಗಿ ಕೆಲಸ ಮಾಡುವಂತಹ ಸಂಸ್ಥೆ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಕಾಲಕಾಲಕ್ಕೆ ಕನ್ನಡ ಭಾಷೆ ಪ್ರತಿನಿತ್ಯ ಬೆಳವಣಿಗೆಯ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಪರಿಶೀಲಿಸಿ ಸರ್ಕಾರಕ್ಕೆ ಸಲಹೆ ಸೂಚನೆ ನೀಡುತ್ತಾ ಬಂದಿದೆ. ಹೀಗಾಗಿ ಇದು ಅತ್ಯಂತ ವಿಶಿಷ್ಟವಾದ ಸಂಸ್ಥೆ ಎಂದು ಬಣ್ಣಿಸಿದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರು ಮಾತನಾಡಿ, ಕನ್ನಡಿಗರ ಬದುಕು ಸುಂದರವಾಗಲು ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಕಷ್ಟು ನಡೆಯಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಲುವು ಆಗಬೇಕು. ಅನೇಕ ಕನ್ನಡಿಗರು ತಮಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ಹಾಗೆ ಮಾಡಿದರೆ ಕನ್ನಡ ಭಾಷೆಗೆ ನಾವು ಮಾಡುವ ಅನ್ಯಾಯ ಎಂದರು.

ಇದನ್ನೂ ಓದಿ | ನಾಡಗೀತೆ ಒಂದೇ ನಿಮಿಷದಲ್ಲಿ ಮುಗೀಬೇಕು, ಎರಡೇ ಚರಣ ಸಾಕು: ಕಮಲಾ ಹಂಪನಾ ಸಲಹೆ

Exit mobile version