ಬೆಳಗಾವಿ: ಬ್ರಿಟಿಷರ ವಿರುದ್ಧ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಹೋರಾಡಿದ್ದು 1857ರಲ್ಲಿ, ಆದರೆ ಕಿತ್ತೂರು ರಾಣಿ ಚೆನ್ನಮ್ಮ ಹೋರಾಡಿದ್ದು 1824ರಲ್ಲೇ ಹೋರಾಡಿದ್ದರು. ಹೀಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ರಾಣಿ ಝಾನ್ಸಿ ಲಕ್ಷ್ಮೀಬಾಯಿ ಅಲ್ಲ, ಕಿತ್ತೂರು ರಾಣಿ ಚೆನ್ನಮ್ಮ(Kittur Utsav) ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಪಾದನೆ ಮಾಡಿದರು.
ಜಿಲ್ಲೆಯ ಕಿತ್ತೂರಿನಲ್ಲಿ ಆಯೋಜಿಸಿದ್ದ ಕಿತ್ತೂರು ಉತ್ಸವ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ಝಾನ್ಸಿ ಲಕ್ಷ್ಮೀಬಾಯಿ ಅಲ್ಲ, ನಮ್ಮ ಕಿತ್ತೂರು ಚೆನ್ನಮ್ಮ. ಆದರೆ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ಝಾನ್ಸಿ ಲಕ್ಷ್ಮೀಬಾಯಿ ಎಂದು ಇತಿಹಾಸದಲ್ಲಿ ಬರೆಯಲಾಗಿದೆ. ಹೀಗಾಗಿ ಸತ್ಯವನ್ನು ದೇಶಕ್ಕೆ ತಿಳಿಸುವ ಕೆಲಸ ಮಾಡಲು ನಮ್ಮ ಸರ್ಕಾರ ಕ್ರಮ ವಹಿಸಲಿದೆ. ಚೆನ್ನಮ್ಮ ಸೈದ್ಧಾಂತಿಕವಾಗಿ ಹೋರಾಟ ಮಾಡಿದರು. ಈ ಮಣ್ಣು ನನ್ನದು, ಈ ದೇಶ ನನ್ನದು, ಅದನ್ನು ಉಳಿಸಿಕೊಳ್ಳಬೇಕು ಎಂದು ಹೋರಾಡಿದರು. ಅವರ ಧೀರತನ, ಶೂರತನ ಮೆಚ್ಚಿಯೇ ಸುತ್ತಮುತ್ತಲಿನ ಎಲ್ಲ ವೀರರು ಅವರ ಬೆನ್ನಿಗೆ ನಿಂತರು. ಅಮಟೂರು ಬಾಳಪ್ಪ, ಸಂಗೊಳ್ಳಿ ರಾಯಣ್ಣ ಚೆನ್ನಮ್ಮ ಬೆಣ್ಣಿಗೆ ನಿಂತರು ಎಂದು ಹೇಳಿದರು.
ಇದನ್ನೂ ಓದಿ | SCST ಮೀಸಲು | ಸುಗ್ರೀವಾಜ್ಞೆಗೆ ಮುಂದಿನ ಅಧಿವೇಶನದಲ್ಲಿ ಅನುಮೋದನೆ: ಸಿಎಂ ಬೊಮ್ಮಾಯಿ ಭರವಸೆ
1824ರ ಅ.24ರಂದು ಬ್ರಿಟಿಷ್ ಅಧಿಕಾರಿ ಥ್ಯಾಕರೆ ರುಂಡವನ್ನು ರಾಣಿ ಚೆನ್ನಮ್ಮ ಚೆಂಡಾಡಿದರು. ಆ ಮೂಲಕ ಬ್ರಿಟಿಷರ ವಿರುದ್ಧ ಗೆಲುವು ದಾಖಲಿಸಿ ಸಾಮ್ರಾಜ್ಯ ಉಳಿಸಿಕೊಂಡರು. ಆ ವಿಜಯೋತ್ಸವ ಸಂಕೇತವಾಗಿ ಕಿತ್ತೂರು ಉತ್ಸವ ಆಚರಿಸಿಕೊಂಡು ಬರುತ್ತಿದ್ದೇವೆ. ಬ್ರಿಟಿಷರು ಮತ್ತೆ ಚೆನ್ನಮ್ಮಳನ್ನು ಬಂಧಿಸಿ ಜೈಲಿಗೆ ಕಳುಹಿಸಿದರು. ಆದರೂ ಅವರು ಭರವಸೆ, ಧೈರ್ಯ ಎಂದೂ ಕಳೆದುಕೊಳ್ಳಲಿಲ್ಲ. ಸಂಗೊಳ್ಳಿ ರಾಯಣ್ಣ ಕಿತ್ತೂರು ಸಂಸ್ಥಾನ ರಕ್ಷಿಸುತ್ತಾನೆ ಎಂದು ಚೆನ್ನಮ್ಮ ನಂಬಿದ್ದರು. ಆದರೆ ಬ್ರಿಟಿಷರು ಸಂಗೊಳ್ಳಿ ರಾಯಣ್ಣನನ್ನು ಮೋಸದಿಂದ ಸೆರೆ ಹಿಡಿಯುತ್ತಾರೆ. ರಾಯಣ್ಣನ ಬಂಧನದ ಸುದ್ದಿ ಕೇಳಿ ಜೈಲಲ್ಲೇ ಚೆನ್ನಮ್ಮ ಕುಸಿದು ಬೀಳುತ್ತಾರೆ ಎಂದು ವಿವರಿಸಿದರು.
