ಬೆಂಗಳೂರು: ರಾಜ್ಯದ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲು ಹಲವು ಯೋಜನೆ ಹಮ್ಮಿಕೊಂಡಿದ್ದು, ಕೆಲವೇ ತಿಂಗಳುಗಳಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಂತಾರಾಷ್ಟ್ರೀಯ ನಕ್ಷೆಯಲ್ಲಿ ಸೇರ್ಪಡೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2022ಯ ಅಂಗವಾಗಿ ಆಯೋಜಿಸಿದ್ದ ನೋಂದಾಯಿತ ರಾಜ್ಯದ ಪ್ರವಾಸಿ ಮಾರ್ಗದರ್ಶಿಗಳಿಗೆ ಪ್ರೋತ್ಸಾಹಧನ ವಿತರಣೆ ಹಾಗೂ ಪ್ರವಾಸೋದ್ಯಮ ನೀತಿ 2020-26ರ (ಪರಿಷ್ಕತ) ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ರಾಜ್ಯಕ್ಕೆ ಆಗಮಿಸುತ್ತಿರುವ 30 ಲಕ್ಷ ಪ್ರವಾಸಿಗರನ್ನು ಮುಂದಿನ ಮೂರು ವರ್ಷದಲ್ಲಿ ಒಂದು ಕೋಟಿಗೆ ಮುಟ್ಟಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕು. ರಾಜ್ಯದಲ್ಲಿ ಪ್ರವಾಸಿಗರ ಹೆಜ್ಜೆಗಳನ್ನು ಹೆಚ್ಚಿಸಬೇಕು. ವಿದೇಶಿಯರನ್ನು ಆಕರ್ಷಿಸಿ, ಸ್ಥಳೀಯರಿಗೆ ಕೆಲಸ ಕೊಡಬೇಕು. ಪ್ರವಾಸೋದ್ಯಮಕ್ಕೆ ಸೂಕ್ತವಾಗಿರುವ ಹಲವು ಸ್ಥಳಗಳು ಕರ್ನಾಟಕದಲ್ಲಿವೆ. ಅವುಗಳನ್ನು ಸುಧಾರಣೆ ಮಾಡಿದರೆ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ ಎಂದರು.
ನಮ್ಮ ಹಿರಿಯರಿಂದ ಬಂದಿರುವುದನ್ನು ಜಗತ್ತಿಗೆ ನಾವು ಪರಿಚಯಿಸಬೇಕು. ಇದನ್ನು ನಮ್ಮ ಸರ್ಕಾರ ಗುರುತಿಸುವ ಕೆಲಸ ಮಾಡುತ್ತದೆ. ಸಮಗ್ರವಾಗಿ ಕೆಲಸ ಮಾಡಬೇಕು. ಪ್ರವಾಸೋದ್ಯಮದೊಂದಿಗೆ ಕಂದಾಯ, ಆಹಾರ, ಲೋಕೋಪಯೋಗಿ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಿ ಕರ್ನಾಟಕದ ಒಟ್ಟು ಪ್ರವಾಸೋದ್ಯಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಕೆ ಮಾಡಲಾಗುವುದು. ಆಗ ಪ್ರವಾಸೋದ್ಯಮ ಸಂಪೂರ್ಣವಾಗಿ ಬಳಕೆಯಾಗಿ ಕರ್ನಾಟಕವನ್ನು ಜಗತ್‌ಪ್ರಸಿದ್ಧ ಮಾಡಬೇಕು. ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನವಿರಲಿದೆ ಎಂದರು.
