ಉಡುಪಿ: ಸ್ವಾತಂತ್ರ್ಯ ಹೋರಾಟದಲ್ಲಿ ಭಾರತದ ಪತ್ರಿಕೆಗಳ ಪಾತ್ರ ಬಹಳ ದೊಡ್ಡದು. ಮಾಧ್ಯಮಗಳಿಲ್ಲದ ಸಂದರ್ಭದಲ್ಲಿ ಬಹಳಷ್ಟು ಪತ್ರಿಕೆಗಳು ಕರಪತ್ರಿಕೆಗಳಾಗಿ ಬರುತ್ತಿದ್ದವು. ಮಹಾತ್ಮ ಗಾಂಧಿ ಅವರೂ ಪತ್ರಿಕೆಗಳ ಮೂಲಕವೇ ತಮ್ಮ ಸಂದೇಶಗಳನ್ನು ತಿಳಿಸುತ್ತಿದ್ದರು. ಹೀಗಾಗಿ ಜನರ ಮನಸ್ಸಿನ ಆಶೋತ್ತರ ಹಾಗೂ ನಿರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಮಾಧ್ಯಮಗಳು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಉದಯವಾಣಿ ಸುವರ್ಣೋತ್ತರ ಸಂಭ್ರಮದ ಅಂಗವಾಗಿ ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್, ಉದಯವಾಣಿ ಕನ್ನಡದ ದಿನಪತ್ರಿಕೆ ಆಯೋಜಿಸಿದ್ದ ಪತ್ರಿಕಾ ರಂಗದ ಧೀಮಂತ ಸಾಧಕರ ಶತಮಾನೋತ್ಸವ ಸಂಸ್ಮರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪತ್ರಿಕೋದ್ಯಮದ ಮುಖಾಂತರ ಮೌಲ್ಯಗಳ ಮರು ಸ್ಥಾಪನೆಗೆ ಮಣಿಪಾಲ ಮೀಡಿಯಾ ಮುಂದೆ ಬಂದಿದೆ. ರಾಜ್ಯದಲ್ಲಿ ಪತ್ರಿಕೋದ್ಯಮ ಆರಂಭದಲ್ಲಿ ಕರಾವಳಿ ಭಾಗದ ಪಾತ್ರ ಮಹತ್ವದ್ದು. ಕರ್ನಾಟಕದ ಮೊದಲ ಪತ್ರಿಕೆ ಪ್ರಾರಂಭವಾಗಿದ್ದೇ ಮಂಗಳೂರಿನಿಂದ. ಮೊದಲನೇ ಪತ್ರಿಕೆ ಇಲ್ಲಿ ಹುಟ್ಟಬೇಕಾದರೆ ದೂರದೃಷ್ಟಿಯ ಚಿಂತಕರು, ಅದನ್ನು ಬರಹದಲ್ಲಿ ಅಭಿವ್ಯಕ್ತಿ ಮಾಡುವ ಸಾಹಿತಿಗಳು ಮತ್ತು ದೇಶ ಪ್ರೇಮ ಈ ಕರಾವಳಿ ಭಾಗದಲ್ಲಿ ಇದ್ದ ಹಿನ್ನೆಲೆಯಲ್ಲಿ ಪ್ರಮುಖವಾಗಿ ಬೆಳೆದಿದೆ ಎನ್ನುವುದು ಎದ್ದು ಕಾಣುತ್ತದೆ ಎಂದರು.
ಪತ್ರಿಕೋದ್ಯಮದ ಹಿರಿಯರ ಸ್ಮರಣೆ
ಮಣಿಪಾಲದಲ್ಲಿ ಪತ್ರಿಕೆ ಪ್ರಾರಂಭ ಮಾಡುವುದು ದೊಡ್ಡ ಸಂಗತಿ. ಹಿರಿಯ ಪತ್ರಕರ್ತ ಎಸ್.ಯು. ಪಣಿಯಾಟಿ, ಎ.ವಿ.ಹೆಗಡೆ, ಆಚಾರ್, ಕಮಾಲ್ ಹೈದರ್, ಬನ್ನಂಜೆ ರಾಮಾಚಾರ್, ಬೈಪಾಡಿ ಕೃಷ್ಣ ಮುಂತಾದ ಪತ್ರಿಕೆಯ ದಿಗ್ಗಜರನ್ನು ಸ್ಮರಣೆ ಮಾಡಿಕೊಳ್ಳಬೇಕು. ಯಾವುದೇ ಸಹಾಯಗಳಿಲ್ಲದೆ ಜನಾಭಿಪ್ರಾಯವನ್ನು ಮುಟ್ಟಿಸುವ ಕೆಲಸವನ್ನು ಈ ಎಲ್ಲಾ ಮಹನೀಯರು ಮಾಡಿದ್ದಾರೆ. ಹೀಗಾಗಿ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಟಿ.ಎಂ.ಎ. ಪೈ ಅವರು ಮಣಿಪಾಲ ಪ್ರೆಸ್ ಪ್ರಾರಂಭಿಸಿ ಮಣಿಪಾಲವಷ್ಟೇ ಅಲ್ಲದೇ ಭಾರತದಲ್ಲಿಯೇ ದೊಡ್ಡ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ರಾಂತಿಯನ್ನು ಮಾಡಿದ್ದಾರೆ. ಮಣಿಪಾಲ ಇಂದು ಶಿಖರದೆತ್ತರಕ್ಕೇ ಬೆಳೆದಿರುವುದು ಹೆಮ್ಮೆ ಪಡುವ ವಿಚಾರ, ಇದಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಎಂದರು.