ಕಿತ್ತೂರು ರಾಣಿ ಚೆನ್ನಮ್ಮಳ ಕ್ಷೇತ್ರದ ಎಷ್ಟೇ ಅಭಿವೃದ್ಧಿ ಮಾಡಿದರೂ ಅವರ ಹೋರಾಟದ ಮುಂದೆ ಏನೂ ಇಲ್ಲ. ಎರಡು ನೂರು ವರ್ಷ ಕಳೆದರೂ ಕಿತ್ತೂರು ರಾಣಿ ಚೆನ್ನಮ್ಮ ನಮಗೆಲ್ಲಾ ಪ್ರೇರಣೆಯಾಗಿದ್ದಾರೆ. ಸಮೃದ್ಧ ನಾಡು ಕಟ್ಟಲು ಅವರು ಪ್ರೇರಣೆಯಾಗಬೇಕು. ಸ್ವಾಭಿಮಾನ ಉಳಿಯಬೇಕೆಂದರೆ ದುಡಿಯುವತ್ತ ಎಲ್ಲರೂ ಚಿತ್ತ ಹರಿಸಬೇಕು. ದುಡಿಯುವ ವರ್ಗಕ್ಕೆ ಗೌರವ ಬರಬೇಕು, ವಿದ್ಯೆ ಕಳಿತವರಿಗೆ ಗೌರವ ದೊರೆಯಬೇಕು. ಈ ದೇಶದ ಪ್ರಗತಿಗೆ ಕಾರಣವಾದವರನ್ನು ಗೌರವಿಸಬೇಕು ಎಂದರು.
ಸಮಾಜದಲ್ಲಿ ಗಲಭೆ ಉಂಟು ಮಾಡುವ ಶಕ್ತಿಗಳ ಧಮನ ಆಗಬೇಕು. ದೇಶದ ಭದ್ರತೆ ಬಹಳ ಮುಖ್ಯ, ಒಗ್ಗಟ್ಟು ಮುರಿಯುವ ಪ್ರಯತ್ನ ನಡೆದಿದೆ. ಆದರೆ ನಮ್ಮೆಲ್ಲರ ಸುದೈವ, ನಮಗೆ ನರೇಂದ್ರ ಮೋದಿ ಅವರಂತಹ ಉತ್ತಮ ನಾಯಕರು ಸಿಕ್ಕಿದ್ದು, ಭಯೋತ್ಪಾದನೆ ದಮನ ಮಾಡಲು ಕ್ರಮ ಕೈಗೊಂಡಿದ್ದಾರೆ. ದೇಶ ಹಿಂದೆಂದಿಗಿಂತಲೂ ಆರ್ಥಿಕವಾಗಿ, ಸಾಮಾಜಿಕ ಪ್ರಗತಿ ಹೊಂದುತ್ತಿದೆ. ಅಮೇರಿಕ, ಯೂರೋಪ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಆದರೆ, ಭಾರತದಲ್ಲಿ ಹೀಗಾಗಿಲ್ಲ, ಅದಕ್ಕೆ ಕಾರಣ ನರೇಂದ್ರ ಮೋದಿ ಅವರ ದೂರದೃಷ್ಟಿ. ಅವರ ಆಡಳಿತದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಧೈರ್ಯ, ಶೌರ್ಯ, ಮುಂದಾಲೋಚನೆಯ ಗುಣಗಳು ಇವೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದ ಪ್ರಮುಖ ನೀರಾವರಿ ಯೋಜನೆಗಳಿಗೆ ಶೀಘ್ರವೇ ಚಾಲನೆ ದೊರೆಯಲಿದೆ. ಈ ಭಾಗದ ಅಭಿವೃದ್ಧಿ ಆಗಬೇಕು ಎಂದರೆ ನೀರಾವರಿ ಯೋಜನೆಗಳಿಗೆ ಚಾಲನೆ ದೊರೆಯಬೇಕಿದೆ. ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಗೆ ಕೋರ್ಟ್‌ನಲ್ಲಿ ನಮ್ಮ ಪರವಾಗಿ ತೀರ್ಪು ಬರುವ ಸಂಪೂರ್ಣ ಭರವಸೆ ಇದೆ, ಆಗ ಯೋಜನೆಗೆ ಚಾಲನೆ ನೀಡುತ್ತೇವೆ. ಕಳಸಾ ಬಂಡೂರಿ ಯೋಜನೆ ಜಾರಿಗೆಗೆ ಕ್ರಮ ವಹಿಸಿದ್ದೇವೆ. ಶೀಘ್ರವೇ ಕೇಂದ್ರದ ಒಪ್ಪಿಗೆ ಪಡೆದು ಕೆಲಸ ಆರಂಭಿಸುತ್ತೇವೆ ಎಂದರು.