ಶಿಗ್ಗಾಂವಿ ಕ್ಷೇತ್ರದಲ್ಲಿ ಕನಕದಾಸರು ಹುಟ್ಟಿದ್ದು, ಶಿಶುನಾಳ ಶರೀಫರ ಕರ್ಮಭೂಮಿಯಾಗಿದ್ದರೂ ಅಲ್ಲಿ ಯಾವ ಅಭಿವೃದ್ಧಿಯೂ ಆಗಿರಲಿಲ್ಲ. ಅಲ್ಲಿನ ಪುರಾತತ್ವ ಇಲಾಖೆ ವತಿಯಿಂದ ಉತ್ಖನನ ಮಾಡಿಸಿದ ನಂತರ ಅದು ಒಂದು ಸಣ್ಣ ಅರಮನೆ ಎಂದು ತಿಳಿಸಿದರು. ಅಲ್ಲಿ ಕನಕದಾಸರ ಕೋಟೆ ಮತ್ತು ಅರಮನೆ ಎರಡನ್ನೂ ಕಟ್ಟಲಾಗಿದೆ. 4ಡಿ ಸ್ಟುಡಿಯೋ ಸೇರಿದಂತೆ ಹಲವು ಉಪಕ್ರಮಗಳನ್ನು ಕೈಗೊಂಡು ಕನಕದಾಸರನ್ನು ಅಲ್ಲಿ ಜೀವಂತವಾಗಿರಿಸಲಾಗಿದೆ. ಈಗ ಸಾವಿರಾರು ಜನ, ವಿಶೇಷವಾಗಿ ಮಕ್ಕಳು ದೊಡ್ಡ ಪ್ರಮಾಣದಲ್ಲಿ ಅಲ್ಲಿಗೆ ಬರುತ್ತಾರೆ. ಮಹಾರಾಷ್ಟ್ರ, ಆಂಧ್ರ ಎಲ್ಲೆಡೆಯಿಂದ ಅಲ್ಲಿಗೆ ಪ್ರವಾಸಿಗರು ಬರುತ್ತಾರೆ ಎಂದರು.
ಸಚಿವ ಆನಂದ್ ಸಿಂಗ್ ಅವರು ಬಂದ ನಂತರ ಹಲವಾರು ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಯಾಣ, ಚಿಕ್ಕಮಗಳೂರಿನಲ್ಲಿ ರೋಪ್ ವೇ, ಹೋಟೆಲ್‌ಗಳನ್ನು ಪುನಶ್ಚೇತನ ಮಾಡುವ ಕೆಲಸಗಳನ್ನು ಮಾಡುತ್ತಿದ್ದಾರೆ. ಎರಡು ಸರ್ಕಿಟ್‌ಗಳನ್ನು ರೂಪಿಸಲಾಗಿದೆ. ಸಿ.ಆರ್.ಝಡ್ ಸಾಧನೆ ಅದ್ಭುತವಾಗಿದೆ. ಅದರಲ್ಲಿ ಆನಂದ್ ಸಿಂಗ್ ಅವರ ಪಾತ್ರ ಮುಖ್ಯವಾಗಿದೆ. ಬರುವ ದಿನಗಳಲ್ಲಿ ಇದರ ಉಪಯೋಗ ಪಡೆಯೋಣ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮವನ್ನು ಕೈಗೊಳ್ಳುವ ಕೆಲಸಕ್ಕೆ ಇನ್ನಷ್ಟು ಶಕ್ತಿ ತುಂಬುವ ಕೆಲಸವನ್ನು ಮಾಡಲಾಗುವುದು
ನಿಷ್ಠೆ , ಪ್ರಾಮಾಣಿಕತೆ ಇರಲಿ
ಪ್ರವಾಸಿ ಮಾರ್ಗದರ್ಶಿಗಳು ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಸುಳ್ಳು ಹೇಳುವುದು, ಬಂದವರಿಗೆ ದಾರಿ ತಪ್ಪಿಸುವುದು ಮಾಡಬಾರದು. ಕರ್ನಟಕದ ಪ್ರವಾಸಿ ಮಾರ್ಗದರ್ಶಿಗಳೆಂದರೆ ನಂಬರ್ ಒನ್ ಆಗಬೇಕು. ಅವರು ಸರಿಯಾಗಿ ಮಾರ್ಗದರ್ಶನ ಮಾಡುತ್ತಾರೆ ಎಂಬ ವಿಶ್ವಾಸ ಮೂಡಿಸುವ ರೀತಿಯಲ್ಲಿ ನಿಮ್ಮ ನಡೆ ನುಡಿ ಇರಬೇಕು ಎಂದು ಕಿವಿಮಾತು ಹೇಳಿದರು.