ಗುಣಾತ್ಮಕವಾದ ಪತ್ರಿಕೋದ್ಯಮ ಅಗತ್ಯ
ಒಂದು ಪತ್ರಿಕೆ ನಡೆಸುವುದು ಸುಲಭದ ಮಾತಲ್ಲ. ಅದೊಂದು ಸಾಹಸ. ಸಾಹಿತ್ಯ ರಚನೆಗೆ ಸಮಯ ಬೇಕು. ಆದರೆ ಪತ್ರಿಕೆಯಲ್ಲಿ ಬರೆಯಲು ಸಮಯ ಇರುವುದಿಲ್ಲ. ವರದಿ, ವಿಶ್ಲೇಷಣೆಗಳನ್ನು ತುರ್ತಾಗಿ ಮಾಡುವ ಸಾಹಿತ್ಯ ರಚನೆ ಇದು. ಸೂಕ್ತವಾಗಿದ್ದಾಗ ಜನ ಒಪ್ಪುತ್ತಾರೆ. ಇಂದು ಜನರಿಗೆ ಹಲವು ಪತ್ರಿಕೆಗಳು ಹಾಗೂ ವಾಹಿನಿಗಳು ಲಭ್ಯವಿದ್ದು ಬಹಳಷ್ಟು ಆಯ್ಕೆಗಳಿವೆ. ಅಲ್ಲಿಯೂ ಬಹಳಷ್ಟು ಸ್ಪರ್ಧೆಯಿದೆ. ಈ ಸ್ಪರ್ಧೆಯಲ್ಲಿ ಉಳಿಯಲು ಗುಣಾತ್ಮಕವಾದ ಪತ್ರಿಕೋದ್ಯಮ ಅಗತ್ಯ. ಗುಣಾತ್ಮಕ ಬರಹಗಳು ಅಗತ್ಯವಿದ್ದರೆ ಅಲ್ಲಿಯ ವರದಿಗಾರರಿಗೆ ಸಂಪೂರ್ಣ ಸ್ವಾತಂತ್ರ್ಯವಿರಬೇಕು. ಅದನ್ನು ಉದಯವಾಣಿ ಪತ್ರಿಕೆ ಒದಗಿಸಿಕೊಟ್ಟಿದೆ ಎಂದು ವಿವರಿಸಿದರು.
ಪ್ರಜಾಪ್ರಭುತ್ವದ ಉಳಿವಿನಲ್ಲಿ ಪತ್ರಿಕೆಗಳ ಪಾತ್ರ
ಉದಯವಾಣಿ ಕರ್ನಾಟಕದ ವಾಣಿಯಾಗಿ ಹೊರಹೊಮ್ಮಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪತ್ರಿಕೋದ್ಯಮ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪ್ರಜಾಪ್ರಭುತ್ವ ಜೀವಂತವಾಗಿದ್ದರೆ ಅದಕ್ಕೆ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮ ಕಾರಣ. ಜನರಿಗೆ ಈ ದೇಶದಲ್ಲಿ, ರಾಜ್ಯದಲ್ಲಿ, ಊರಿನಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಇದ್ದಾಗ ಮಾತ್ರ ನಮ್ಮ ದೇಶದ ಬಗ್ಗೆ ಜಾಗೃತಿ ಹಾಗೂ ಕಳಕಳಿ ಉಂಟಾಗಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ಉಳಿವಿಗೆ ಪತ್ರಿಕೋದ್ಯಮ ಬಹಳ ದೊಡ್ಡ ಪಾತ್ರವನ್ನು ವಹಿಸಿದೆ ಎಂದು ಸಿಎಂ ತಿಳಿಸಿದರು.