ಕಿತ್ತೂರು ಉತ್ಸವಕ್ಕೆ ಬಂದರೆ ಅಧಿಕಾರ ಹೋಗುತ್ತದೆ?
ಕಿತ್ತೂರು ಉತ್ಸವಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಮೌಢ್ಯ ಎಲ್ಲ ಮುಖ್ಯಮಂತ್ರಿಗಳಲ್ಲಿದೆ. ಎಸ್. ಬಂಗಾರಪ್ಪ ಸಿಎಂ ಆಗಿದ್ದಾಗ ಕಿತ್ತೂರು ಉತ್ಸವ ಆಚರಣೆಗೆ ಚಾಲನೆ ನೀಡಿದ್ದರು. ಯಾರೇ ಮುಖ್ಯಮಂತ್ರಿ ಇರಲಿ, ಒಳ್ಳೆಯ ಕೆಲಸ ಮಾಡಿದರೆ ಸ್ಮರಿಸುವುದು ನಮ್ಮ ಧರ್ಮ. ಎಸ್. ಬಂಗಾರಪ್ಪ ಸಿಎಂ ಆಗಿ ಕಿತ್ತೂರಿಗೆ ಬಂದು ಹೋಗಿ ಕೆಲವೇ ದಿನಗಳಲ್ಲಿ ಅವರ ಸಿಎಂ ಸ್ಥಾನ ಹೋಯಿತು. ಇದರಿಂದ ಕಿತ್ತೂರು ಉತ್ಸವಕ್ಕೆ ಬಂದರೆ ಸಿಎಂ ಸ್ಥಾನ ಹೋಗುತ್ತದೆ ಎಂದು ಬಿಂಬಿಸಲಾಯಿತು. ಅಂದಿನಿಂದ ಹಲವು ಮುಖ್ಯಮಂತ್ರಿಗಳು ಕಿತ್ತೂರು ಉತ್ಸವಕ್ಕೆ ಬರಲೇ ಇಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಳೆದ ವರ್ಷ ನನಗೂ ಕಿತ್ತೂರು ಉತ್ಸವಕ್ಕೆ ಹೋಗಬೇಡಿ ಎಂದು ಕೆಲವರು ಸಲಹೆ ನೀಡಿದ್ದರು. ಇಲ್ಲಿಗೆ ಬಂದರೆ ಅಧಿಕಾರ ಹೋಗುತ್ತದೆ ಎಂಬುವುದು ಎಂತಹ ಮೂಡನಂಬಿಕೆ ಎಂದ ಅವರು, ಚಾಮರಾಜ ನಗರಕ್ಕೆ ಹೋದರೂ ಅಧಿಕಾರ ಹೋಗುತ್ತದೆ ಎಂದು ಹೇಳುತ್ತಾರೆ. ಕಿತ್ತೂರು ರಾಣಿ ಚೆನ್ನಮ್ಮಳ ಕ್ಷೇತ್ರದಂತಹ ಪವಿತ್ರ ಸ್ಥಾನಕ್ಕೆ ಬರುವುದೇ ನನ್ನ ಪುಣ್ಯ. ಕಿತ್ತೂರು ಹಾಗೂ ಚಾಮರಾಜನಗರ ಎರಡೂ ಕಡೆ ನಾನು ಹೋಗಿ ಬಂದಿದ್ದೇನೆ. ಕಳೆದ ವರ್ಷವೂ ನಾನು ಇಲ್ಲಿಗೆ ಬಂದಿದ್ದೆ, ಆದರೆ ನನ್ನ ಮುಖ್ಯಮಂತ್ರಿ ಸ್ಥಾನವೇನೂ ಹೋಗಲಿಲ್ಲ. ಈ ವರ್ಷವೂ ಮುಖ್ಯಮಂತ್ರಿ ಆಗಿಯೇ ಬಂದಿದ್ದೇನೆ ಎಂದು ಹೇಳಿದರು.
ಸುವರ್ಣಸೌಧ ಎದುರು ಮೂವರು ಮಹಾನ್ ವ್ಯಕ್ತಿಗಳ ಪುತ್ಥಳಿ
ಸುವರ್ಣಸೌಧ ಎದುರು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಅನಾವರಣ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದರು. ಈಗಾಗಲೇ ಪುತ್ಥಳಿಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದೇವೆ. ಈ ಇಬ್ಬರು ಮಹಾನ್ ವ್ಯಕ್ತಿಗಳ ಜತೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನೂ ನಿರ್ಮಿಸುತ್ತೇವೆ. ನವೆಂಬರ್ ತಿಂಗಳಲ್ಲಿ ನಾನೇ ಸುವರ್ಣಸೌಧದ ಎದುರು ಪುತ್ಥಳಿ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ | BJP Target 150 | ಹಳೆ ಮೈಸೂರಿನಲ್ಲಿ ಗುರಿ ಸಾಧಿಸಲು ಬಿಜೆಪಿಯ 11 ಪ್ರಯತ್ನಗಳು