ಒಟ್ಟಾರೆ ಪ್ರವಾಸೋದ್ಯಮ ಅಧಿಕಾರಿಗಳು ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕು. ನಮ್ಮ ಸಾಮಥ್ರ್ಯವನ್ನು ಪರಿಪೂರ್ಣವಾಗಿ ಬಳಸುವಂತಾಗಬೇಕು. ಸರ್ಕಾರ ನಿಮ್ಮ ಜತೆಗಿದೆ, ಹೋಟೆಲ್ ಉದ್ಯಮಕ್ಕೆ ಬಹಳ ಅವಕಾಶಗಳಿವೆ. ಆನಂದ್ ಸಿಂಗ್ ಅವರು ಹಂಪಿ, ಬಾದಾಮಿ, ಬೇಲೂರಿನಲ್ಲಿ ತ್ರಿ ಸ್ಟಾರ್ ಹೋಟೇಲ್‌ಗಳನ್ನು ಪ್ರಾರಂಭಿಸಿದ್ದಾರೆ. ಬಹಳಷ್ಟು ಅಭಿವೃದ್ಧಿಯಾಗುತ್ತಿದ್ದು, ಇದರ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತಿವೆ, ಕನ್ನಡದ ಹುಡುಗರಿಗೆ ಹೆಚ್ಚಿನ ಕೆಲಸ ಸಿಗಬೇಕು. ಪ್ರವಾಸೋದ್ಯಮದಲ್ಲಿ ಕರ್ನಾಟಕ ಜಗತ್‌ಪ್ರಸಿದ್ಧವಾಗಬೇಕು ಎನ್ನುವುದೇ ನನ್ನ ಅಭಿಲಾಷೆ. ಈ ಬಗ್ಗೆ ಸಂಕಲ್ಪವನ್ನು ಮಾಡಿ ನಾವು ಮುಂದುವರಿಯೋಣ ಎಂದರು.
ಪ್ರವಾಸೋದ್ಯಮ ಸರ್ಕೀಟ್
ರಾಜ್ಯದಲ್ಲಿ 2 ಪ್ರವಾಸೋದ್ಯಮ ಸರ್ಕೀಟ್‌ಗಳನ್ನು ಅಂದರೆ ಬೇಲೂರು ಹಳೆಬೀಡು, ಸೋಮನಾಥಪುರ ಸುತ್ತಮುತ್ತಲ ಪ್ರವಾಸಿತಾಣಗಳನ್ನೊಳಗೊಂಡ ಮೈಸೂರು ಸರ್ಕೀಟ್ , ಬಿಜಾಪುರದಿಂದ ಬಾದಾಮಿ ಪಟ್ಟದಕಲ್ಲು ಹಂಪಿ ಇತ್ಯಾದಿಗಳನ್ನು ಒಳಗೊಂಡ ಹಂಪಿ ಸರ್ಕೀಟ್‍ಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ರೂಪಿಸಿದೆ. ಈ ಸರ್ಕೀಟ್‍ಗಳಿಗೆ ಪ್ರವಾಸಿಗರು ವೆಬ್‍ಸೈಟ್ ಮೂಲಕ ತಮ್ಮ ಪ್ರವಾಸದ ಸಂಪೂರ್ಣ ವ್ಯವಸ್ಥೆಯನ್ನು ಮಾಡಿಕೊಳ್ಳುವ ಯೋಜನೆಯನ್ನು ರೂಪಿಸಲಾಗುತ್ತಿದ್ದು, ಮುಂದಿನ 2 ತಿಂಗಳ ಒಳಗಾಗಿ ಎರಡು ಸರ್ಕಿಟ್‍ಗಳನ್ನು ಕಾರ್ಯಾರಂಭ ಮಾಡಲಾಗುವುದು.
ಟೆಂಪಲ್ ಟೂರಿಸಂ, ನೈಸರ್ಗಿಕ ಟೂರಿಸಂಗಳಿಗೆ ಪ್ರಾಶಸ್ತ್ಯ ನೀಡಲಾಗುವುದು. ಜೋಗ ಜಲಪಾತ ಪ್ರವಾಸಿ ತಾಣ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗಾಗಿ 100 ಕೋಟಿ ರೂ. ಮೀಸಲಿರಿಸಲಾಗಿದ್ದು, 600 ಕೊಠಡಿಗಳ ಪ್ರವಾಸಿ ವಸತಿ ನಿಲಯ ನಿರ್ಮಿಸಲಾಗುತ್ತಿದೆ. ಕರಾವಳಿ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿ ಸಿಆರ್‌ಝಡ್ ಆದೇಶ ಕೇಂದ್ರ ಸರ್ಕಾರ ವಿನಾಯಿತಿ ನೀಡಿದ್ದು, ಕರಾವಳಿ ಭಾಗದ ಪ್ರವಾಸೋದ್ಯಮಕ್ಕೆ ದೊಡ್ಡ ಪ್ರಮಾಣದ ಸಹಾಯವಾಗಲಿದೆ. ಕರಾವಳಿ ಪ್ರದೇಶದ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕರಾವಳಿ ಅಭಿವೃದ್ಧಿ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ | ಎಸ್. ನಿಜಲಿಂಗಪ್ಪನವರ ಮನೆ ಖರೀದಿಸದ ಸರ್ಕಾರ: ಖಾಸಗಿಯವರಿಗೆ ಮಾರಲು ಅನುಮತಿ ನೀಡಿ ಎಂದ ಕುಟುಂಬ