ರಾಜಕಾರಣಿಗಳು ಮತ್ತು ಪತ್ರಿಕೆಗಳ ಅವಿನಾಭಾವ ಸಂಬಂಧ
ರಾಜಕಾರಣಿಗಳು ಮತ್ತು ಪತ್ರಿಕೆಗಳದ್ದು ಅವಿನಾಭಾವ ಸಂಬಂಧ. ನಿಮ್ಮನ್ನು ಬಿಟ್ಟು ನಾವು, ನಮ್ಮನ್ನು ಬಿಟ್ಟು ನೀವು ಇರಲು ಸಾಧ್ಯವಿಲ್ಲ. ರಾಜಕೀಯ ಸುದ್ದಿ ಇಲ್ಲದೆ ಪತ್ರಿಕೆಗಳು ಸಪ್ಪೆಯಾಗಿರುತ್ತವೆ. ರಾಜಕಾರಣಿಗಳೂ ಸಹ ಪತ್ರಿಕೆಗಳಿಗೆ ರಜೆ ಇದ್ದರೆ ಒದ್ದಾಡುವಂತಾಗುತ್ತದೆ. ನಾವು ಹೇಳುವುದು ಜನರಿಗೆ ಮುಟ್ಟಿಸುವ ಕೆಲಸ ಮಾಧ್ಯಮಗಳು ಮೂಲಕವೇ ಆಗುತ್ತದೆ. ಇದೊಂದು ರೀತಿಯಲ್ಲಿ ಗಂಡ ಹೆಂಡತಿಯ ಸಂಬಂಧವಿದ್ದಂತೆ. ಒಬ್ಬರಿಗೊಬ್ಬರು ಇರಲೇಬೇಕಾಗುತ್ತದೆ ಎಂದರು.
ಟೀಕೆಗಳಿಂದ ಎಚ್ಚರಿಕೆಯ ಹೆಜ್ಜೆಯಿಡಲು ಸಾಧ್ಯ
ಪ್ರಜಾಪ್ರಭುತ್ವದ ಭಾರತದಲ್ಲಿ ಪತ್ರಿಕೆಗಳು ನಮ್ಮನ್ನು ಸದಾ ಕಾಲ ಹೊಗಳುತ್ತಿರಬೇಕೆಂದು ನಿರೀಕ್ಷೆ ಮಾಡುವುದು ದಡ್ಡತನ. ಪತ್ರಿಕೆಗಳು ಜಾಗೃತಿ ಮೂಡಿಸಲೆಂದೇ ಇದೆ. ಹಾಗಿದ್ದಾಗಲೇ ಆಡಳಿತ ಮಾಡುವವರಿಗೆ ಎಚ್ಚರಿಕೆಯ ನಡೆ ಇಡಲು ಸಾಧ್ಯವಾಗುತ್ತದೆ. ಟೀಕೆಗಳನ್ನು ಸ್ವಾಗತಿಸಬೇಕು. ಸುಧಾರಣೆಗೆ ಅವಕಾಶಗಳೂ ಸಹ ಇರುತ್ತದೆ. ಪತ್ರಿಕೆಗಳಲ್ಲಿ ಬರುವ ಟೀಕೆಟಿಪ್ಪಣಿಗಳಿಂದಲೇ ಹಲವಾರು ನಿರ್ಣಯಗಳನ್ನು ಕೈಗೊಂಡು ಸುಧಾರಣೆಗಳನ್ನು ತಂದಿದ್ದೇವೆ ಎಂದರು.
ಸಚಿವರಾದ ವಿ.ಸುನಿಲ್ ಕುಮಾರ್, ಎಸ್. ಅಂಗಾರ, ಶಾಸಕರಾದ ರಘುಪತಿ ಭಟ್, ಮಣಿಪಾಲ್ ಮಿಡಿಯಾದ ಗೌತಮ್ ಪೈ, ಸತೀಶ್ ಪೈ, ಸಂಧ್ಯಾ ಪೈ ಹಾಗೂ ಮಾಹೆ ಸಹ ಕುಲಾಧಿಪತಿ ಎಚ್. ಎಸ್.ಬಲ್ಲಾಳ, ಎಂಜಿಎಂ ಕಾಲೇಜ್ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಹಾಜರಿದ್ದರು.
ಇದನ್ನೂ ಓದಿ | Vistara mews launch | ವಿಸ್ತಾರ ನ್ಯೂಸ್ ಕರ್ನಾಟಕದ ಗಡಿ ದಾಟಲಿ : ವಿಸ್ತಾರ ನ್ಯೂಸ್ ಚಾನೆಲ್‌ಗೆ ಮುಖ್ಯಮಂತ್ರಿ ಶುಭ ಹಾರೈಕೆ